ಕೊವಿಡ್-19: ದೇಶದಲ್ಲಿ ಇಂದು ಅತೀ ಕಡಿಮೆ ಪಾಸಿಟಿವ್ ಪ್ರಕರಣ ದಾಖಲು, ಸಾವಿನ ಪ್ರಮಾಣ ಶೇ. 3.1

ದೇಶದಲ್ಲಿ ಮಹಾಮಾರಿ ಕೊರೋನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಆದರೆ ಶನಿವಾರ ಅತ್ಯಂತ ಕಡಿಮೆ ಕೊವಿಡ್-19 ಪಾಸಿಟಿವ್​ ಪ್ರಕರಣಗಳು ವರದಿಯಾಗಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ದೇಶದಲ್ಲಿ ಮಹಾಮಾರಿ ಕೊರೋನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಆದರೆ ಶನಿವಾರ ಅತ್ಯಂತ ಕಡಿಮೆ ಕೊವಿಡ್-19 ಪಾಸಿಟಿವ್​ ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ಸೋಂಕಿತರ ಸಂಖ್ಯೆ 100 ದಾಟಿದ ನಂತರ ಇದೇ ಮೊದಲ ಬಾರಿಗೆ ಕೊವಿಡ್-19 ಪ್ರಕರಣಗಳು ಶೇ.6 ರಷ್ಟು ಕಡಿಮೆಯಾಗಿದೆ. ಕಳೆದ ಒಂದೆರಡು ವಾರಗಳಿಗೆ ಹೋಲಿಸಿದರೆ ಇಂದು ಅತೀ ಕಡಿಮೆ ಕೇಸ್​ಗಳು ದಾಖಲಾಗಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ದೇಶದಲ್ಲಿ ಲಾಕ್ ಡೌನ್ ಜಾರಿಗೊಳಿಸುವ ಮುನ್ನ ಕೇವಲ 3.4 ದಿನದಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆಯು ಡಬಲ್ ಆಗುತ್ತಿತ್ತು. ಈಗ ಸೋಂಕಿತರ ಸಂಖ್ಯೆ ದುಪ್ಪಟ್ಟಾಗಲು 9.1 ದಿನಗಳು ಬೇಕಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ದೇಶದಲ್ಲಿ ಕೊರೋನಾ ವೈರಸ್(ಕೊವಿಡ್ -19) ಸೋಂಕಿತರ ಪೈಕಿ 5,000ಕ್ಕೂ ಹೆಚ್ಚು ಜನರು ಗುಣಮುಖರಾಗಿದ್ದು, ಇದರೊಂದಿಗೆ ಚೇತರಿಕೆ ಪ್ರಮಾಣ ಶೇ. 20.66 ಕ್ಕೆ ಏರಿಕೆಯಾಗಿದೆ. ಈ ನಡುವೆ ಒಟ್ಟು ಸೋಂಕಿತ ಪ್ರಕರಣಗಳ ಪೈಕಿ ಸಾವಿನ ಪ್ರಮಾಣ ಸುಮಾರು ಶೇ 3.1ರಷ್ಟಿದೆ. 

ದೇಶದಲ್ಲಿ ಕೊರೋನಾ ವೈರಸ್‍ನ ಸದ್ಯದ ಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹರ್ಷವರ್ಧನ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಚಿವರ ತಂಡದ 13ನೇ ಸಭೆ ಶನಿವಾರ ಇಲ್ಲಿ ನಡೆಯಿತು.

ಈವರೆಗೆ 5,062 ಜನರು ಚೇತರಿಕೆ ಕಾಣುವುದರೊಂದಿಗೆ ಶೇ. 20.66 ರಷ್ಟು ರೋಗಿಗಳನ್ನು ಗುಣಪಡಿಸಲಾಗಿದೆ ಶುಕ್ರವಾರದಿಂದ 1429 ಹೊಸ ಪ್ರಕರಣಗಳು ವರದಿಯಾಗಿದೆ. ಅಲ್ಲದೆ, ಒಟ್ಟು 24,506 ಜನರಲ್ಲಿ ಕೊವಿಡ್-19 ಸೋಂಕು ದೃಢಪಟ್ಟಿದೆ ಎಂದು ಸಚಿವರ ತಂಡಕ್ಕೆ ಮಾಹಿತಿ ನೀಡಲಾಯಿತು.

ಸದ್ಯ ಸೋಂಕಿನಿಂದ ಸಾವಿನ ಪ್ರಮಾಣ ಶೇ. 3.1 ರಷ್ಟಿದ್ದರೆ, ಚೇತರಿಕೆ ಪ್ರಮಾಣ ಶೇ. 20 ಕ್ಕಿಂತ ಹೆಚ್ಚಿದೆ. ಇದು ಅನೇಕ ದೇಶಗಳಿಗೆ ಹೋಲಿಸಿದರೆ ಉತ್ತಮವಾಗಿದೆ. ದೇಶದಲ್ಲಿ ಕ್ಲಸ್ಟರ್ ನಿರ್ವಹಣೆ ಮತ್ತು ಕಂಟೈನ್‍ಮೆಂಟ್‍ ಕಾರ್ಯ ತಂತ್ರದೊಂದಿಗೆ ಲಾಕ್‍ಡೌನ್‍ ಜಾರಿ ಕ್ರಮವು ಸಕಾರಾತ್ಮಕ ಪರಿಣಾಮವೆಂದು ಪರಿಗಣಿಸಬಹುದು. 

ಸಭೆಯಲ್ಲಿ ಡಾ.ಹರ್ಷವರ್ಧನ್ ಅವರಲ್ಲದೆ, ನಾಗರಿಕ ವಿಮಾನಯಾನ ಸಚಿವ ಶ್ರೀ ಹರ್‍ದೀಪ್‍ ಸಿಂಗ್ ಪುರಿ, ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್, ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಮನ್ಸುಕ್ ಮಾಂಡವಿಯಾ ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಮತ್ತು ರಕ್ಷಣಾ ಮುಖ್ಯಸ್ಥ ಬಿಪಿನ್ ರಾವತ್ ಉಪಸ್ಥಿತರಿದ್ದರು.

ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್, ಉನ್ನತಮಟ್ಟದ 6ನೇ ಸಚಿವರ ತಂಡದ ಅಧ್ಯಕ್ಷ ಸಿ ಕೆ ಮಿಶ್ರಾ, (ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ) ಮತ್ತು 2ನೇ ತಂಡದ ಅಧ್ಯಕ್ಷರು, ಡಾ. ಅರುಣ್ ಕೆ ಪಾಂಡ ಸಭೆಯಲ್ಲಿ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com