'ಇನ್ನೊಬ್ಬ ವ್ಯಕ್ತಿ ಬಗ್ಗೆ ತಿಳಿಯುವವರೆಗೆ ಕಾಯಿರಿ': ಎಲಾನ್ ಮಸ್ಕ್ ಪೋಸ್ಟ್‌ಗೆ ರಾಹುಲ್ ಗಾಂಧಿ; 'ಧನ್ಯವಾದಗಳು ರಾಹುಲ್' ಎಂದ ಅಮೆರಿಕದ ಉದ್ಯಮಿ

ನಿಯಂತ್ರಕ ಸಂಸ್ಥೆಗಳ ಅನುಮೋದನೆ ಪಡೆಯಲು ಪ್ರಯತ್ನಿಸುತ್ತಿದ್ದರೂ, 'ಕೆಲವು ಪ್ರಭಾವಿ ಉದ್ಯಮಿಗಳು' ತಮ್ಮ ಉಪಗ್ರಹ ಆಧಾರಿತ ಇಂಟರ್ನೆಟ್ ಕಂಪನಿಯು ಭಾರತವನ್ನು ಪ್ರವೇಶಿಸದಂತೆ ತಡೆಯುತ್ತಿದ್ದಾರೆ ಎಂದು ಮಸ್ಕ್ ಸರಣಿ ಪೋಸ್ಟ್‌ಗಳ ಮೂಲಕ ಆರೋಪಿಸಿದರು.
Rahul Gandhi - Elon Musk
ರಾಹುಲ್ ಗಾಂಧಿ - ಎಲಾನ್ ಮಸ್ಕ್
Updated on: 

ನವದೆಹಲಿ: ಭಾರತದಲ್ಲಿ ತಮ್ಮ ಉಪಗ್ರಹ ಆಧಾರಿತ ಇಂಟರ್ನೆಟ್ ಕಂಪನಿ 'ಸ್ಟಾರ್‌ಲಿಂಕ್'ಗೆ ಪರವಾನಗಿ ಸಿಗದಿರುವುದಕ್ಕೆ ಸಂಬಂಧಿಸಿದಂತೆ ಟೀಕೆಯನ್ನು ತೀವ್ರಗೊಳಿಸಿರುವ ಎಲಾನ್ ಮಸ್ಕ್, ಮುಕೇಶ್ ಅಂಬಾನಿ ಅವರು 'ಭಾರತದ ನಿಜವಾದ ಒಡೆಯರೇ' ಎಂದು ಪ್ರಶ್ನಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, 'ನೀವು ಇನ್ನೊಬ್ಬ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳುವವರೆಗೂ ಕಾಯಿರಿ' ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ತಮ್ಮ ಪೋಸ್ಟ್‌ನಲ್ಲಿ ಯಾರ ಹೆಸರನ್ನೂ ನೇರವಾಗಿ ಪ್ರಸ್ತಾಪಿಸಲಿಲ್ಲವಾದರೂ, ಅವರ ಈ ಹೇಳಿಕೆಯು ಉದ್ಯಮಿ ಗೌತಮ್ ಅದಾನಿ ಅವರನ್ನು ಗುರಿಯಾಗಿಸಿಕೊಂಡಂತಿದೆ ಎನ್ನಲಾಗಿದೆ. ಬಿಜೆಪಿ ನೇತೃತ್ವದ ಸರ್ಕಾರದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ ಮತ್ತು ಸರ್ಕಾರದಿಂದ ವಿಶೇಷ ಸವಲತ್ತುಗಳನ್ನು ಪಡೆಯುತ್ತಿದ್ದಾರೆ ಎಂದು ಅದಾನಿ ವಿರುದ್ಧ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪದೇ ಪದೆ ಆರೋಪಿಸಿದೆ.

'ಎಕ್ಸ್'ನಲ್ಲಿ ಮಸ್ಕ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಗಾಂಧಿ, 'ಭಾರತಕ್ಕೆ ಸುಸ್ವಾಗತ ಎಲಾನ್. ಇನ್ನೊಬ್ಬ ವ್ಯಕ್ತಿಯ ಬಗ್ಗೆ ನಿಮಗೆ ತಿಳಿಯುವವರೆಗೂ ಕಾಯಿರಿ' ಎಂದು ಬರೆದಿದ್ದಾರೆ.

