

ನವದೆಹಲಿ: ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮಿ ಟೂ ಅಭಿಯಾನ ಇತ್ತೀಚೆಗೆ ಹೆಚ್ಚು ಪ್ರಚಾರ ಪಡೆದುಕೊಂಡಿರುವಂತಹ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಹಿಳೆಯರು ತಮ್ಮ ಮೇಲಾಗುತ್ತಿರುವ ದೌರ್ಜನ್ಯಗಳ ಬಗ್ಗೆ ಹೇಳಿಕೊಳ್ಳಲು ಧೈರ್ಯ ತೋರುತ್ತಿರುವುದು ಮೆಚ್ಚತಕ್ಕಬೇಕಾದ ವಿಚಾರ ಎಂದು ಶ್ಲಾಘಿಸಿದ್ದಾರೆ.
ಸತ್ಯವಾದ ಸಂಗತಿಯನ್ನು ಗಟ್ಟಿ ಧ್ವನಿಯಲ್ಲಿ ಸ್ಪಷ್ಟವಾಗಿ ಹೇಳಬೇಕು, ಹಾಗಾದರೆ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದಿದ್ದಾರೆ.
ಮಹಿಳೆಯರನ್ನು ಗೌರವ, ಘನತೆಯಿಂದ ಕಾಣಬೇಕು ಎಂದು ಹೇಳಿರುವ ಅವರು, ಪ್ರತಿಯೊಬ್ಬರು ಮಹಿಳೆಯನ್ನು ಗೌರವದಿಂದ ಕಾಣುವ ಸಮಯ ಈಗಲಾದರೂ ಬಂದಿದೆ. ಮಹಿಳೆಯರನ್ನು ಗೌರವದಿಂದ ಕಾಣದವರಿಗೆ ತಕ್ಕ ಪಾಠ ಕೂಡ ಆಗಬೇಕು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ಕೇಂದ್ರ ಸಚಿವ ಎಂ ಜೆ ಅಕ್ಬರ್ ವಿರುದ್ಧ ಕನಿಷ್ಟವೆಂದರೆ ಐವರು ಪತ್ರಕರ್ತೆಯರು ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದರು. ಇದಕ್ಕೆ ವಿರೋಧ ಪಕ್ಷ ಕಾಂಗ್ರೆಸ್ ನಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು ಸಚಿವರ ರಾಜೀನಾಮೆಗೆ ಆಗ್ರಹಿಸಿದೆ.
ನೈಜೀರಿಯಾ ಪ್ರವಾಸದಲ್ಲಿರುವ ಸಚಿವ ಎಂ ಜೆ ಅಕ್ಬರ್ ಈ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.