ಚೆನ್ನೈ: ನಿವೃತ್ತ ನ್ಯಾಯಮೂರ್ತಿ ಎ.ಅರ್ಮುಗಸ್ವಾಮಿ ನೇತೃತ್ವದ ಏಕ ವ್ಯಕ್ತಿ ಆಯೋಗ ಮಾಜಿ ಮುಖ್ಯಮಂತ್ರಿ ಜೆ,ಜಯಲಲಿತಾ ಸಾವಿನ ಕುರಿತು ತನಿಖೆ ಆರಂಭಿಸಿದ್ದು, ನವೆಂಬರ್ 22ರೊಳಗೆ ಪ್ರಮಾಣಪತ್ರದ ರೂಪದಲ್ಲಿ ಮಾಹಿತಿ ನೀಡಬೇಕೆಂದು ಸೂಚನೆ ನೀಡಿದೆ.
ಆಯೋಗದ ಮುಖ್ಯಸ್ಥರು ಜಯಲಲಿತಾ ಅವರ ಚೆನ್ನೈನ ಪೊಯೆಸ್ ಗಾರ್ಡನ್ ನಿವಾಸದಲ್ಲಿ ಈ ತಿಂಗಳ 30ರಿಂದ ತನಿಖೆ ಆರಂಭಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಯಲಲಿತಾ ಅವರ ಸಾವಿನ ಬಗ್ಗೆ ವೈಯಕ್ತಿಕವಾಗಿ ತಿಳಿದುಕೊಂಡವರು ಮತ್ತು ಅದಕ್ಕೆ ಸಂಬಂಧಪಟ್ಟವರು ನವೆಂಬರ್ 22ರೊಳಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಮಾಹಿತಿಗಳನ್ನು ತಲುಪಿಸಬಹುದು. ಅಗತ್ಯ ದಾಖಲೆಗಳೊಂದಿಗೆ ಮಾಹಿತಿಗಳನ್ನು ದ್ವಿಪ್ರತಿಯಲ್ಲಿ ನೀಡಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಅರ್ಮುಗಸ್ವಾಮಿ ತಾವು ಹೊರಡಿಸಿರುವ ಸೂಚನೆಯಲ್ಲಿ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವು ಅಸಹಜವಾಗಿದ್ದು, ಈ ಬಗ್ಗೆ ತನಿಖೆಯಾಗಬೇಕೆಂದು ಎಲ್ಲೆಡೆಯಿಂದ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 25ರಂದು ತನಿಖಾ ಆಯೋಗವನ್ನು ಸ್ಥಾಪಿಸಲಾಗಿತ್ತು. ಮೂರು ತಿಂಗಳೊಳಗೆ ಅದು ತನ್ನ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ.