ಮಕ್ಕಳು ಪೋಷಕರ ಆಡಿಸಿದಂತೆ ಆಡುವ ಗೊಂಬೆಗಳಲ್ಲ: ಅಪ್ಪ-ಅಮ್ಮನ ಹಕ್ಕುಗಳಿಗಿಂತ ಮಕ್ಕಳ ಭಾವನಾತ್ಮಕ ಯೋಗಕ್ಷೇಮವೇ ಸರ್ವೋಚ್ಚ ಎಂದ ಸುಪ್ರೀಂ

ನವದೆಹಲಿ: ವಿಚ್ಛೇದಿತ ದಂಪತಿಗಳ ನಡುವಿನ ಮಕ್ಕಳ ಪಾಲನೆ ವಿವಾದದ ಕುರಿತು ಮಹತ್ವದ ತೀರ್ಪು ನೀಡಿರುವ ಸುಪ್ರೀಂಕೋರ್ಟ್, "ಮಕ್ಕಳು ಪೋಷಕರ ಆಸ್ತಿಯಲ್ಲ ಅಥವಾ ಅವರು ಆಡಿಸಿದಂತೆ ಆಡುವ ಗೊಂಬೆಗಳಲ್ಲ; ಪೋಷಕರ ಕಾನೂನುಬದ್ಧ ಹಕ್ಕುಗಳಿಗಿಂತ ಮಕ್ಕಳ ಭಾವನಾತ್ಮಕ ಯೋಗಕ್ಷೇಮ ಮತ್ತು ಹಿತಾಸಕ್ತಿಯೇ ಸರ್ವೋಚ್ಚ" ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಪ್ರಕರಣ?
ತಮಿಳುನಾಡಿನ ಮಧುರೈ ಮೂಲದ ದಂಪತಿ 2009ರಲ್ಲಿ ವಿವಾಹವಾಗಿ 2014ರಲ್ಲಿ ಬೇರ್ಪಟ್ಟಿದ್ದರು ಮತ್ತು 2018ರಲ್ಲಿ ಅವರಿಗೆ ವಿಚ್ಛೇದನವಾಗಿತ್ತು. 2014ರಿಂದಲೂ ಇವರ ಇಬ್ಬರು ಅಪ್ರಾಪ್ತ ಗಂಡು ಮಕ್ಕಳು (ಪ್ರಸ್ತುತ 16 ಮತ್ತು 14 ವರ್ಷ ವಯಸ್ಸು) ತಾಯಿಯೊಂದಿಗೆ ವಾಸವಿದ್ದರು. ಆದರೆ ಮಧುರೈ ಕೌಟುಂಬಿಕ ನ್ಯಾಯಾಲಯ ಮತ್ತು ಮದ್ರಾಸ್ ಹೈಕೋರ್ಟ್ ಮಕ್ಕಳ ಪಾಲನೆ ಹಕ್ಕನ್ನು ತಂದೆಗೆ ನೀಡಿದ್ದವು. ಇದನ್ನು ಪ್ರಶ್ನಿಸಿ ತಾಯಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಇನ್ನು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಅಪರೇಶ್ ಕುಮಾರ್ ಸಿಂಗ್ ಅವರನ್ನೊಳಗೊಂಡ ಪೀಠವು ಮದ್ರಾಸ್ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿ, ಮಕ್ಕಳು ತಾಯಿಯೊಂದಿಗೇ ಇರಲು ಅನುಮತಿ ನೀಡಿದೆ. "ಸಹಜ ಪಾಲಕ ಎಂಬ ಮಾತ್ರಕ್ಕೆ ತಂದೆಗೆ ಸ್ವಯಂಚಾಲಿತವಾಗಿ ಕಸ್ಟಡಿ ಹಕ್ಕು ಸಿಗುವುದಿಲ್ಲ; ತಾಯಿ ಕೂಡ ಸಹಜ ಪಾಲಕರಾಗಿದ್ದು, ಮಕ್ಕಳ ಇಚ್ಛೆ ಮತ್ತು ಭಾವನಾತ್ಮಕ ಬಂಧವನ್ನು ಪರಿಗಣಿಸಬೇಕು" ಎಂದು ಪೀಠ ಅಭಿಪ್ರಾಯಪಟ್ಟಿದೆ.
ತಂದೆಗೆ ಭೇಟಿಯ ಅವಕಾಶ ಮುಂದುವರೆದು, ಮಕ್ಕಳ ಸಮತೋಲಿತ ಬೆಳವಣಿಗೆಗೆ ತಂದೆಯ ಪ್ರೀತಿಯೂ ಅಗತ್ಯ ಎಂದು ಹೇಳಿರುವ ನ್ಯಾಯಾಲಯ, ಪ್ರತಿ ತಿಂಗಳ ಎರಡನೇ ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಧುರೈನ ಗಾಂಧಿ ಮ್ಯೂಸಿಯಂನಲ್ಲಿ ಮಕ್ಕಳನ್ನು ಭೇಟಿಯಾಗಲು ತಂದೆಗೆ ಅನುಮತಿ ನೀಡಿದೆ. ಜೊತೆಗೆ ಪೊಂಗಲ್ ಮತ್ತು ಶಾಲಾ ರಜಾದಿನಗಳಲ್ಲಿ ಮುಂಚಿತವಾಗಿ ತಿಳಿಸಿ ಭೇಟಿಯಾಗಲು ಅವಕಾಶ ನೀಡಿದ್ದು, ಮಕ್ಕಳ ಮುಂದಿನ ಶಿಕ್ಷಣದ ವೆಚ್ಚಕ್ಕೆ ತಂದೆ ನೆರವಾಗಬೇಕು ಎಂದು ಸೂಚಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



