

ನವದೆಹಲಿ: ಪೂರ್ವ ಲಡಾಕ್ ನ ಪಾಂಗೊಂಗ್ ಟ್ಸೊ ಮತ್ತು ಇತರ ಕೆಲ ಪ್ರದೇಶಗಳಲ್ಲಿ ಸೇನಾ ಪಡೆ ನಿಯೋಜನೆ,ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಗೊಂದಲಕ್ಕೆ ತೆರೆ ಎಳೆಯಲು ಭಾರತ ಮತ್ತು ಚೀನಾ ಸೇನಾಪಡೆಗಳ ಮೇಜರ್ ಜನರಲ್ ಮಟ್ಟದ ಮಾತುಕತೆ ನಡೆಯಿತು.
ಸುಮಾರು ನಾಲ್ಕೂವರೆ ಗಂಟೆಗಳ ಕಾಲ ನಡೆದ ಸಭೆಯಲ್ಲಿ ಭಾರತದ ಸೇನಾಪಡೆ ನಿಯೋಗ, ಪೂರ್ವ ಲಡಾಕ್ ನ ಗಡಿ ವಾಸ್ತವ ನಿಯಂತ್ರಣ ರೇಖೆಯಲ್ಲಿ ಹಿಂದಿನ ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂದು ಮತ್ತು ಗಡಿಯಿಂದ ಚೀನಾದ ಸೇನಾಪಡೆಗಳನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿತು.
ಸಕಾರಾತ್ಮಕ ವಾತಾವರಣದಲ್ಲಿ ಮೇಜರ್ ಜನರಲ್ ಮಟ್ಟದ ಮಾತುಕತೆ ನಡೆದಿದ್ದು, ಶಾಂತಿಯುತವಾಗಿ ಗಡಿ ಬಿಕ್ಕಟ್ಟನ್ನು ಕೊನೆಗಾಣಿಸಲು ಗಡಿಯ ಕೆಲವು ಪ್ರದೇಶಗಳಿಂದ ಈಗಾಗಲೇ ಸೇನಾಪಡೆಗಳನ್ನು ಹಿಂತೆಗೆದುಕೊಂಡಿವೆ.ಆದರೆ ಪಾಂಗೊಂಗ್ ಟ್ಸೊ, ದೌಲಟ್ ಬೆಗ್ ಒಲ್ಡಿ ಮತ್ತು ಡೆಮ್ಚೊಕ್ ಪ್ರದೇಶಗಳಲ್ಲಿ ಮಾತ್ರ ಇನ್ನೂ ಸೇನಾಪಡೆಗಳು ನಿಯೋಜನೆಯಲ್ಲಿದ್ದು ಅಲ್ಲಿನ ಉದ್ವಿಗ್ನ ಪರಿಸ್ಥಿತಿ ಕಡಿಮೆಯಾಗಿಲ್ಲ.
ಗಡಿಯುದ್ದಕ್ಕೂ ಉದ್ವಿಗ್ನ ಪರಿಸ್ಥಿತಿಯನ್ನು ನಿಯಂತ್ರಿಸಿ ಸರಾಗ ವಾತಾವರಣ ನಿರ್ಮಾಣ ಮಾಡಲು ಕಳೆದ ಜೂನ್ 6 ರಂದು ಉಭಯ ದೇಶಗಳ ಹಿರಿಯ ಮಿಲಿಟರಿ ಅಧಿಕಾರಿಗಳು ಮಾತುಕತೆ ನಡೆಸಿ ಸಕಾರಾತ್ಮಕ ಒಮ್ಮತಕ್ಕೆ ಬಂದಿವೆ. ಗಡಿಯುದ್ದಕ್ಕೂ ಪರಿಸ್ಥಿತಿಯನ್ನು ಸರಾಗಗೊಳಿಸುವ ನಿಟ್ಟಿನಲ್ಲಿ ಎರಡೂ ದೇಶಗಳು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ನಿನ್ನೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನೈಂಗ್ ಬೀಜಿಂಗ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.