ಮದುವೆ ನಿರಾಕರಣೆ: ಸಿಟ್ಟಿಗೆ ಯುವತಿ, ಆಕೆಯ ಪೋಷಕರ ಮೇಲೆ ಆ್ಯಸಿಡ್ ಎರಚಿ ಚಾಕುವಿನಿಂದ ಇರಿದ ಯುವಕ

ಲಖನೌ: ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕೆ ಆಕ್ರೋಶಗೊಂಡ 25 ವರ್ಷದ ಯುವಕ ಯುವತಿಯ ಮೇಲೆ ಆ್ಯಸಿಡ್ ಎರಚಿ, ಆಕೆಯ ಪೋಷಕರು ಹಾಗೂ ಕಿರಿಯ ಸಹೋದರನ ಮೇಲೆ ಚಾಕುವಿನಿಂದ ದಾಳಿ ನಡೆಸಿರುವ ಘಟನೆ ಉತ್ತರ ಪ್ರದೇಶದಲ್ಲಿ ಲಖನೌನಲ್ಲಿ ನಿನ್ನೆ ಶನಿವಾರ ನಡೆದಿದೆ.
ಹುಸೇನ್‌ಗಂಜ್ ಪ್ರದೇಶದ 18 ವರ್ಷದ ಯುವತಿಯ ಮನೆಗೆ ಕಾಂಪೌಂಡ್ ಗೋಡೆ ಹತ್ತಿ ಪ್ರವೇಶಿಸಿದ ಆರೋಪಿ ತೌಸಿಫ್ ಶಾ ಅಲಿಯಾಸ್ ಮುನ್ನಾ, ಯುವತಿಯ ಮೇಲೆ ಆ್ಯಸಿಡ್ ಎರಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿಯ ಕಿರುಚಾಟ ಕೇಳಿ ಕುಟುಂಬದವರು ಆಕೆಯ ರಕ್ಷಣೆಗೆ ಧಾವಿಸಿದರು. ಈ ವೇಳೆ ಯುವತಿಯ ಪೋಷಕರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದನು. ಆಕೆಯ ಕಿರಿಯ ಸಹೋದರನೂ ಗಾಯಗೊಂಡಿದ್ದನು.
ಗಲಾಟೆ ಕೇಳಿ ನೆರೆಹೊರೆಯವರು ಮನೆಗಳಿಂದ ಹೊರಬಂದು ಆರೋಪಿಯನ್ನು ಹಿಡಿದು ಥಳಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಮುನ್ನಾಗೂ ಆ್ಯಸಿಡ್‌ನಿಂದ ಸುಟ್ಟ ಗಾಯಗಳಾಗಿದ್ದು, ಆತ ತನ್ನ ಮೇಲೂ ಗಾಯ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ಪಡೆದ ಪೊಲೀಸರು ಇಂದು ನಸುಕಿನ ಜಾವ ಸುಮಾರು 5 ಗಂಟೆಗೆ ಸ್ಥಳಕ್ಕೆ ಧಾವಿಸಿ, ಆರೋಪಿಯೂ ಸೇರಿದಂತೆ ಗಾಯಗೊಂಡ ಐವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದು, ಯುವತಿಯ ಸ್ಥಿತಿ ಗಂಭೀರವಾಗಿದೆ.
ಚಿಕಿತ್ಸೆ ಪಡೆಯುತ್ತಿರುವ ಆರೋಪಿಯ ಮೇಲೆ ಆಸ್ಪತ್ರೆಯಲ್ಲಿ ಪೊಲೀಸ್ ತಂಡ ನಿಗಾ ಇರಿಸಿದೆ ಎಂದು ಲಖನೌ ಸಹಾಯಕ ಪೊಲೀಸ್ ಆಯುಕ್ತ ಅಭಿಷೇಕ್ ಕುಮಾರ್ ಪಾಂಡೆ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಲಖನೌ ಪೊಲೀಸ್ ಉಪ ಆಯುಕ್ತ ಅರ್ಪಿತ್ ವಿಜಯವರ್ಗಿಯಾ ತಿಳಿಸಿದ್ದಾರೆ.
ಕಂಪ್ಯೂಟರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮುನ್ನಾ, ತನ್ನ ನೆರೆಮನೆಯ 18 ವರ್ಷದ ಯುವತಿಯನ್ನು ಮದುವೆಯಾಗಲು ಬಯಸಿದ್ದ. ಆಕೆ ದೂರದ ಸಂಬಂಧಿಯೂ ಆಗಿದ್ದಳು. ಆದರೆ ಯುವತಿ ಮತ್ತು ಆಕೆಯ ಕುಟುಂಬದವರು ಈ ಮದುವೆಗೆ ಆಸಕ್ತಿ ಹೊಂದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



