ಮತ್ತೊಂದು ವಿದ್ಯುತ್ ಚಾಲಿತ ಬೈಕ್ ದುರಂತ: ಬ್ಯಾಟರಿ ಸ್ಫೋಟದಿಂದ ವ್ಯಕ್ತಿ ಸಾವು, ಮಹಿಳೆ ಸೇರಿ ಮೂವರು ಗಂಭೀರ!!
ದೇಶದಲ್ಲಿ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ದುರಂತ ಸರಣಿ ಮುಂದುವರೆದಿದ್ದು, ಈ ಬಾರಿ ಆಂಧ್ರ ಪ್ರದೇಶದಲ್ಲಿ ಇ-ಬೈಕ್ ಬ್ಯಾಟರಿ ಸ್ಫೋಟವಾಗಿ 40 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ.
Published: 24th April 2022 11:33 AM | Last Updated: 24th April 2022 11:34 AM | A+A A-

ಇ-ಬೈಕ್ ಬ್ಯಾಟರಿ ಸ್ಫೋಟ
ವಿಜಯವಾಡ: ದೇಶದಲ್ಲಿ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ದುರಂತ ಸರಣಿ ಮುಂದುವರೆದಿದ್ದು, ಈ ಬಾರಿ ಆಂಧ್ರ ಪ್ರದೇಶದಲ್ಲಿ ಇ-ಬೈಕ್ ಬ್ಯಾಟರಿ ಸ್ಫೋಟವಾಗಿ 40 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ನಿರ್ಲಕ್ಷ್ಯ ತೋರುವ ಇವಿ ಕಂಪನಿಗಳಿಗೆ ದಂಡ; ದೋಷಪೂರಿತ ವಾಹನಗಳ ಹಿಂದಕ್ಕೆ ಪಡೆಯಿರಿ: ನಿತಿನ್ ಗಡ್ಕರಿ ಎಚ್ಚರಿಕೆ
ಹೌದು. ವಿದ್ಯುತ್ ಬೈಕ್ ನ ಬ್ಯಾಟರಿ ಸ್ಫೋಟಗೊಂಡ ಮತ್ತೊಂದು ಪ್ರಕರಣ ಆಂಧ್ರ ಪ್ರದೇಶದಲ್ಲಿ ವರದಿಯಾಗಿದ್ದು, ವ್ಯಕ್ತಿಯೊಬ್ಬರು ಮೃತಪಟ್ಟು ಮೂವರು ಗಭೀರವಾಗಿ ಗಾಯಗೊಂಡಿದ್ದಾರೆ. ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಶನಿವಾರ ಬೆಳಿಗ್ಗೆ ದುರಂತ ಸಂಭವಿಸಿದ್ದು, ಸ್ಕೂಟರ್ನ ಬ್ಯಾಟರಿಯನ್ನು ಮಲಗುವ ಕೋಣೆಯಲ್ಲಿ ಚಾರ್ಜ್ಗೆ ಹಾಕಲಾಗಿತ್ತು. ಸ್ಫೋಟದ ಪರಿಣಾಮ ಶಿವಕುಮಾರ್, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಸುಟ್ಟ ಗಾಯಗಳಾಗಿವೆ. ಚೀರಾಟದ ಶಬ್ದ ಕೇಳಿ ನೆರೆಹೊರೆಯವರು ರಕ್ಷಣೆಗೆ ಧಾವಿಸಿದ್ದು, ಆಸ್ಪತ್ರೆಗೆ ದಾಖಲಿಸಿದ್ದು, ಈ ವೇಳೆ ಗಂಭೀರ ಸ್ಥಿತಿಯಲ್ಲಿದ್ದ ಶಿವಕುಮಾರ್ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಭಾರತದಲ್ಲಿವೆ 10 ಲಕ್ಷಕ್ಕೂ ಹೆಚ್ಚು ವಿದ್ಯುತ್ ವಾಹನ, 1,742 ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್ ಇವೆ: ನಿತಿನ್ ಗಡ್ಕರಿ
ತೀವ್ರ ಸುಟ್ಟ ಗಾಯಗಳಿಂದ ನರಳುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಇಬ್ಬರು ಮಕ್ಕಳು ಕೂಡ ಉಸಿರಾಡಲು ಸಾಧ್ಯವಾಗದೆ ತೊಂದರೆ ಅನುಭವಿಸಿದ್ದಾರೆ. ಆದರೆ ಅವರು ಅಪಾಯದಿಂದ ಪಾರಾಗಿದ್ದಾರೆ. ಅವರ ಪತ್ನಿ ಹಾಗೂ ಇತರರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಮೃತ ಶಿವಕುಮಾರ್ ಅವರು ಶುಕ್ರವಾರವಷ್ಟೇ ಇ–ಸ್ಕೂಟರ್ ಖರೀದಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ವಾಹನದ ತಯಾರಕ ಕಂಪೆನಿ ಮತ್ತು ಇತರ ವಿವರ ಇನ್ನಷ್ಟೇ ತಿಳಿಬೇಕಿದೆ.
