ಚೆನ್ನೈ: ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ತಮಿಳುನಾಡಿನ ಕೆಲ ರೈತ ಮುಖಂಡರ ಟೀಕೆಗೆ ಗುರಿಯಾಗಿರುವ ತಮಿಳು ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಅವರು ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇಂದು ಕೆಲ ರೈತ ಸಂಘಟನೆಗಳ ಮುಖಂಡರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಕ್ಕಳ್ ನೀಧಿ ಮಯ್ಯಂ ಮುಖ್ಯಸ್ಥ, ಉದಾತ್ತ ಕಾರಣಕ್ಕಾಗಿ ಕೆಲಸ ಮಾಡಲು ಯಾವುದೇ ನಿರ್ಬಂಧವಿಲ್ಲ ಎಂದಿದ್ದಾರೆ.
ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ತಮಿಳುನಾಡು ರೈತರು ಮಾತುಕತೆ ನಡೆಸಬೇಕು ಮತ್ತು ಇತರೆ ರಾಜಕಾರಣಿಗಳನ್ನು ವಿವಾದದಿಂದ ದೂರವಿಡಬೇಕು ಎಂದು ಕಮಲ್ ಹಾಸನ್ ಅವರು ಒತ್ತಾಯಿಸಿದ್ದಾರೆ.
ಜನ ನನ್ನ ಅಗತ್ಯತೆಯನ್ನು ಪ್ರಶ್ನಿಸುತ್ತಿದ್ದಾರೆ. ಆದರೆ ಉತ್ತಮ ಕೆಲಸ ಮಾಡಲು ಯಾವುದೆ ನಿರ್ಬಂಧ ಇಲ್ಲ ಎಂದು ಕಮಲ್ ಹಾಸನ್ ಅವರು ಸಿಎಂ ಕುಮಾರಸ್ವಾಮಿ ಭೇಟಿಯನ್ನು ಸಮರ್ಥಿಸಿಕೊಂಡಿದ್ದಾರೆ.
ಕಾವೇರಿ ವಿವಾದ ಸಂಬಂಧ ಕಳೆದ ಸೋಮವಾರ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದ ಕಮಲ್ ಹಾಸನ್ ಅವರು, ಅಂತರ್ ರಾಜ್ಯ ನದಿ ನೀರು ಹಂಚಿಕೆ ಸಮಸ್ಯೆಗೆ ಕೋರ್ಟ್ ನಲ್ಲಿ ಯಾವುದೇ ಪರಿಹಾರ ಇಲ್ಲ ಎಂದಿದ್ದರು.