ಚೆನ್ನೈ; ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸುಗಳಲ್ಲೊಂದಾದ ಒಂದು ರಾಷ್ಟ್ರ ಒಂದು ಚುನಾವಣೆಗೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ಭಾನುವಾರ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ. ಅವರು, ಒಂದು ರಾಷ್ಟ್ರ, ಒಂದು ಚುನಾವಣೆಗೆ ನಾನು ಬೆಂಬಲ ವ್ಯಕ್ತಪಡಿಸುತ್ತೇನೆ. ಏಕಾಲಕ್ಕೆ ಚುನಾವಣೆ ನಡೆಸುವುದು ಉತ್ತಮವಾದ ಕಲ್ಪನೆಯಾಗಿದ್ದು, ಇದು ರಾಜಕೀಯ ಪಕ್ಷಗಳ ಹಣ ಹಾಗೂ ಸಮಯವನ್ನು ಉಳಿತಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಬಳಿಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧೆ ನಡೆಸುವುದೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಚುನಾವಣೆಗೆ ಸ್ಪರ್ಧೆಗಿಳಿಯುವ ಕುರಿತಂತೆ ಚರ್ಚೆ ನಡೆಸಿ, ನಂತರದ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ತಮಿಳುನಾಡು ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಅದು ಅಮಿತ್ ಶಾ ಅವರ ಪ್ರತಿಕ್ರಿಯೆಯಾಗಿದೆ. ಮಾಧ್ಯಮಗಳು ಶಾ ಅವರ ಬಳಿಯೇ ಹೋಗಿ ಪ್ರತಿಕ್ರಿಯೆ ಕೇಳಲಿ ಎಂದಿದ್ದಾರೆ.