'ಮೇಡ್ ಇನ್ ರಷ್ಯಾ' ಇನ್ಮುಂದೆ 'ಮೇಡ್ ಇನ್ ಇಂಡಿಯಾ': ಉತ್ತರ ಪ್ರದೇಶದ ಅಮೇಥಿಯಲ್ಲಿ ಎಕೆ-203 ರೈಫಲ್ ತಯಾರಿಕಾ ಘಟಕ ಸ್ಥಾಪನೆ!

ಸೇನಾಪಡೆಗಳ ಬಲಿಷ್ಠ ಶಸ್ತ್ರಗಳಲ್ಲಿ ಒಂದಾಗಿರುವ ರಷ್ಯಾ ನಿರ್ಮಿತ ಎಕೆ-203 ವಿಧ್ವಂಸಕ ಬಂದೂಕು ಇನ್ನು ಮುಂದೆ ಭಾರತದಲ್ಲೇ ತಯಾರಾಗಲಿದೆ. ಸುಮಾರು 5 ಲಕ್ಷ ಎಕೆ 203 ರೈಫಲ್ ತಯಾರಿಕೆಗೆ ಕೇಂದ್ರ ಸರ್ಕಾರ ಶನಿವಾರ ಅನುಮೋದನೆ ನೀಡಿದೆ.
ಎಕೆ 203 ರೈಫಲ್
ಎಕೆ 203 ರೈಫಲ್
Updated on

ನವದೆಹಲಿ: ಸೇನಾಪಡೆಗಳ ಬಲಿಷ್ಠ ಶಸ್ತ್ರಗಳಲ್ಲಿ ಒಂದಾಗಿರುವ ರಷ್ಯಾ ನಿರ್ಮಿತ ಎಕೆ-203 ವಿಧ್ವಂಸಕ ಬಂದೂಕು ಇನ್ನು ಮುಂದೆ ಭಾರತದಲ್ಲೇ ತಯಾರಾಗಲಿದೆ. ಸುಮಾರು 5 ಲಕ್ಷ ಎಕೆ 203 ರೈಫಲ್ ತಯಾರಿಕೆಗೆ ಕೇಂದ್ರ ಸರ್ಕಾರ ಶನಿವಾರ ಅನುಮೋದನೆ ನೀಡಿದೆ.

ಮೂಲಗಳ ಪ್ರಕಾರ ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆಗೆ ದೊಡ್ಡ ಉತ್ತೇಜನ ನೀಡುವ ಯೋಜನೆಯಡಿಯಲ್ಲಿ ಉತ್ತರ ಪ್ರದೇಶದ ಅಮೇಥಿಯ ಕೊರ್ವಾದಲ್ಲಿ ಎಕೆ 203 ಅಸಾಲ್ಟ್ ರೈಫಲ್ ತಯಾರಿಕಾ ಘಟಕ ತಲೆ ಎತ್ತಲಿದೆ. ಇಲ್ಲಿ ಸುಮಾರು ಐದು ಲಕ್ಷ ಎಕೆ 203 ರೈಫಲ್ ಗಳನ್ನು ತಯಾರಿಸಲಾಗುತ್ತದೆ ಎಂದು ಹೇಳಲಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರ ಕೂಡ ಅಧಿಕೃತ ಅನುಮೋದನೆ ನೀಡಿದೆ.

