ಎಎಪಿ ವಿಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ಬದ್ಧವಾಗಿದೆ, ಅದರಿಂದ ಹೊರಬರುವುದಿಲ್ಲ: ಅರವಿಂದ ಕೇಜ್ರಿವಾಲ್

ಆಮ್ ಆದ್ಮಿ ಪಕ್ಷವು ವಿಪಕ್ಷಗಳ ಇಂಡಿಯಾ ಮೈತ್ರಿಗೆ ಬದ್ಧವಾಗಿದೆ ಮತ್ತು ಅದರಿಂದ ಹೊರಬರುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶುಕ್ರವಾರ ಹೇಳಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
Updated on: 

ನವದೆಹಲಿ: ಆಮ್ ಆದ್ಮಿ ಪಕ್ಷವು ವಿಪಕ್ಷಗಳ ಇಂಡಿಯಾ ಮೈತ್ರಿಗೆ ಬದ್ಧವಾಗಿದೆ ಮತ್ತು ಅದರಿಂದ ಹೊರಬರುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶುಕ್ರವಾರ ಹೇಳಿದ್ದಾರೆ.

2015ರ ಮಾದಕವಸ್ತು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ ಅವರನ್ನು ಬಂಧಿಸಿದ ನಂತರ, ರಾಜ್ಯದಲ್ಲಿ ಎಎಪಿ ಸರ್ಕಾರವು ರಾಜಕೀಯ ದ್ವೇಷದಲ್ಲಿ ತೊಡಗಿದೆ ಎಂದು ಕಾಂಗ್ರೆಸ್‌ನ ಪಂಜಾಬ್ ಘಟಕ ಆರೋಪಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಹೇಳಿಕೆಗಳು ಮಹತ್ವ ಪಡೆದುಕೊಂಡಿವೆ.

ಆದಾಗ್ಯೂ, ಶಾಸಕ ಸುಖಪಾಲ್ ಸಿಂಗ್ ಖೈರಾ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗಿದೆ ಎಂದು ಎಎಪಿ ಈ ಆರೋಪವನ್ನು ತಳ್ಳಿಹಾಕಿದೆ.

ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆಪ್ ರಾಷ್ಟ್ರೀಯ ಸಂಚಾಲಕರೂ ಆಗಿರುವ ಕೇಜ್ರಿವಾಲ್ ಅವರಿಗೆ ಪಂಜಾಬ್‌ನಲ್ಲಿ ಕಾಂಗ್ರೆಸ್ ಶಾಸಕರ ಬಂಧನದ ನಂತರ ಇಂಡಿಯಾ ಮೈತ್ರಿಕೂಟದ ಭವಿಷ್ಯದ ಬಗ್ಗೆ ಕೇಳಲಾಯಿತು.

'ಎಎಪಿ ಇಂಡಿಯಾ ಮೈತ್ರಿಕೂಟಕ್ಕೆ ಬದ್ಧವಾಗಿದೆ. ನಾವು ಮೈತ್ರಿಯಿಂದ ಹೊರಬರುವುದಿಲ್ಲ. ಮೈತ್ರಿಯ ಧರ್ಮವನ್ನು ಅನುಸರಿಸಲು ನಾವು ಬದ್ಧರಾಗಿದ್ದೇವೆ. ನಾನು ಅದರ (ಪ್ರಕರಣದ) ಬಗ್ಗೆ ಕೇಳಿದ್ದೇನೆ. ಆದರೆ, ನನ್ನ ಬಳಿ ವಿವರಗಳಿಲ್ಲ. ನೀವು ಪಂಜಾಬ್ ಪೊಲೀಸರೊಂದಿಗೆ ಮಾತನಾಡಬೇಕು' ಎಂದು ಅವರು ಹೇಳಿದರು.

'ರಾಜ್ಯದಲ್ಲಿ ಡ್ರಗ್ಸ್ ಹಾವಳಿಯನ್ನು ಕೊನೆಗಾಣಿಸಲು ಭಗವಂತ್ ಮಾನ್ ನೇತೃತ್ವದ ಸರ್ಕಾರ ಬದ್ಧವಾಗಿದೆ. ಡ್ರಗ್ಸ್ ಯುವಕರನ್ನು ನಾಶಪಡಿಸಿದೆ. ಈ ವಿಚಾರದಲ್ಲಿ ಯಾವುದೇ ಪ್ರಭಾವಿ ವ್ಯಕ್ತಿಯಾಗಿರಲಿ ಅಥವಾ ಸಣ್ಣ ವ್ಯಕ್ತಿಯಾಗಿರಲಿ, ಯಾರನ್ನೂ ಬಿಡುವುದಿಲ್ಲ. ನಾನು ಯಾವುದೇ ನಿರ್ದಿಷ್ಟ ಘಟನೆಯ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ವಿವರಗಳು ನನ್ನ ಬಳಿ ಇಲ್ಲ' ಎಂದು ಅವರು ಹೇಳಿದರು.

ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟವು ಇನ್ನೂ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ಭಾರತದ 140 ಕೋಟಿ ಜನರು ಯಾರು ತಮ್ಮ ಪ್ರಧಾನಿ ಎಂದು ಭಾವಿಸುವ ವ್ಯವಸ್ಥೆಯನ್ನು ನಾವು ಸಿದ್ಧಪಡಿಸಬೇಕಾಗಿದೆ. ನಾವು ಜನರನ್ನು ಸಶಕ್ತಗೊಳಿಸಬೇಕು ಮತ್ತು ಒಬ್ಬ ವ್ಯಕ್ತಿಯನ್ನಲ್ಲ' ಎಂದು ಅವರು ಹೇಳಿದರು.

2024ರ ಸಾರ್ವತ್ರಿಕ ಚುನಾವಣೆಗೆ ರಾಜ್ಯದಲ್ಲಿ ಆಡಳಿತಾರೂಢ ಎಎಪಿ ಜೊತೆ ಯಾವುದೇ ಮೈತ್ರಿ ಮಾಡಿಕೊಳ್ಳುವುದನ್ನು ಪಂಜಾಬ್ ಕಾಂಗ್ರೆಸ್ ಈಗಾಗಲೇ ವಿರೋಧಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com