ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ 2 ದಿನಗಳ ಅಮೇಥಿ ಪ್ರವಾಸ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಸಿಎಂ ಯೋಗಿ ಆದಿತ್ಯಾನಾಥ್ ಪಾಲ್ಗೊಂಡಿದ್ದು, ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಗುಜರಾತ್ ಅಭಿವೃದ್ಧಿ ಬಗ್ಗೆ ಪ್ರಶ್ನೆ ಮಾಡುವ ರಾಹುಲ್ ಗಾಂಧಿ ತಮ್ಮ ಸ್ವಕ್ಷೇತ್ರ ಅಮೇಥಿಯಲ್ಲಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ 3 ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳ ಕುರಿತು ಲೆಕ್ಕ ಕೇಳುವ ರಾಹುಲ್ ಗಾಂಧಿ ಅಮೇಥಿಯಲ್ಲಿ ತಮ್ಮ ಕುಟುಂಬದ ಮೂರು ತಲೆಮಾರುಗಳು ಮಾಡಿರುವ ಕೆಲಸವನ್ನು ಒಮ್ಮೆ ಹೇಳಲಿ ಎಂದು ಹೇಳಿದರು.
ಇನ್ನು ಅಮಿತ್ ಶಾ ಬಳಿಕ ಮಾತನಾಡಿದ ಸಿಎಂ ಯೋಗಿ ಆದಿತ್ಯಾನಾಥ್ ಅವರು, ಹಿಂದಿನ ಸರ್ಕಾರದಲ್ಲಿ ರೈತರು ಭೂಮಿ ಕಳೆದುಕೊಂಡರೆ ಮಾತ್ರ ಉದ್ಯೋಗ ಸೃಷ್ಟಿಯಾಗುತ್ತಿತ್ತು. ಆದರೆ ಈಗ ರೈತರ ಭೂಮಿ ಹೊರತಾಗಿಯೂ ಉದ್ಯೋಗ ಸೃಷ್ಟಿ ಮಾಡಬಹುದು ಎಂದು ಪ್ರಧಾನಿ ಮೋದಿ ತೋರಿಸಿಕೊಟ್ಟಿದ್ದಾರೆ. ಅನ್ನದಾತರ ಭೂಮಿಗಳನ್ನು ಯಾವುದೇ ಸಂಸ್ಥೆಯ ಅಥವಾ ಕುಟುಂಬದ ಆಸ್ತಿಯಾಗಿ ಮಾರ್ಪಡಿಸಲು ಬಿಡುವುದಿಲ್ಲ. ಅಳಿಯ ಅಥವಾ ಭಾವನ ಉಧ್ಯಮಕ್ಕಾಗಿ ಭೂಮಿ ನೀಡುವುದು ಈಗ ನಡೆಯುವುದಿಲ್ಲ ಎಂದು ಪರೋಕ್ಷವಾಗಿ ರಾಬರ್ಟ್ ವಾದ್ರಾ ಕುರಿತಂತೆ ವಾಗ್ದಾಳಿ ನಡೆಸಿದರು.
ಇನ್ನು ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಅಮೇಥಿಯಲ್ಲಿ ಬಿಜೆಪಿಯ ಸಕ್ರಿಯ ರಾಜಕಾರಣದಿಂದಾಗಿ ರಾಹುಲ್ ಗಾಂಧಿ ಭೇಟಿ ನೀಡುತ್ತಿದ್ದಾರೆ. ಅಮೇಥಿ ಜನರಿಗೆ ನಾನು ಮೊದಲೇ ಮಾತು ನೀಡಿದ್ದೆ. ಚುನಾವಣಾ ಸೋಲಿನ ಹೊರತಾಗಿಯೂ ನಾನು ಅಮೇಥಿಗೆ ನಿರಂತರವಾಗಿ ಭೇಟಿ ನೀಡುತ್ತೇನೆ ಎಂದು ಮತದಾರರಿಗೆ ಹೇಳಿದ್ದೆ. ಕೊಟ್ಟ ಮಾತಿನಂತೆ ನಾನು ಅಮೇಥಿಗೆ ಭೇಟಿ ನೀಡುತ್ತಿದ್ದು, ಕ್ಷೇತ್ರದ ಜನರೊಂದಿಗೆ ಸಂಪರ್ಕದಲ್ಲಿದ್ದೇನೆ. ಇದೇ ಕಾರಣಕ್ಕೆ ರಾಹುಲ್ ಗಾಂಧಿ ಕೂಡ ಕ್ಷೇತ್ರಕ್ಕೆ ಆಗಾಗ ಭೇಟಿ ನೀಡುತ್ತಿರುತ್ತಾರೆ. ಬಿಜೆಪಿಯಿಂದಾಗಿಯೇ ಗಾಂಧಿಗಳು ಈ ಹಿಂದೆಂದಿಗಿಂತಲೂ ಹೆಚ್ಚೆಚ್ಚು ಬಾರಿ ಅಮೇಥಿಗೆ ಭೇಟಿ ನೀಡುತ್ತಿದ್ದಾರೆ ಎಂದು ಸಚಿವರು ಹೇಳಿದರು.