ರಾಹುಲ್ ಗಾಂಧಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಜೆಟ್‌ನಲ್ಲಿ ಕುಳಿತಿರುವ ಅದಾನಿ ಚಿತ್ರ, ಮುಖೇಶ್ ಅಂಬಾನಿ ಚಿತ್ರ ಸೇರಿದಂತೆ ತಮ್ಮ ಟ್ವೀಟ್‌ಗೆ ಮಸ್ಕ್ ಪ್ರತಿಕ್ರಿಯೆಯ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ.

ಇದಾದ ಒಂದು ಗಂಟೆಯೊಳಗೆ ಅಮೆರಿಕದ ಉದ್ಯಮಿ ಮಸ್ಕ್, ರಾಹುಲ್ ಗಾಂಧಿಯವರ 'ಎಕ್ಸ್' ಪೋಸ್ಟ್‌ಗೆ ಪ್ರತಿಕ್ರಿಯಿಸುತ್ತಾ, 'ಧನ್ಯವಾದಗಳು ರಾಹುಲ್. ಇದು ನಿಜಕ್ಕೂ ಆತಂಕಕಾರಿ ವಿಷಯ' ಎಂದು ಹೇಳಿದ್ದಾರೆ.

ನಿಯಂತ್ರಕ ಸಂಸ್ಥೆಗಳ ಅನುಮೋದನೆ ಪಡೆಯಲು ಪ್ರಯತ್ನಿಸುತ್ತಿದ್ದರೂ, 'ಕೆಲವು ಪ್ರಭಾವಿ ಉದ್ಯಮಿಗಳು' ತಮ್ಮ ಉಪಗ್ರಹ ಆಧಾರಿತ ಇಂಟರ್ನೆಟ್ ಕಂಪನಿಯು ಭಾರತವನ್ನು ಪ್ರವೇಶಿಸದಂತೆ ತಡೆಯುತ್ತಿದ್ದಾರೆ ಎಂದು ಮಸ್ಕ್ ಸರಣಿ ಪೋಸ್ಟ್‌ಗಳ ಮೂಲಕ ಆರೋಪಿಸಿದರು. ಅವರ ಈ ಆರೋಪಗಳನ್ನು ಸರ್ಕಾರವು ತಕ್ಷಣವೇ ತಳ್ಳಿಹಾಕಿತು; ಅನುಮೋದನಾ ಪ್ರಕ್ರಿಯೆಯು ಪಾರದರ್ಶಕವಾಗಿದೆ ಮತ್ತು ಅನುಮೋದನೆ ಕೋರಿರುವ ಮೂರೂ ಕಂಪನಿಗಳು ಭದ್ರತಾ ಅನುಮತಿಗಾಗಿ ಕಾಯುತ್ತಿವೆ ಎಂದು ಸರ್ಕಾರ ತಿಳಿಸಿತು.

ತಮ್ಮ ಇತ್ತೀಚಿನ ಪೋಸ್ಟ್‌ನಲ್ಲಿ, 'ಸ್ಟಾರ್‌ಲಿಂಕ್ 165ಕ್ಕೂ ಹೆಚ್ಚು ದೇಶಗಳಲ್ಲಿ ಪರವಾನಗಿ ಪಡೆದಿದೆ ಮತ್ತು ಭಾರತ ಸರ್ಕಾರದ ಪ್ರತಿಯೊಂದು ಕಾನೂನು ಹಾಗೂ ನಿಯಮಾವಳಿಯನ್ನು ಪಾಲಿಸಲು ಐದು ವರ್ಷಗಳನ್ನು ಕಳೆದಿದೆ; ಹಾಗಿದ್ದರೂ ಇನ್ನೂ ಏಕೆ ಪರವಾನಗಿ ಸಿಕ್ಕಿಲ್ಲ? ಅಂಬಾನಿ ಭಾರತದ ನಿಜವಾದ ಬಾಸ್ ಆಗಿದ್ದಾರೆಯೇ?' ಎಂದು ಮಸ್ಕ್ 'ಎಕ್ಸ್' (X) ನಲ್ಲಿ ಬರೆದಿದ್ದಾರೆ.