ಇ-ಬೈಕ್ ಬ್ಯಾಟರಿ ಸ್ಫೋಟ ಪ್ರಕರಣ ಇದೇ ಮೊದಲಲ್ಲ
ಇನ್ನು ಇ-ಬೈಕ್ ಬ್ಯಾಟರಿ ಸ್ಫೋಟ ಪ್ರಕರಣ ಇದೇ ಮೊದಲಲ್ಲ.. ಇದೇ ವಾರ ತೆಲಂಗಾಣದಲ್ಲಿ ಇಂತಹದೇ ಪ್ರಕರಣ ವರದಿಯಾಗಿತ್ತು. ನಿಜಾಮಾಬಾದ್ ಜಿಲ್ಲೆಯಲ್ಲಿ ಬುಧವಾರ (ಏ.20) ಸಂಭವಿಸಿದ ದುರಂತದಿಂದಾಗಿ 80 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟು, ಅವರ ಕುಟುಂಬದ ನಾಲ್ವರು ಗಾಯಗೊಂಡಿದ್ದರು. ಮೃತರನ್ನು ಬಿ.ರಾಮಸ್ವಾಮಿ ಎಂದು ಗುರುತಿಸಲಾಗಿದ್ದು, ಅವರ ಮಗ ಬಿ.ಪ್ರಕಾಶ್ ಕಳೆದೊಂದು ವರ್ಷದಿಂದ ಇ–ಸ್ಕೂಟರ್ ಬಳಸುತ್ತಿದ್ದರು. ಬೈಕ್ನ ಬ್ಯಾಟರಿಯನ್ನು ಕಳಚಿ ಶುಕ್ರವಾರ ರಾತ್ರಿ ತಮ್ಮ ಮಲಗುವ ಕೋಣೆಯಲ್ಲಿ ಚಾರ್ಜ್ಗೆ ಹಾಕಿದ್ದರು. ನಸುಕಿನ ವೇಳೆ ಎಲ್ಲರೂ ಸವಿನಿದ್ದೆಯಲ್ಲಿ ಇರುವಾಗ ಅದು ಇದ್ದಕ್ಕಿದ್ದಂತೆ ಸ್ಫೋಟಿಸಿದೆ ಎಂದು ಸೂರ್ಯರಾವ್ಪೇಟೆ ಇನ್ಸ್ಪೆಕ್ಟರ್ ವಿ. ಜಾನಕಿ ರಾಮಯ್ಯ ತಿಳಿಸಿದ್ದಾರೆ.
ಇದನ್ನೂ ಓದಿ: ಪರಿಸರಸ್ನೇಹಿ ಹೈಡ್ರೋಜನ್ ಕಾರಿನಲ್ಲಿ ಸಂಸತ್ತಿಗೆ ಆಗಮಿಸಿದ ನಿತಿನ್ ಗಡ್ಕರಿ: ದೇಶದಲ್ಲೇ ಮೊದಲು
ಪ್ರಕರಣ ಸಂಬಂಧ ಹೈದರಾಬಾದ್ ಮೂಲದ ಸ್ಕೂಟರ್ ತಯಾರಕ ಮತ್ತು ವಿತರಕ ಕಂಪೆನಿ 'ಪ್ಯೂರ್ ಇವಿ' (Pure EV) ವಿರುದ್ಧ ಐಪಿಸಿಯ 304ಎ (ಬೇಜವಾಬ್ದಾರಿಯಿಂದ ಸಾವಿಗೆ ಕಾರಣ) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದರು. ಘಟನೆಗೆ ವಿಷಾದ ವ್ಯಕ್ತಪಡಿಸಿ ಹೇಳಿಕೆ ಬಿಡುಗಡೆ ಮಾಡಿರುವ 'ಪ್ಯೂರ್ ಇವಿ', ತನಿಖೆಗೆ ಸಹಕರಿಸುವುದಾಗಿ ಮತ್ತು ಗ್ರಾಹಕರಿಂದ ವಿವರ ಪಡೆಯುತ್ತಿರುವುದಾಗಿ ತಿಳಿಸಿದೆ.
