ದಿ ಗೇಮ್ ಚೇಂಜರ್: ಡಿಆರ್ ಡಿಒದ 'ನಗ್ರಾಮ್' ರಾಡಾರ್ ನಿಗ್ರಹ ಕ್ಷಿಪಣಿಯ ಕುರಿತು ಒಂದಷ್ಟು ಮಾಹಿತಿ

ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಡಿಆರ್ ಡಿಒ ತನ್ನ ಬಹು ನಿರೀಕ್ಷಿತ ಯೋಜನೆಗಳ ಪೈಕಿ ಒಂದಾದ ರಾಡಾರ್ ನಿಗ್ರಹ ಕ್ಷಿಪಣಿಯ ಮೊದಲ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಭುವನೇಶ್ವರ್:  ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಡಿಆರ್ ಡಿಒ ತನ್ನ ಬಹು ನಿರೀಕ್ಷಿತ ಯೋಜನೆಗಳ ಪೈಕಿ ಒಂದಾದ ರಾಡಾರ್ ನಿಗ್ರಹ ಕ್ಷಿಪಣಿಯ ಮೊದಲ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಆ ಮೂಲಕ ಭಾರತೀಯ ಸೇನೆಯ ಬತ್ತಳಿಕೆಗೆ ಮತ್ತೊಂದು ವಿನೂತನ ಅಸ್ತ್ರದ ಸೇರ್ಪಡೆಯಾಗುವ ಕಾಲ ಸನ್ನಿಹಿತವಾಗಿದ್ದು, ಇಂದು ಡಿಆರ್ ಡಿಒ ನಡೆಸಿದ ನಗ್ರಾಮ್ (ಹೊಸ ತಲೆಮಾರಿನ ರಾಡಾರ್ ನಿಗ್ರಹ ಕ್ಷಿಪಣಿ)ನ ಮೊಟ್ಟ ಮೊದಲ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ. ಭಾರತೀಯ ಸೇನೆಯ ಸುಖೋಯ್ 30ಎಂಕೆಐ ಯುದ್ಧ ವಿಮಾನದ ಮೂಲಕ ಕ್ಷಿಪಣಿ ಪರೀಕ್ಷೆ ನಡೆಸಲಾಗಿದ್ದು, ಪರೀಕ್ಷಾರ್ಥ ಉಡಾವಣೆ ಸಂಪೂರ್ಣ ಯಶಸ್ವಿಯಾಗಿದೆ.
ಇನ್ನು ಈ ಪರೀಕ್ಷೆಯಲ್ಲಿ ಬಳಸಲಾದ NGARM (new-generation anti-radiation missile) ಕ್ಷಿಪಣಿಯ ಭಾರತೀಯ ಸೇನೆಗೆ ಭವಿಷ್ಯದಲ್ಲಿ ಸೇರುವ ಪ್ರಬಲ ಅಸ್ತ್ರವಾಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. 
2012ರಲ್ಲಿ ಕ್ಷಿಪಣಿ ಸಂಶೋಧನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ ಬೆನ್ನಲ್ಲೇ ಈ ಬಹು ನಿರೀಕ್ಷಿತ ಕ್ಷಿಪಣಿಯ ಸಂಶೋಧನೆ ಆರಂಭವಾಗಿತ್ತು. 2016 ಫೆಬ್ರವರಿಯಲ್ಲಿ ಬಿಡಿಭಾಗಗಳ ಸಂಶೋಧನೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಕಳೆದ 2018ರ ಡಿಸೆಂಬರ್ ನಲ್ಲೇ ಇದರ ಪರೀಕ್ಷಾರ್ಥ ಉಡಾವಣೆ ಮಾಡಬೇಕಿತ್ತಾದರೂ ತಾಂತ್ರಿಕ ಕಾರಣಗಳಿಂದಾಗಿ ತಿಂಗಳ ಕಾಲ ಮುಂದೂಡಬೇಕಾಯಿತು. 
NGARM ಕ್ಷಿಪಣಿಯ ವಿಶೇಷತೆಗಳೇನು?
ಭಾರತೀಯ ವಾಯು ಸೇನೆಯ ಮಟ್ಟಿಗೆ ಈ NGARM ಕ್ಷಿಪಣಿಯು ಗೇಮ್ ಚೇಂಜರ್ ಕ್ಷಿಪಣಿ ಎಂದೇ ಖ್ಯಾತಿ ಗಳಿಸಿದೆ. ಸಂಪೂರ್ಣ ಸ್ವದೇಶಿ ನಿರ್ಮಿತವಾಗಿರುವ ಈ ಕ್ಷಿಪಣಿಯು ವಾಯುಯಿಂದ ಭೂಮಿಯ ಮೇಲಿನ ಗುರಿಗಳನ್ನು ಯಶಸ್ವಿಯಾಗಿ ತಲುಪಬಲ್ಲ, ಶತೃಪಾಳಯದ ರಾಡಾರ್ ವ್ಯವಸ್ಥೆಗಳನ್ನು, ಟ್ರಾಕಿಂಗ್ ಮತ್ತು ಕಮ್ಯುನಿಕೇಷನ್ (ಸಂವಹನ) ಸಿಸ್ಟಂಗಳನ್ನು ಕ್ಷಣಮಾತ್ರದಲ್ಲಿ ಹೊಡೆದುರುಳಿಸಬಲ್ಲ ಸಾಮರ್ಥ್ಯ ಹೊಂದಿದೆ. 
