ರಾಜಧಾನಿ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ಅಂತಾರಾಷ್ಟ್ರೀಯ ಸೌರ ಮೈತ್ರಿ(ಇಂಟರ್‍ನ್ಯಾಷನಲ್ ಸೋಲಾರ್ ಅಲೈಯನ್ಸ್-ಐಎಸ್‍ಎ) ಸಂಸ್ಥಾಪನಾ ಸಮ್ಮೇಳನದಲ್ಲಿ ಮಾತನಾಡಿದ ಪ್ರಧಾನಿ, ಮಹತ್ವದ ಸೌರಶಕ್ತಿ ಯೋಜನೆಗಳನ್ನು ಪ್ರಕಟಿಸಿದರು. ಮಹತ್ವಾಕಾಂಕ್ಷಿ ಸೌರ ಯೋಜನೆಗಳು ಮತ್ತು ಕಾರ್ಯಕ್ರಮಗಳಿಗಾಗಿ ರಿಯಾಯಿತಿ ಹಾಗೂ ಕಡಿಮೆ ಹೊಣೆಗಾರಿಕೆಯ ಹಣಕಾಸು ಕ್ರೋಢೀಕರಣಕ್ಕಾಗಿ ಪ್ರಧಾನಿ ಮೋದಿ ಅವರು ಉದ್ಯಮಗಳಿಗೆ ಸಲಹೆ ಮಾಡಿದರು. 10 ಅಂಶಗಳ ಕ್ರಿಯಾ ಅಂಶಗಳನ್ನು ಇದೇ ಸಂದರ್ಭದಲ್ಲಿ ಮೋದಿ ಪ್ರಕಟಿಸಿದ್ದು, ಎಲ್ಲ ದೇಶಗಳಿಗೆ ಕೈಗೆಟುಕುವ ಅತ್ಯಾಧುನಿಕ ಸೌರ ತಂತ್ರಜ್ಞಾನ, ಶಕ್ತಿ ಸಂಪನ್ಮೂಲದಲ್ಲಿ ಫೋಟೋವೊಲ್ಟಾಯಿಕ್ ಸೆಲ್‍ಗಳಿಂದ ವಿದ್ಯುತ್ ಉತ್ಪಾದನೆ ಪಾಲುದಾರಿಕೆ, ಸರಳ ನಿಬಂಧನೆಗಳು ಮತ್ತು ಉತ್ಕೃಷ್ಟ ಗುಣಮಟ್ಟಗಳನ್ನು ರೂಪಿಸುವುದು, ಸೌರಶಕ್ತಿ ಯೋಜನೆಗಳಿಗೆ ಆರ್ಥಿಕ ನೆರವು ಪ್ರಕ್ರಿಯೆಗಳು ಹಾಗೂ ಉತ್ಕೃಷ್ಟತೆಗಾಗಿ ಕೇಂದ್ರಗಳ ಜಾಲ ಸೃಷ್ಟಿ ಸೇರಿದಂತೆ ಹಲವು ಅಂಶಗಳು ಈ ಕ್ರಿಯಾ ಯೋಜನೆಯಲ್ಲಿ ಒಳಗೊಂಡಿವೆ.