ಅಹಮದಾಬಾದ್: ಸುಳ್ಳುಗಳನ್ನು ಕೇಳಿ ಕೇಳಿ ಗುಜರಾತ್ ರಾಜ್ಯ ಅಭಿವೃದ್ಧಿಗೇ ಹುಚ್ಚು ಹಿಡಿದು ಹೋಗಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಸೋಮವಾರ ಹೇಳಿದ್ದಾರೆ.
ಗುಜರಾತ್ ರಾಜ್ಯದ ಖೇಡಾದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿರುವ ಅವರು, ಗುಜರಾತ್ ರಾಜ್ಯದಲ್ಲಿ ವಿಕಾಸದ ಕಥೆ ಏನಾಯಿತು? ಇದೆಂಥಾ ಹುಚ್ಚುತನ? ಸುಳ್ಳುಗಳನ್ನು ಕೇಳಿ ಕೇಳಿ ಅಭಿವೃದ್ಧಿಗೆ ಹುಚ್ಚು ಹಿಡಿದಂತಾಗಿದೆ ಎಂದು ಹೇಳಿದ್ದಾರೆ.
ಪ್ರಧಾನಮಂದ್ರಿ ನರೇಂದ್ರ ಮೋದಿಯವರ ಗುಜರಾತ್ ಮಾದರಿ ಸಂಪೂರ್ಣವಾಗಿ ವಿಫಲಗೊಂಡಿದೆ. ಈ ಕುರಿತ ಸತ್ಯ ಇಡೀ ರಾಜ್ಯದ ಜನತೆಗೆ ತಿಳಿದಿದೆ ಎಂದು ತಿಳಿಸಿದ್ದಾರೆ.
ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಗುಜರಾತ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದೇ ಆದರೆ, ರಾಜ್ಯದಲ್ಲಿ ಅಭಿವೃದ್ಧಿಯನ್ನು ಸಾಧಿಸುತ್ತೇವೆ ಎಂದಿದ್ದಾರೆ.
ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನ್ನು ಗುರಿಯಾಗಿರಿಸಿಕೊಂಡು ವಾಗ್ದಾಳಿ ನಡೆಸಿರುವ ಅವರು, ನಾವು ನಮ್ಮ 'ಮನ್ ಕಿ ಬಾತ್' ಎಂದಷ್ಟೇ ಹೇಳುವುದಿಲ್ಲ, ನಿಮ್ಮ ಮನ್ ಕಿ ಬಾತ್ ಎಂದೂ ಹೇಳುತ್ತೇವೆಂದು ಹೇಳಿದ್ದಾರೆ.