ನವದೆಹಲಿ: ಭಾರತ-ಪಾಕಿಸ್ತಾನ ಮಾತುಕತೆ ಮುಂದುವರೆಯಬೇಕಾದರೆ ಭಯೋತ್ಪಾದನೆ ಮುಕ್ತ ವಾತಾವರಣ ನಿರ್ಮಾಣವಾಗಬೇಕು, ಪಾಕಿಸ್ತಾನ ಭಯೋತ್ಪಾದಕರಿಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು ಎಂದು ಭಾರತ ಸರ್ಕಾರ ಪುನರುಚ್ಛರಿಸಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್, ಪಾಕಿಸ್ತಾನ ಹಾಗೂ ಭಾರತದ ನಡುವೆ ಮಾತುಕತೆ ಪುನಾರಂಭಗೊಳ್ಳುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದು, ಮಾತುಕತೆ ಪುನಾರಂಭವಾಗಬೇಕೆಂದರೆ ಪಾಕಿಸ್ತಾನ ಭಯೋತ್ಪಾದನೆಯನ್ನು ಬೆಂಬಲಿಸುವುದನ್ನು ಬಿಡಬೇಕು ಎಂದು ಹೇಳಿದ್ದಾರೆ.
ಭಾರತ ಸರ್ಕಾರದ ನಿಲುವು ಯಥಾಸ್ಥಿತಿಯಲ್ಲಿದೆ. ಮಾತುಕತೆ ಮುಂದುವರೆಯಲು ಸೂಕ್ತ ವಾತಾವರಣ ನಿರ್ಮಾಣವಾಗಬೇಕಾಗುತ್ತದೆ ಎಂಬುದು ಸ್ಪಷ್ಟವಾಗಿದೆ ಎಂದು ರವೀಶ್ ಕುಮಾರ್ ಹೇಳಿದ್ದಾರೆ. 2016 ರ ಜನವರಿ ತಿಂಗಳಲ್ಲಿ ಪಾಕಿಸ್ತಾನ ಪಠಾಣ್ ಕೋಟ್ ದಾಳಿ ನಡೆಸಿದ ಬಳಿಕ ಭಾರತ-ಪಾಕ್ ಮಾತುಕತೆ ರದ್ದುಗೊಂಡಿದೆ.