NGARM ಕ್ಷಿಪಣಿಯು 140 ಕೆಜಿ ತೂಕ ಹೊಂದಿದ್ದು, ಬರೊಬ್ಬರಿ 100 ರಿಂದ 125 ಕಿ.ಮೀ ದೂರದವರೆಗಿನ ಯಾವುದೇ ಗುರಿಗಳನ್ನೂ ಹೊಡೆದುರುಳಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಸಂಪೂರ್ಣ ವಿನ್ಯಾಸ ಮತ್ತು ಅಭಿವೃದ್ಧಿ ಡಿಆರ್ ಡಿಒ ನದ್ದೇ ಆಗಿದೆ. ದೇಶದಲ್ಲಿ ಈ ಮಾದರಿಯ ಕ್ಷಿಪಣಿಗಳಲ್ಲಿ ಇದೇ ಮೊದಲ ಪ್ರಯತ್ನವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 
ಶತೃಪಾಳಯದ ರಾಡಾರ್ ಗಳಿಂದ ಬರುವ ಸಿಗ್ನಲ್ ಗಳನ್ನು ಗ್ರಹಿಸಿ ಇದು ದಾಳಿ ನಡೆಸುತ್ತದೆ. ಶತೃಪಾಳಯದ ರಾಡಾರ್, ಜಾಮರ್ ಗಳು, ಟ್ರಾಕಿಂಗ್ ಮತ್ತು ಕಮ್ಯುನಿಕೇಷನ್ (ಸಂವಹನ) ಸಿಸ್ಟಂಗಳ ಸಿಗ್ನಲ್ ದೊರೆಯುತ್ತಿದ್ದಂತೆಯೇ ನಿಯಂತ್ರಣ ಕೊಠಡಿಗೆ ಸಂದೇಶ ರವಾನಿಸಿ ದಾಳಿ ಸಿದ್ದವಾಗುತ್ತದೆ. ದಾಳಿ ನಡೆಸಲು ಅನುಮತಿ ಸಿಗುತ್ತಿದ್ದಂತೆಯೇ ಶರವೇಗದಲ್ಲಿ ನುಗ್ಗುವ ಈ ಕ್ಷಿಪಣಿ ಶತೃಪಾಳಯಕ್ಕೆ ಪ್ರತಿಕ್ರಿಯಿಸುವ ಸಮಯಾವಕಾಶವನ್ನೂ ನೀಡದೇ ಕೆಲವೇ ಸೆಕೆಂಡುಗಳಲ್ಲಿ ಎಲ್ಲವನ್ನೂ ಧ್ವಂಸ ಮಾಡಿಬಿಡುತ್ತದೆ.
ಪ್ರಸ್ತುತ ಪರೀಕ್ಷೆ ನಡೆಸಿರುವ ಕ್ಷಿಪಣಿಯು ಪ್ರಾಥಮಿಕ ಹಂತದ ಕ್ಷಿಪಣಿಯಾಗಿದ್ದು, ಮುಂದಿನ ದಿನಗಳಲ್ಲಿ ಇದರ ಉನ್ನತ ಶ್ರೇಣಿಯ ಕ್ಷಿಪಣಿಗಳ ಸಂಶೋಧನೆ ಮಾಡುವುದಾಗಿ ಡಿಆರ್ ಡಿಒ ಹೇಳಿದೆ. ಪ್ರಸ್ತುತ ಪರೀಕ್ಷೆ ನಡೆಸಿರುವ ಕ್ಷಿಪಣಿಯು ಪ್ರಾಥಮಿಕ ಹಂತದ ದ್ರವ-ಚಾಲಿತ ಇಂಜಿನ್ ವ್ಯವಸ್ಥೆಯನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ದ್ವಿ ಇಂಧನ ವ್ಯವಸ್ಥೆ ಅಳವಡಿಸುವ ಸಾಧ್ಯತೆ ಇದೆ. ಅವಶ್ಯಕತೆಗೆ ಅನುಗುಣವಾಗಿ ಇಂಧನ ವ್ಯವಸ್ಥೆ ಅಳವಡಿಸ ಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಲಘು ಯುದ್ಧ ವಿಮಾನಗಳಲ್ಲಿಯೂ ಇದು ಬಳಕೆಗೆ ಯೋಗ್ಯವಾಗಿದ್ದು, ಪ್ರಸ್ತುತ ಈ ಕ್ಷಿಪಣಿಯನ್ನು ಸುಖೋಯ್ ಎಂಕೆಐ ಮತ್ತು ತೇಜಸ್ ಯುದ್ಧ ವಿಮಾನಗಳಲ್ಲಿ ಅಳವಡಿಸಿ ಪರೀಕ್ಷೆ ನಡೆಸಲಾಗುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com