ಈ ಹಿಂದೆ ರಷ್ಯಾದೊಂದಿಗೆ ಎಕೆ 203 ರೈಫಲ್ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದ ಭಾರತ ಸರ್ಕಾರ ಇದೀಗ ಇದೇ ರಷ್ಯಾ ಸಹಭಾಗಿತ್ವದಲ್ಲೇ ಈ ಎಕೆ 203 ರೈಫಲ್ ತಯಾರಿಕಾ ಘಟಕ ನಿರ್ಮಾಣಕ್ಕೆ ಚಾಲನೆ ನೀಡಿದೆ. ಆ ಮೂಲಕ ಇದು ಖರೀದಿಯಿಂದ (ಜಾಗತಿಕ) ಮೇಕ್ ಇನ್ ಇಂಡಿಯಾಕ್ಕೆ ರಕ್ಷಣಾ ಸ್ವಾಧೀನದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಮಾದರಿ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ. ಈ ಪ್ರಯತ್ನವನ್ನು ರಷ್ಯಾದ ಸಹಭಾಗಿತ್ವದಲ್ಲಿ ಮಾಡಲಾಗುತ್ತದೆ ಮತ್ತು ರಕ್ಷಣಾ ವಲಯದಲ್ಲಿ ಉಭಯ ದೇಶಗಳ ನಡುವಿನ ಆಳವಾದ ಪಾಲುದಾರಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೊಸ ಉದ್ಯೋಗ ಸೃಷ್ಟಿ, ಸಾವಿರಾರು ಉದ್ಯೋಗಾವಕಾಶಕ್ಕೆ ಸಹಕಾರ
ಇಂಡೋ-ರಷ್ಯನ್ ರೈಫಲ್ಸ್ ಪ್ರೈವೇಟ್ ಲಿಮಿಟೆಡ್ (IRRPL) ಎಂಬ ವಿಶೇಷ ಉದ್ದೇಶದ ಜಂಟಿ ಉದ್ಯಮದಿಂದ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದ್ದು, ಇದನ್ನು ಭಾರತದ ಹಿಂದಿನ OFB [ಈಗ ಅಡ್ವಾನ್ಸ್ಡ್ ವೆಪನ್ಸ್ ಅಂಡ್ ಇಕ್ವಿಪ್ಮೆಂಟ್ ಇಂಡಿಯಾ ಲಿಮಿಟೆಡ್ (AWEIL) ಮತ್ತು ಮ್ಯೂನಿಷನ್ಸ್ ಇಂಡಿಯಾ ಲಿಮಿಟೆಡ್ (MIL)] ಮತ್ತು ರೊಸೊಬೊರೊನೆಕ್ಸ್‌ಪೋರ್ಟ್ (RoE) ನೊಂದಿಗೆ ರಚಿಸಲಾಗಿದೆ. ಈ ಯೋಜನೆಯು ವಿವಿಧ ಎಂಎಸ್‌ಎಂಇಗಳು ಮತ್ತು ಇತರ ರಕ್ಷಣಾ ಉದ್ಯಮಗಳಿಗೆ ಕಚ್ಚಾ ವಸ್ತು ಮತ್ತು ಘಟಕಗಳ ಪೂರೈಕೆಗಾಗಿ ವ್ಯಾಪಾರ ಅವಕಾಶಗಳನ್ನು ಒದಗಿಸುತ್ತದೆ. ಇದು ಹೊಸ ಉದ್ಯೋಗಾವಕಾಶಗಳಿಗೆ ಕಾರಣವಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎನ್ಸಾಸ್ ಬದಲಿಗೆ ಘಾತುಕ ಹಾನಿ ಮಾಡಬಲ್ಲ 'ಎಕೆ 203'
ಪ್ರಸ್ತುತ ಭಾರತೀಯ ಸೇನೆಯ ಬತ್ತಳಕೆಯಲ್ಲಿರುವ ಮೂರು ದಶಕಗಳ ಹಿಂದೆ ಸೇರ್ಪಡೆಗೊಂಡ ಹಳೆಯ ಇನ್ಸಾಸ್ ರೈಫಲ್ ಗಳಿಗೆ ಬದಲಿಗೆ ಎಕೆ 203 ಅಸ್ಸಾಲ್ಟ್ ರೈಫಲ್ ಗಳನ್ನು ನೀಡುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಈ ಬಗ್ಗೆ ಕಳೆದ ಹಲವು ದಶಕಗಳಿಂದಲೂ ಸೇನಾ ವಲಯದಿಂದ ಸಾಕಷ್ಟು ಮನವಿ ಬಂದಿತ್ತು. ಇದೀಗ ಕೇಂದ್ರ ಸರ್ಕಾರ ಇನ್ಸಾಸ್ ರೈಫಲ್ ಗಳನ್ನು ಬದಲಿಸಲು ಮುಂದಾಗಿದ್ದು, ಶೀಘ್ರದಲ್ಲೇ ನಮ್ಮ ಸೈನಿಕರ ಕೈಗೆ ಘಾತುಕ ಹಾನಿ ಮಾಡಬಲ್ಲ ಎಕೆ 203 ಅಸ್ಸಾಲ್ಟ್ ರೈಫಲ್ ಗಳು ಕೈ ಸೇರಲಿವೆ. ಇದು ಭಯೋತ್ಪಾದನೆ ನಿಗ್ರಹ ಮತ್ತು ಬಂಡಾಯ ನಿಗ್ರಹ ಕಾರ್ಯಾಚರಣೆಗಳಲ್ಲಿ ಭಾರತೀಯ ಸೇನೆಯ ಕಾರ್ಯಾಚರಣೆಯ ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತದೆ.

ಅತ್ಯಾಧುನಿಕ ತಂತ್ರಜ್ಞಾನದ ರೈಫಲ್
7.62 X 39mm ಕ್ಯಾಲಿಬರ್ ಹೊಂದಿರುವ AK-203 ರೈಫಲ್‌ಗಳು 300 ಮೀಟರ್‌ಗಳ ಪರಿಣಾಮಕಾರಿ ವ್ಯಾಪ್ತಿಯೊಂದಿಗೆ, ಹಗುರವಾದ, ದೃಢವಾದ ಮತ್ತು ಸಾಬೀತಾಗಿರುವ ತಂತ್ರಜ್ಞಾನದೊಂದಿಗೆ ಬಳಸಲು ಅತ್ಯುತ್ತಮವಾಗಿದೆ. ಆಧುನಿಕ ಆಕ್ರಮಣಕಾರಿ ರೈಫಲ್‌ಗಳನ್ನು ಬಳಸಲು ಸೈನಿಕರಿಗೆ ಸುಲಭವಾಗಿದೆ. ಇದು ಪ್ರಸ್ತುತ ಮತ್ತು ಯೋಜಿತ ಕಾರ್ಯಾಚರಣೆಯ ಸವಾಲುಗಳನ್ನು ಸಮರ್ಪಕವಾಗಿ ಎದುರಿಸಲು ಸೈನಿಕರ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com