

ನವದೆಹಲಿ: ದೇಶದಲ್ಲಿ ಆರ್ಥಿಕ ಬಿರುಗಾಳಿ ಬೀಸುತ್ತಿದೆ ಆದರೆ ಪ್ರಧಾನಿ ನರೇಂದ್ರ ಮೋದಿ ಇಟಲಿಯಲ್ಲಿ ಕ್ಯಾಂಡಿ ಹಂಚುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಮೋದಿ ಮೆಲೋಡಿ ಟಾಫಿ ಪ್ಯಾಕೆಟ್ ಅನ್ನು ಉಡುಗೊರೆಯಾಗಿ ನೀಡುವ ವಿಡಿಯೋವನ್ನು ಪೋಸ್ಟ್ ಮಾಡಿದ ನಂತರ ಹೇಳಿದ್ದಾರೆ.
'ಇದು ನಾಯಕತ್ವವಲ್ಲ, ಇದು ಗಿಮಿಕ್' ಎಂದು ತಮ್ಮ ಕ್ಷೇತ್ರ ರಾಯ್‌ಬರೇಲಿಗೆ ಭೇಟಿ ನೀಡಿರುವ ರಾಹುಲ್ ಗಾಂಧಿ, ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ದೇಶದ ರೈತರು, ಕಾರ್ಮಿಕರು, ವ್ಯಾಪಾರಿಗಳು ಮತ್ತು ಇತರರು ಕಣ್ಣೀರು ಹಾಕುತ್ತಿರುವಾಗ, ಪ್ರಧಾನಿ ನಗುತ್ತಿದ್ದಾರೆ ಮತ್ತು ರೀಲ್‌ಗಳನ್ನು ಮಾಡುತ್ತಿದ್ದಾರೆ ಮತ್ತು ಬಿಜೆಪಿಯವರು ಚಪ್ಪಾಳೆ ತಟ್ಟುತ್ತಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಿಂದಿಯಲ್ಲಿ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
'ನಮ್ಮ ತಲೆಯ ಮೇಲೆ ಆರ್ಥಿಕ ಬಿರುಗಾಳಿ ಬೀಸುತ್ತಿದೆ ಮತ್ತು ನಮ್ಮ ಪ್ರಧಾನಿ ಇಟಲಿಯಲ್ಲಿ ಕ್ಯಾಂಡಿಗಳನ್ನು ಹಂಚುವಲ್ಲಿ ನಿರತರಾಗಿದ್ದಾರೆ. ಇದು ನಾಯಕತ್ವ ಅಲ್ಲ, ಇದು ಗಿಮಿಕ್!' ಎಂದು ಅವರು ಹೇಳಿದರು.
'ಪ್ರಧಾನಿ ಮೋದಿ ನಮಗೆ ಉಡುಗೊರೆ ತಂದರು-- ತುಂಬಾ ಒಳ್ಳೆಯ ಟಾಫಿ' ಎಂದು ಮೆಲೋನಿ ಹೇಳುವಾಗ, ಮೋದಿ ಟಾಫಿ ಪ್ಯಾಕೆಟ್ ತೋರಿಸುತ್ತಾ 'ಮೆಲೋಡಿ' ಎಂದು ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
'ಉಡುಗೊರೆಗೆ ಧನ್ಯವಾದಗಳು' ಮೆಲೋನಿ X ನಲ್ಲಿನ ತಮ್ಮ ಪೋಸ್ಟ್‌ನಲ್ಲಿ ವಿಡಿಯೋ ಹಂಚಿಕೊಂಡು ಹೇಳಿದ್ದಾರೆ.
Advertisement