ಇ-ಬೈಕ್ ಗಳ ಕುರಿತು ಹೆಚ್ಚಾದ ಕಳವಳ
ಇನ್ನು ಇಂತಹ (ಬ್ಯಾಟರಿ ಸ್ಫೋಟ) ಪ್ರಕರಣಗಳು ಮರುಕಳಿಸುತ್ತಿರುವುದು, ಇ–ಸ್ಕೂಟರ್ಗಳ ಬ್ಯಾಟರಿ ಸುರಕ್ಷತೆಯ ಬಗ್ಗೆ ಕಳವಳ ಹೆಚ್ಚಿಸಿದೆ. 'ಪ್ಯೂರ್ ಇವಿ'ಯ ಮೂರು ಸ್ಕೂಟರ್ಗಳು ಹಾಗೂ ಇತರ ವಿದ್ಯುತ್ ಚಾಲಿತ ವಾಹನ ತಯಾರಿಕಾ ಕಂಪೆನಿಗಳ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡ ಕೆಲವು ಪ್ರಕರಣಗಳು ಇತ್ತೀಚಿನ ತಿಂಗಳುಗಳಲ್ಲಿ ವರದಿಯಾಗಿವೆ.
ಎಚ್ಚರಿಕೆ ನೀಡಿದ್ದ ಸಚಿವ ಗಡ್ಕರಿ
ಇ-ವಾಹನ ಸರಣಿ ದುರಂತದ ಹಿನ್ನಲೆಯಲ್ಲಿ ಸರಣಿ ಟ್ವೀಟ್ ಮಾಡಿದ್ದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, ಕಂಪೆನಿಗಳು ನಿರ್ಲಕ್ಷ್ಯ ವಹಿಸಿರುವುದು ಕಂಡುಬಂದರೆ ಅದಕ್ಕೆ ದಂಡ ವಿಧಿಸಲಾಗುವುದು ಮತ್ತು ಪರಿಣತರ ಸಮಿತಿ ವರದಿ ಬಂದ ಬಳಿಕ ಎಲ್ಲ ದೋಷ ಇರುವ ಇವಿಗಳನ್ನು ವಾಪಸ್ ಕರೆಸಿಕೊಳ್ಳುವಂತೆ ಆದೇಶ ನೀಡಲಾಗುವುದು ಎಂದು ಎಚ್ಚರಿಸಿದ್ದರು.
ಇದನ್ನೂ ಓದಿ:
ಅಲ್ಲದೆ ಸರ್ಕಾರದ ಚಿಂತಕರ ಚಾವಡಿ ನೀತಿ ಆಯೋಗ ಎರಡು ದಿನಗಳ ಹಿಂದಷ್ಟೇ ಎಲೆಕ್ಟ್ರಿಕ್ ವಾಹನಗಳಿಗೆ ಬ್ಯಾಟರಿ ವಿನಿಮಯ ನೀತಿಯನ್ನು ರೂಪಿಸಿದೆ. ಬದಲಿಸಬಹುದಾದ ಬ್ಯಾಟರಿಗಳಿಗೆ ಪರೀಕ್ಷೆಯ ಕಠಿಣ ನಿಯಮಗಳನ್ನು ಸೂಚಿಸಿದೆ. ಎಲೆಕ್ಟ್ರಿಕ್ ವಾಹನಗಳ ಸುರಕ್ಷತೆ ಕುರಿತಂತೆ ಉಂಟಾಗಿರುವ ಆತಂಕದ ಮಧ್ಯೆ ನೀತಿ ಆಯೋಗ ಈ ನಡೆ ಅನುಸರಿಸಿದೆ.