ನಾಗರಿಕರ ಹಿತಾಸಕ್ತಿಗಳಿಗಿಂತ ಹೆಚ್ಚಾಗಿ 'ಆಪ್ತ ಬಂಡವಾಳಶಾಹಿಗಳ' ಹಿತಾಸಕ್ತಿಗಳನ್ನು ರಕ್ಷಿಸುವುದರಲ್ಲಿ ಸರ್ಕಾರಕ್ಕೆ ಹೆಚ್ಚಿನ ಆಸಕ್ತಿಯಿದೆ ಎಂದೂ ಮಸ್ಕ್ ದೂರಿದ್ದಾರೆ.

'ದುರದೃಷ್ಟವಶಾತ್, ಭಾರತೀಯರ ಮೇಲೆ ತಮ್ಮ ಏಕಸ್ವಾಮ್ಯದ ಹಿಡಿತವನ್ನು ಕಾಯ್ದುಕೊಳ್ಳುವ ಸಲುವಾಗಿ ಕೆಲವು ಪ್ರಭಾವಿ ಉದ್ಯಮಿಗಳು ನಮಗೆ ಅಡ್ಡಿಪಡಿಸುತ್ತಿದ್ದಾರೆ. ಅವರು ಯಾರೆಂದು ನೀವು ಊಹಿಸಬಹುದು. ಇದು ಭಾರತದ ಜನರ ವಿರುದ್ಧ ಎಸಗುವ ಅಪರಾಧವಾಗಿದೆ!' ಎಂದು ಮಸ್ಕ್ ತಮ್ಮ ಹಿಂದಿನ ಪೋಸ್ಟ್ ಒಂದರಲ್ಲಿ ಹೇಳಿದ್ದರು.

ಈ ಹೇಳಿಕೆಗಳ ನಂತರ ಮಸ್ಕ್ ಹಲವಾರು ಪೋಸ್ಟ್‌ಗಳನ್ನು ಹಂಚಿಕೊಂಡರು; ಅವುಗಳಲ್ಲಿ ಭಾರತದ ಸಂಪರ್ಕ ಸೌಲಭ್ಯ ವಂಚಿತ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವಲ್ಲಿ 'ಸ್ಟಾರ್‌ಲಿಂಕ್' (Starlink) ವಹಿಸಬಹುದಾದ ಸಂಭಾವ್ಯ ಪಾತ್ರವನ್ನು ಅವರು ಎತ್ತಿ ತೋರಿಸಿದರು.

ಸರ್ಕಾರವು ಮಸ್ಕ್‌ನ ಸ್ಟಾರ್‌ಲಿಂಕ್, ರಿಲಯನ್ಸ್ ಜಿಯೋದ ಉಪಗ್ರಹ ಉದ್ಯಮ ಜಿಯೋ ಸ್ಯಾಟ್‌ಕಾಮ್ ಮತ್ತು ಭಾರ್ತಿ ಬೆಂಬಲಿತ ಯುಟೆಲ್‌ಸ್ಯಾಟ್ ಒನ್‌ವೆಬ್ ಎಂಬ ಮೂರು ಕಂಪನಿಗಳಿಗೆ ಪರವಾನಗಿ ನೀಡಿದೆ. ಆದಾಗ್ಯೂ, ಅಗತ್ಯವಿರುವ ಭದ್ರತಾ ಮೌಲ್ಯಮಾಪನಗಳು ಮತ್ತು ಸ್ಪೆಕ್ಟ್ರಮ್-ಸಂಬಂಧಿತ ಅನುಮೋದನೆಗಳು ಪೂರ್ಣಗೊಳ್ಳುವವರೆಗೆ ಯಾರೂ ವಾಣಿಜ್ಯ ಸೇವೆಗಳನ್ನು ಪ್ರಾರಂಭಿಸಲು ಸಾಧ್ಯವಿಲ್ಲ.

Rahul Gandhi - Elon Musk
ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com