

ಅಂಬಿಕಾಪುರ: ಛತ್ತೀಸ್‌ಗಢದ ಅಂಬಿಕಾಪುರದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ದುಷ್ಕರ್ಮಿಗಳು 73 ನಲ್ಲಿಗಳನ್ನು ಕದ್ದಿದ್ದು, ಶೌಚಾಲಯಗಳನ್ನು ಧ್ವಂಸ ಮಾಡಿದ್ದಾರೆ ಮತ್ತು ಕೈಬರಹದಲ್ಲಿ "ಐ ಲವ್ ಅಂಬಿಕಾಪುರ್" ಎಂದು ಬರೆದು ಹೋಗಿರುವುದಾಗಿ ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುರ್ಗುಜಾ ಜಿಲ್ಲೆಯ ಪ್ರಧಾನ ಕಚೇರಿಯಾದ ಅಂಬಿಕಾಪುರದ ಘಾಡಿ ಚೌಕ್ ಬಳಿ ಇರುವ ಕಾಂಗ್ರೆಸ್ ಕಚೇರಿ 'ರಾಜೀವ್ ಭವನ'ದಲ್ಲಿ ಕಳ್ಳತನ ನಡೆದಿದೆ.
ಕಾಂಗ್ರೆಸ್ ನಾಯಕರ ಪ್ರಕಾರ, ಇತ್ತೀಚಿನ ತಿಂಗಳುಗಳಲ್ಲಿ ಪಕ್ಷದ ಕಚೇರಿಯಲ್ಲಿ ವರದಿಯಾದ ಮೂರನೇ ಕಳ್ಳತನ ಇದಾಗಿದೆ.
ಇತ್ತೀಚಿನ ಕಳ್ಳತನ ಘಟನೆ ಮೇ 14 ಮತ್ತು 15 ರ ಮಧ್ಯರಾತ್ರಿ ನಡೆದಿದೆ ಎಂದು ಸುರ್ಗುಜಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಪಾಠಕ್ ಹೇಳಿದ್ದಾರೆ.
"ಕಳ್ಳರು ಕಚೇರಿ ಆವರಣದ ಮೇಲ್ಛಾವಣಿಯಿಂದ ಪ್ರವೇಶಿಸಿ ವಿವಿಧ ಶೌಚಾಲಯಗಳಲ್ಲಿ ಅಳವಡಿಸಲಾದ 73 ನಲ್ಲಿಗಳನ್ನು ತಳ್ಳತನ ಮಾಡಿದ್ದಾರೆ. ಅವರು ಹಲವಾರು ವಾಶ್ ಬೇಸಿನ್‌ಗಳು, ಕಮೋಡ್ ಫ್ಲಶ್ ವ್ಯವಸ್ಥೆಗಳು ಮತ್ತು ಪೈಪ್‌ಲೈನ್‌ಗಳನ್ನು ಸಹ ಹಾನಿಗೊಳಿಸಿದ್ದಾರೆ" ಎಂದು ಕಾಂಗ್ರೆಸ್ ನಾಯಕ ಆರೋಪಿಸಿದ್ದಾರೆ.
ವಿರೋಧ ಪಕ್ಷವು ಹಂಚಿಕೊಂಡಿರುವ ವಿಡಿಯೋದಲ್ಲಿ ಕಳ್ಳರು, "ಐ ಲವ್ ಅಂಬಿಕಾಪುರ್" ಎಂದು ಶೌಚಾಲಯದ ನೆಲದ ಮೇಲೆ ಕೈಯಿಂದ ಬರೆಯಲಾಗಿದೆ.
"ನೆಲದ ಮೇಲೆ ಸಂದೇಶವನ್ನು ಸಹ ಬಿಟ್ಟಿರುವ ಕಳ್ಳರ ಇಂತಹ ದಿಟ್ಟತನವು ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಪೊಲೀಸರಿಗೆ ನೇರ ಸವಾಲಾಗಿದೆ" ನಗರದಲ್ಲಿ ಸಕ್ರಿಯವಾಗಿರುವ ಮಾದಕ ವ್ಯಸನಿಗಳು ಮತ್ತು ಸಮಾಜವಿರೋಧಿ ಶಕ್ತಿಗಳು ಈ ಘಟನೆಯ ಹಿಂದೆ ಇರಬಹುದು ಎಂದು ಅವರು ಹೇಳಿದ್ದಾರೆ.
ಈ ಕಳ್ಳತನದಿಂದ 80,000 ರೂ.ಗಳಿಗೂ ಹೆಚ್ಚು ನಷ್ಟವಾಗಿದೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
ಅತಿಕ್ರಮಣ ಮತ್ತು ಕಳ್ಳತನದ ಆರೋಪದ ಮೇಲೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಆದರೆ ಇದುವರೆಗೂ ಯಾರನ್ನೂ ಬಂದಿಸಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement