ಶೀಘ್ರದಲ್ಲೇ ವಿಶ್ವಕ್ಕೆ ಸಿಹಿ ಸುದ್ದಿ: ಅಮೆರಿಕಾ–ಇರಾನ್ ಸಂಘರ್ಷ ಅಂತ್ಯ ಸಾಧ್ಯತೆ, ಮಾರ್ಕೊ ರುಬಿಯೊ ಮಹತ್ವದ ಹೇಳಿಕೆ..!

ಒಪ್ಪಂದದಲ್ಲಿ ಪ್ರಮುಖವಾಗಿ ಹಾರ್ಮುಜ್ ಜಲಸಂಧಿಯನ್ನು (Strait of Hormuz) ತೆರೆಯುವ ವಿಷಯ ಸೇರಿದ್ದು, ಇತ್ತೀಚಿನ ಸಂಘರ್ಷದಿಂದಾಗಿ ಉಂಟಾದ ಜಾಗತಿಕ ತೈಲ ಸಾಗಣೆ ಸಮಸ್ಯೆಗಳಿಗೆ ಪರಿಹಾರ ನೀಡುವ ಸಾಧ್ಯತೆ ಇದೆ.
US Secretary of State Marco Rubio
ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ
Updated on

ನವದೆಹಲಿ: ಅಮೆರಿಕಾ–ಇರಾನ್ ಯುದ್ಧ ಅಂತ್ಯಕ್ಕೆ ಶಾಂತಿ ಒಪ್ಪಂದ ಸಾಧ್ಯತೆ ಶೀಘ್ರದಲ್ಲೇ ಘೋಷಣೆಯಾಗಬಹುದು ಎಂದು ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ ಅವರು ಹೇಳಿದ್ದು, ಮಧ್ಯಪ್ರಾಚ್ಯ ಸಂಘರ್ಷ ಅಂತ್ಯಗೊಳಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.

ಭಾರತದ ಮೊದಲ ಅಧಿಕೃತ ಭೇಟಿಯಲ್ಲಿ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರುಬಿಯೋ, ಮುಂದಿನ ಕೆಲ ಗಂಟೆಗಳಲ್ಲಿ “ಒಳ್ಳೆಯ ಸುದ್ದಿ” ಹೊರಬರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಈ ಒಪ್ಪಂದದಲ್ಲಿ ಪ್ರಮುಖವಾಗಿ ಹಾರ್ಮುಜ್ ಜಲಸಂಧಿಯನ್ನು (Strait of Hormuz) ತೆರೆಯುವ ವಿಷಯ ಸೇರಿದ್ದು, ಇತ್ತೀಚಿನ ಸಂಘರ್ಷದಿಂದಾಗಿ ಉಂಟಾದ ಜಾಗತಿಕ ತೈಲ ಸಾಗಣೆ ಸಮಸ್ಯೆಗಳಿಗೆ ಪರಿಹಾರ ನೀಡುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ಮುಂದಿನ ಕೆಲವು ಗಂಟೆಗಳಲ್ಲಿ ಇಡೀ ವಿಶ್ವಕ್ಕೆ ಅತ್ಯಂತ ಸಮಾಧಾನ ತರುವಂತಹ ಸಿಹಿ ಸುದ್ದಿಯೊಂದು ಸಿಗುವ ಸಾಧ್ಯತೆಯಿದೆ ಎಂದು ನಾನು ಭಾವಿಸುತ್ತೇನೆ. ಪಶ್ಚಿಮ ಏಷ್ಯಾದಲ್ಲಿ (ಮಧ್ಯಪ್ರಾಚ್ಯ) ನಡೆಯುತ್ತಿರುವ ಬಿಕ್ಕಟ್ಟನ್ನು ಶಾಂತಿಯುತವಾಗಿ ಕೊನೆಗಾಣಿಸುವ ನಿಟ್ಟಿನಲ್ಲಿ ಮಹತ್ವದ ಪ್ರಗತಿಯಾಗಿದೆ. ಇಂದು ಸಂಜೆಯೊಳಗೆ ಈ ಕುರಿತು ಮತ್ತಷ್ಟು ಪ್ರಕಟಣೆಗಳು ಹೊರಬೀಳಬಹುದು ಎಂದು ಹೇಳಿದ್ದಾರೆ.

ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ ಇರಾನ್ ಸದ್ಯ 'ಸ್ಟ್ರೇಟ್ ಆಫ್ ಹಾರ್ಮುಜ್' (ಹಾರ್ಮುಜ್ ಜಲಸಂಧಿ) ಸಮುದ್ರ ಮಾರ್ಗವನ್ನು ಸಂಪೂರ್ಣವಾಗಿ ಬಂದ್ ಮಾಡಿದೆ.

US Secretary of State Marco Rubio
ಭಯೋತ್ಪಾದನೆಗೆ ಭಾರತ ಶೂನ್ಯ ಸಹಿಷ್ಣುತೆ: ಮಾರ್ಕೊ ರೂಬಿಯೊ ಜೊತೆಗಿನ ಸುದ್ದಿಗೋಷ್ಠಿಯಲ್ಲಿ ಭಾರತ-ಅಮೆರಿಕದ ನಿಲುವು ಪುನರುಚ್ಚರಿಸಿದ ಎಸ್ ಜೈಶಂಕರ್

ಪ್ರಸ್ತುತ ಮಾತುಕತೆ ನಡೆಸಿ ರೂಪಿಸಲಾಗುತ್ತಿರುವ ಹೊಸ ಒಪ್ಪಂದವು ಈ ಜಲಸಂಧಿಯ ಸಮಸ್ಯೆಯನ್ನು ಬಗೆಹರಿಸಲಿದೆ ಎಂದು ರೂಬಿಯೋ ಹೇಳಿದ್ದಾರೆ.

ಯಾವುದೇ ತೆರಿಗೆ ಅಥವಾ ಸುಂಕವಿಲ್ಲದೆ ಈ ಸಮುದ್ರ ಮಾರ್ಗವನ್ನು ಮುಕ್ತವಾಗಿ ಸಂಚಾರಕ್ಕೆ ಬಿಡಬೇಕು ಎಂಬುದು ಅಮೆರಿಕದ ಪ್ರಮುಖ ಷರತ್ತಾಗಿದೆ.

ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ಅಮೆರಿಕ ಬಿಡುವುದಿಲ್ಲ ಎಂದು ರೂಬಿಯೋ ಸ್ಪಷ್ಟಪಡಿಸಿದ್ದಾರೆ.

ಇರಾನ್ ತನ್ನಲ್ಲಿರುವ ಸಂವರ್ಧಿತ ಯುರೇನಿಯಂ ಅನ್ನು ಒಪ್ಪಿಸಬೇಕು ಹಾಗೂ ಅದರ ಪರಮಾಣು ಕಾರ್ಯಕ್ರಮಗಳ ಮೇಲಿನ ನಿಯಂತ್ರಣದ ಬಗ್ಗೆ ಕಠಿಣ ನಿಲುವು ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ. ಈ ಒಪ್ಪಂದದ ಮೂಲಕ ಭವಿಷ್ಯದಲ್ಲಿ ಇರಾನ್‌ನ ಪರಮಾಣು ಶಸ್ತ್ರಾಸ್ತ್ರಗಳ ಭೀತಿ ಜಗತ್ತಿಗೆ ಇಲ್ಲದಂತಾಗಲಿದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮುನ್ನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ 'ಟ್ರೂತ್ ಸೋಶಿಯಲ್' ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಇರಾನ್ ಜೊತೆಗಿನ ಒಪ್ಪಂದದ ಬಹುತೇಕ ಮಾತುಕತೆಗಳು ಮುಕ್ತಾಯದ ಹಂತಕ್ಕೆ ಬಂದಿದ್ದು, ಅಮೆರಿಕ, ಇರಾನ್ ಮತ್ತು ಇತರ ಕೆಲವು ದೇಶಗಳ ನಡುವೆ ಅಂತಿಮ ಒಪ್ಪಿಗೆ ಸಿಗುವುದಷ್ಟೇ ಬಾಕಿ ಇದೆ ಎಂದು ಬರೆದುಕೊಂಡಿದ್ದರು. ಸದ್ಯ ಇರಾನ್ ಜಲಸಂಧಿಯನ್ನು ಮುಕ್ತಗೊಳಿಸುವ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದೆ ಎಂದು ವರದಿಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com