ಭಾರತದಲ್ಲಿ 5ನೇ ಓಮಿಕ್ರಾನ್ ಕೇಸ್ ಪತ್ತೆ: ತಾಂಜಾನಿಯಾದಿಂದ ದೆಹಲಿಗೆ ಬಂದಿದ್ದ ವ್ಯಕ್ತಿಯಲ್ಲಿ ಸೋಂಕು ದೃಢ!
ಭಾರತದಲ್ಲಿ ಓಮಿಕ್ರಾನ್ ರೂಪಾಂತರ ಸೋಂಕಿನ ಪ್ರಕರಣಗಳು ದಿನೇದಿನೇ ಏರಿಕೆಯಾಗುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 5ನೇ ಪ್ರಕರಣ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಈ ಮೂಲಕ ದೆಹಲಿಯಲ್ಲಿ ಮೊದಲನೇ ಓಮಿಕ್ರಾನ್ ಪ್ರಕರಣ ಪತ್ತೆಯಾದಂತಾಗಿದೆ.
Published: 05th December 2021 12:30 PM | Last Updated: 05th December 2021 12:30 PM | A+A A-

ಸಂಗ್ರಹ ಚಿತ್ರ
ನವದೆಹಲಿ: ಭಾರತದಲ್ಲಿ ಓಮಿಕ್ರಾನ್ ರೂಪಾಂತರ ಸೋಂಕಿನ ಪ್ರಕರಣಗಳು ದಿನೇದಿನೇ ಏರಿಕೆಯಾಗುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 5ನೇ ಪ್ರಕರಣ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಈ ಮೂಲಕ ದೆಹಲಿಯಲ್ಲಿ ಮೊದಲನೇ ಓಮಿಕ್ರಾನ್ ಪ್ರಕರಣ ಪತ್ತೆಯಾದಂತಾಗಿದೆ.
ಸೋಂಕಿತನನ್ನು ಎಲ್ಎನ್ಜೆಪಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇವರು ತಾಂಜಾನಿಯದಿಂದ ಬಂದವರಾಗಿದ್ದರೆಂದು ತಿಳಿದುಬಂದಿದೆ. ಇದರ ಜೊತೆಗೆ ಇನ್ನೂ 17 ಮಂದಿಯಲ್ಲಿ ಕೊವಿಡ್ 19 ಸೋಂಕು ಕಾಣಿಸಿಕೊಂಡಿದ್ದು, ಅವರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಮಾಹಿತಿ ನೀಡಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಓಮಿಕ್ರಾನ್ ಸೋಂಕು ಭಾರತದಲ್ಲಿ ಮೊದಲು ಕರ್ನಾಟಕದ ಬೆಂಗಳೂರಿನಲ್ಲಿ ಕಾಣಿಸಿಕೊಂಡಿತ್ತು. ಬೆಂಗಳೂರಿನಲ್ಲಿ ಇಬ್ಬರಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾಗಿತ್ತು.
ಇದೂವರೆಗೆ ಕರ್ನಾಟಕದಲ್ಲಿ 2, ಗುಜರಾತ್ನಲ್ಲಿ ಒಂದು ಪ್ರಕರಣ, ಮುಂಬೈನಲ್ಲಿ 1 ಓಮಿಕ್ರಾನ್ ಕೇಸ್ ದೃಢಪಟ್ಟಿತ್ತು. ಸದ್ಯ ರಾಷ್ಟ್ರ ರಾಜಧಾನಿಯಲ್ಲಿ ಇನ್ನೊಂದು ಕೇಸ್ ಪತ್ತೆಯಾಗಿದ್ದು, ದೇಶದಲ್ಲಿ ಹೊಸ ರೂಪಾಂತರಿ ತಳಿಯ ಕೇಸ್ಗಳು 5ಕ್ಕೆ ಏರಿಕೆ ಕಂಡಿವೆ.
ಓಮಿಕ್ರಾನ್ ಈಗಾಗಲೇ 30ಕ್ಕೂ ಹೆಚ್ಚು ದೇಶಗಳಲ್ಲಿ ಪತ್ತೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯೂ ಕೂಡ ಮುನ್ನೆಚ್ಚರಿಕೆ ವಹಿಸಿದೆ. ಈ ಸೋಂಕು ಅಷ್ಟೊಂದು ಮಾರಣಾಂತಿಕವಲ್ಲದೆ ಇದ್ದರೂ, ಮೂರನೇ ಅಲೆ ಉಂಟು ಮಾಡುವಷ್ಟು ಪ್ರಸರಣ ಸಾಮರ್ಥ್ಯ ಹೊಂದಿದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಮಧ್ಯೆ ಭಾರತದಲ್ಲೂ ಕೂಡ ಓಮಿಕ್ರಾನ್ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.