ನವದೆಹಲಿ: ಅಯೋಧ್ಯೆ ರಾಮಮಂದಿರ ವಿವಾದ ಕುರಿತಂತೆ ಸುಪ್ರೀಂಕೋರ್ಟ್ ಆದೇಶಕ್ಕೆ ಜನರು ತಲೆಬಾಗಬೇಕು ಎಂದು ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಶುಕ್ರವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಂವಿಧಾನ ಹಾಗೂ ಸುಪ್ರೀಂಕೋರ್ಟ್ ಮೇಲೆ ಜನರು ಬಲವಾದ ನಂಬಿಕೆಯನ್ನು ಇಟ್ಟಿದ್ದಾರೆ. ಸುಪ್ರೀಂಕೋರ್ಟ್ ಆದೇಶವನ್ನು ನಾವು ಪಾಲನೆ ಮಾಡಬೇಕು. ನ್ಯಾಯಾಲಯವನ್ನು ನಾವೆಲ್ಲರೂ ನಂಬುತ್ತೇವೆ. ಅದು ಮಾತ್ರವೇ ದೇಶವನ್ನು ಮುನ್ನಡೆಸುತ್ತದೆ ಎಂದು ಹೇಳಿದ್ದಾರೆ.
ಈ ಹಿಂದೆ ಹೇಳಿಕೆ ನೀಡಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣ ಯಾದವ್ ಅವರು, ಅಯೋಧ್ಯೆಯಲ್ಲಿಯೇ ರಾಮ ಮಂದಿರ ನಿರ್ಮಾಣವಾಗಬೇಕೆಂದು ಹೇಳಿದ್ದರು.
ನಾನು ಸುಪ್ರೀಂಕೋರ್ಟ್'ನ್ನು ನಂಬುತ್ತೇನೆ. ಆದೇಶಕ್ಕಾಗಿ ಜನವರಿವರೆಗೂ ಕಾಯಬೇಕೆಂದು ನ್ಯಾಯಾಲಯ ಹೇಳಿರುವುದೇ ಆದರೆ, ಅದಕ್ಕಾಗಿ ನಾವು ಕಾಯುತ್ತೇವೆ. ಆದರೆ, ಅಯೋಧ್ಯೆಯಲ್ಲಿಯೇ ರಾಮ ಮಂದಿರ ನಿರ್ಮಾಣವಾಗಬೇಕೆಂಬುದು ನನ್ನ ಅಭಿಪ್ರಾಯ ಎಂದು ಹೇಳಿದ್ದರು.