ದೇಶ

ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು Donald Trump ಕನಿಷ್ಠ 21 ಬಾರಿ ಹೇಳಿದರೂ ಪ್ರಧಾನಿ ಮೋದಿ ಮೌನ ವಹಿಸಿರುವುದು ಏಕೆ: ಕಾಂಗ್ರೆಸ್ ಪ್ರಶ್ನೆ

ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು Donald Trump ಕನಿಷ್ಠ 21 ಬಾರಿ ಹೇಳಿದರೂ ಪ್ರಧಾನಿ ಮೋದಿ ಮೌನ ವಹಿಸಿರುವುದು ಏಕೆ: ಕಾಂಗ್ರೆಸ್ ಪ್ರಶ್ನೆ
ಜೈರಾಮ್ ರಮೇಶ್
Published On :

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕನಿಷ್ಠ 21 ಬಾರಿ ಭಾರತ ಮತ್ತು ಪಾಕಿಸ್ತಾನ ನಡುವಿನ 'ಕದನ ವಿರಾಮ'ಕ್ಕೆ ತಾನು ಮಧ್ಯಸ್ಥಿಕೆ ವಹಿಸಿದ್ದೇನೆ ಎಂಬ ಹೇಳಿಕೆಯನ್ನು ಪುನರಾವರ್ತಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಈ ವಿಷಯದ ಬಗ್ಗೆ ಯಾವಾಗ ಮೌನ ಮುರಿಯುತ್ತಾರೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ನಿನ್ನೆ ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಬಗ್ಗೆ ನೀಡಿದ ಹೇಳಿಕೆಯಲ್ಲಿ, ಸಂಭಾವ್ಯ ವ್ಯಾಪಾರ ಪರಿಣಾಮಗಳನ್ನು ಬಳಸಿಕೊಳ್ಳುವ ಮೂಲಕ ಅಮೆರಿಕವು ಎರಡು ಪರಮಾಣು ಶಸ್ತ್ರಸಜ್ಜಿತ ನೆರೆಹೊರೆಯವರ ನಡುವಿನ ಹಗೆತನ ಉಲ್ಬಣಗೊಳ್ಳುವುದನ್ನು ತಡೆದಿದೆ ಎಂದು ಮತ್ತೊಮ್ಮೆ ಹೇಳಿದ್ದಾರೆ.

ಭಾರತ-ಪಾಕ್ ಮಧ್ಯೆ ಯುದ್ಧ ಮುಂದುವರಿದರೆ ವ್ಯಾಪಾರ ಸಂಬಂಧಗಳು ಸ್ಥಗಿತಗೊಳ್ಳುತ್ತವೆ ಎಂದು ಎರಡೂ ದೇಶಗಳಿಗೆ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಟ್ರಂಪ್ ಕಳೆದ 59 ದಿನಗಳಲ್ಲಿ ಕನಿಷ್ಠ 21 ಬಾರಿ ಈ ಹೇಳಿಕೆ ಪುನರಾವರ್ತಿಸಿದ್ದಾರೆ. ಮೇ ತಿಂಗಳಲ್ಲಿ ನಾಲ್ಕು ದಿನಗಳ ಭಾರತ-ಪಾಕಿಸ್ತಾನ ಯುದ್ಧವನ್ನು ನಿಲ್ಲಿಸಿದೆ ಎಂದು ಹೇಳಿಕೊಂಡಿದ್ದಾರೆ, ಅದು ಅವರ ಪ್ರಕಾರ ಪರಮಾಣು ಶಸ್ತ್ರಸಜ್ಜಿತ ದೇಶಗಳು ಮುಖಾಮುಖಿಯಾಗಿ ಉಲ್ಬಣಗೊಳ್ಳುವ ಅಂಚಿನಲ್ಲಿತ್ತು, ಅದನ್ನು ತಾನು ತಡೆದಿದ್ದೇನೆ ಎಂಬರ್ಥದಲ್ಲಿ ಹೇಳಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ ವಿಭಾಗ) ಜೈರಾಮ್ ರಮೇಶ್ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷರು ತಾವು ಎರಡು ದೇಶಗಳ ಮಧ್ಯೆ ಶಾಂತಿಸ್ಥಾಪನೆಯಾಗುವಂತೆ ಮಾಡಿದ್ದೇನೆ, ಇಲ್ಲದಿದ್ದರೆ ಭಾರತ-ಯುಎಸ್ ವ್ಯಾಪಾರ ಒಪ್ಪಂದಕ್ಕೆ ಧಕ್ಕೆಯಾಗುತ್ತಿತ್ತು ಎಂಬರ್ಥದಲ್ಲಿ ಹೇಳಿಕೊಂಡಿದ್ದಾರೆ. ಯುದ್ಧವನ್ನು ನಿಲ್ಲಿಸಿ ಅಥವಾ ಅಮೆರಿಕನ್ ಮಾರುಕಟ್ಟೆಗೆ ಪ್ರವೇಶ ನಷ್ಟವನ್ನು ಎದುರಿಸಿ ಎಂದು ನೇರವಾಗಿ ಟ್ರಂಪ್ ಅವರು ಭಾರತಕ್ಕೆ ಸಂದೇಶ ನೀಡಿದ್ದರು, ಆದರೆ ಈ ಬಗ್ಗೆ ಪ್ರಧಾನಿ ಮೋದಿಯವರು ಪ್ರತಿಕ್ರಿಯೆ ನೀಡಿಯೇ ಇಲ್ಲ, ಮೌನ ವಹಿಸಿರುವುದು ಏಕೆ, ಅವರು ಯಾವಾಗ ಮೌನ ಮುರಿಯುತ್ತಾರೆ ಎಂದು ಜೈರಾಂ ರಮೇಶ್ ಪ್ರಶ್ನಿಸಿದ್ದಾರೆ.

ನಿನ್ನೆ ಮಾತನಾಡಿದ್ದ ಟ್ರಂಪ್, ಭಾರತದೊಂದಿಗೆ ವ್ಯಾಪಾರ ಒಪ್ಪಂದದ ಅಂತಿಮ ಹಂತಕ್ಕೆ ಬಂದಿದ್ದೇವೆ. ನಾವು ಇಂಗ್ಲೆಂಡ್ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ, ಚೀನಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಭಾರತದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಹಂತಕ್ಕೆ ನಾವು ಹತ್ತಿರವಾಗಿದ್ದೇವೆ ಎಂದು ಹೇಳಿದ್ದಾರೆ. ಅಮೆರಿಕವು ತನ್ನ ಷರತ್ತುಗಳನ್ನು ಒಪ್ಪಿಕೊಳ್ಳಲು ಇಷ್ಟವಿಲ್ಲದ ದೇಶಗಳೊಂದಿಗೆ ತೊಡಗಿಸಿಕೊಳ್ಳದಿರಲು ನಿರ್ಧರಿಸಿದೆ ಎಂದು ಟ್ರಂಪ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.