

ಮುಂಬೈ: ಮಹಾರಾಷ್ಟ್ರದಲ್ಲಿ ತರಬೇತಿ ಹೆಲಿಕಾಪ್ಚರ್ ಪತನವಾಗಿದ್ದು ಕಾಪ್ಟರ್ ನಲ್ಲಿದ್ದ ಓರ್ವ ಪೈಲಟ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಮಹಾರಾಷ್ಟ್ರದ ಜಲಗಾಂವ್ ನಲ್ಲಿ ಈ ಘಟನೆ ನಡೆದಿದ್ದು, ಎನ್ಎಂಐಎಂಎಸ್ ಅಕಾಡೆಮಿ ಆಫ್ ಏವಿಯೇಷನ್ ಗೆ ಸೇರಿದ ಹೆಲಿಕಾಪ್ಟರ್ ಪತನವಾಗಿದೆ. ದುರ್ಘಟನೆಯಲ್ಲಿ ಓರ್ವ ಬೋಧಕ ಪೈಲಟ್ ಸಾವನ್ನಪ್ಪಿದ್ದು, ತರಬೇತಿ ಪಡೆಯುತ್ತಿದ್ದ ವ್ಯಕ್ತಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೆಲಿಕಾಪ್ಟರ್ ಪತನಲಾಗುತ್ತಿದ್ದಂತೆಯೇ ಸ್ಥಳೀಯರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಗಾಯಾಳು ಪೈಲಟ್ ಅನ್ನು ಹೊರಗೆಳೆದು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಕೇಂದ್ರ ವಿಮಾನಯಾನ ಸಚಿವರಿಂದ ಸಂತಾಪ
ಇನ್ನು ದುರಂತಕ್ಕೆ ಸಂಬಂಧಿಸಿದಂತೆ ಸಂತಾಪ ಸೂಚಿಸಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂದ್ಯ ಆಘಾತ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಘಟನಾ ಸ್ಥಳಕ್ಕೆ ತನಿಖಾಧಿಕಾರಿಗಳು ದೌಡಾಯಿಸಿದ್ದು ತನಿಖೆ ನಡೆಸಿದ್ದಾರೆ. ಅಲ್ಲದೆ ಗಾಯಾಳು ಪೈಲಟ್ ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.