

ಮುಂಬೈ: ಮುಂಬೈನಲ್ಲಿ 56 ವರ್ಷದ ವ್ಯಕ್ತಿಯೊಬ್ಬ ತನ್ನ ಅತ್ತೆಯನ್ನು ಟೆಂಪೋದಲ್ಲಿ ಬೆಂಕಿ ಹಚ್ಚಿ ಕೊಲೆ ಮಾಡಿದ್ದು, ಕೃತ್ಯದ ವೇಳೆ ಉಂಟಾದ ಸುಟ್ಟ ಗಾಯಗಳಿಂದ ಆತನೂ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಸೋಮವಾರ ಮುಲುಂಡ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ತನ್ನ ಮಾಜಿ ಪತ್ನಿಯ ತಾಯಿಯನ್ನು ಬೆಂಕಿ ಹಚ್ಚಿ ಕೊಂದ ಮೃತ ಅಳಿಯ ಕೃಷ್ಣ ದಾಜಿ ಅಷ್ಟಂಕರ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ನವಘರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟೆಂಪೋ ಚಾಲಕರಾಗಿರುವ ಅಷ್ಟಂಕರ್, ಅತ್ತೆ 72 ವರ್ಷದ ಬಾಬಿ ದಾಜಿ ಉಸಾರೆ ಅವರನ್ನು ಟೆಂಪೋದಲ್ಲಿ ಮಲಗಿಸಿ ಬೆಂಕಿ ಹಚ್ಚಿದ್ದಾನೆ. ಆದರೆ ಸರಿಯಾದ ಸಮಯಕ್ಕೆ ತಾನು ಟೆಂಪೋದಿಂದ ಇಳಿಯಲಾಗದೆ ಸುಟ್ಟು ಕರಕಲಾಗಿದ್ದಾನೆ. ತನ್ನ ಮತ್ತು ಪತ್ನಿಯ ನಡುವಿನ ಬಿರುಕಿಗೆ ಹಾಗೂ ತಾವು ವಿಚ್ಛೇದನ ಪಡೆಯಲು ಅತ್ತೆಯೇ ಕಾರಣ ಎಂದು ಆಕೆಯನ್ನು ಹತ್ಯೆ ಮಾಡಿದ್ದಾನೆ.
ಪ್ರಾಥಮಿಕ ತನಿಖೆಯ ಪ್ರಕಾರ, ಮದ್ಯ ವ್ಯಸನಿಯಾಗಿದ್ದ ಅಷ್ಟಂಕರ್, ತನ್ನೊಂದಿಗೆ ವಿಚ್ಛೇದನ ಪಡೆಯುವಂತೆ ಆಕೆಯೇ ಪತ್ನಿಯ ತಲೆ ಕೆಡಿಸಿದ್ದಾಳೆ ಎಂದು ಕೋಪಗೊಂಡಿದ್ದರು ಮತ್ತು ಅವರ ಅತ್ತೆ ತನ್ನ ಹೆಂಡತಿಗೆ ಪ್ರತ್ಯೇಕವಾಗಿ ವಾಸಿಸುವಂತೆ ಹೇಳಿದ್ದರು ಎಂದು ಶಂಕಿಸಿ ಅತ್ಯೆಯನ್ನು ಹತ್ಯೆ ಮಾಡಿದ್ದಾರೆ.
ಉಸಾರೆ ಅವರ ಮನೆಯ ಬಳಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳು ಆಕೆ ಮತ್ತು ಅಷ್ಟಂಕರ್ ಅವರು ತಮ್ಮ ಮನೆಯಿಂದ ಸುಮಾರು 100 ಮೀಟರ್ ದೂರದಲ್ಲಿ ನಿಲ್ಲಿಸಿದ್ದ ಟೆಂಪೋ ಬಳಿ ಬರುತ್ತಿರುವುದು ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.