

ಮುಂಬೈ: ಪಾರ್ಟಿಗೆ ತಂದಿದ್ದ ಗ್ಯಾಸ್ ಬಲೂನ್ ಗಳು ಸ್ಫೋಟಗೊಂಡ ಅಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದ್ದು, ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಮುಂಬೈನ ಉಪನಗರ ಗೋರೆಗಾಂವ್‌ನಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ಈ ಘಟನೆ ನಡೆದಿದ್ದು, ಈ ಘಟನೆಯಲ್ಲಿ ಇಬ್ಬರಿಗೆ ಸುಟ್ಟ ಗಾಯಗಳಾಗಿವೆ. ಅಲ್ಲದೆ ಈ ಸ್ಫೋಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವ್ಯಾಪಕ ವೈರಲ್ ಆಗುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಓರ್ವ ಮಹಿಳೆ ಟ್ರಾಲಿ ಬ್ಯಾಗ್ ಎಳೆದುಕೊಂಡು ಲಿಫ್ಟ್ ನೊಳಗೆ ಬರುತ್ತಾರೆ. ಬಳಿಕ ಮತ್ತೋರ್ವ ವ್ಯಕ್ತಿ ಗ್ಯಾಸ್ ತುಂಬಿದ ಬಲೂನ್ ಗಳಿರುವ ಪಾಲಿಥಿನ್ ಕವರ್ ನೊಳಗಿರಿಸಿಕೊಂಡು ತಂದಿದ್ದಾರೆ. ಅವರ ಬೆನ್ನಲ್ಲೇ ಬಾಲಕ ಕೂಡ ಲಿಫ್ಟ್ ಪ್ರವೇಶಿಸುತ್ತಾರೆ.
ಮಹಿಳೆ ಲಿಫ್ಟ್ ಬಟನ್ ಒತ್ತುತ್ತಿದ್ದಂತೆಯೇ ಇತ್ತ ವ್ಯಕ್ತಿ ಹಿಡಿದಿದ್ದ ಗ್ಯಾಸ್ ಬಲೂನ್ ಗಳು ಏಕಾಏಕಿ ಸ್ಫೋಟಗೊಂಡಿದೆ.
ಈ ವೇಳೆ ವ್ಯಕ್ತಿ ಮತ್ತು ಮಹಿಳೆ ಇಬ್ಬರಿಗೂ ಸುಟ್ಟ ಗಾಯಗಳಾಗಿದ್ದು, ಇಬ್ಬರೂ ಲಿಫ್ಟ್ ನಿಂದ ಹೊರಕ್ಕೆ ಜಿಗಿದಿದ್ದಾರೆ. ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ಪ್ರಕರಣ ದಾಖಲು, ಪೊಲೀಸ್ ತನಿಖೆ
ಈ ಘಟನೆಯ ವಿಡಿಯೋ ವ್ಯಾಪಕ ವೈರಲ್ ಆಗುತ್ತಲೇ ಪೊಲೀಸರು ಬಲೂನ್ ಮಾರಾಟಗಾರ ಮತ್ತು ಬಲೂನ್ ಆರ್ಡರ್ ಮಾಡಿದ್ದ ನಿವಾಸಿಗಳ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಲೂನ್‌ಗಳನ್ನು ತುಂಬಲು ಅವರು ಯಾವ ರೀತಿಯ ಅನಿಲವನ್ನು ಬಳಸಿದ್ದಾರೆ ಎಂಬುದು ತಿಳಿದಿಲ್ಲ.
Advertisement