

ನ್ಯೂಯಾರ್ಕ್: 9/11 ದಾಳಿಯ ಪಾಠವನ್ನು ಮರೆಯದೆ, ಗಡಿಗಳಾಚೆ ಕಾರ್ಯನಿರ್ವಹಿಸುವ ಭಯೋತ್ಪಾದಕ ಜಾಲಗಳಿಗೆ ಆಶ್ರಯ, ಬೆಂಬಲ ಹಾಗೂ ರಕ್ಷಣೆ ನೀಡುವ ವ್ಯವಸ್ಥೆಯನ್ನು ಕಿತ್ತೊಗೆಯಬೇಕು ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಒತ್ತಾಯಿಸಿದೆ.
ಅಫ್ಘಾನಿಸ್ತಾನದ ಕುರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ ಭಾರತದ ಖಾಯಂ ಪ್ರತಿನಿಧಿ ರಾಯಭಾರಿ ಪರ್ವತನೇನಿ ಹರೀಶ್ ಅವರು, ಲಷ್ಕರ್-ಇ-ತೊಯ್ಬಾ (LeT) ಮತ್ತು ಜೈಷ್-ಇ-ಮೊಹಮ್ಮದ್ (JeM) ಸೇರಿದಂತೆ ಉಗ್ರ ಸಂಘಟನೆಗಳಿಗೆ ದೊರೆಯುತ್ತಿರುವ ಸುರಕ್ಷಿತ ನೆಲೆಗಳ ಕುರಿತು ಎಚ್ಚರಿಕೆ ನೀಡಿದರು.
ಭಯೋತ್ಪಾದಕ ಗುಂಪುಗಳು ಕಾನೂನಿನಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುವ ಇಡೀ ವ್ಯವಸ್ಥೆಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಬೇಕು ಎಂದು ಜಾಗತಿಕ ಸಮುದಾಯಕ್ಕೆ ಕರೆ ನೀಡಿದ್ದಾರೆ.
ಅಲ್‌ಖೈದಾ ಮತ್ತು ಸೆಪ್ಟೆಂಬರ್ 11ರ ದಾಳಿಗಳ ಅನುಭವವು ಸಾಂಪ್ರದಾಯಿಕ ಸಂಘರ್ಷ ವಲಯಗಳಾಚೆಯೂ ಭಯೋತ್ಪಾದಕ ಸಂಘಟನೆಗಳು ಬಲಿಷ್ಠ ಜಾಲಗಳನ್ನು ನಿರ್ಮಿಸಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ಭಯೋತ್ಪಾದಕ ಸಂಘಟನೆಗಳು ಮತ್ತು ಅವುಗಳ ಅಂಗಸಂಸ್ಥೆಗಳು ಕಾರ್ಯನಿರ್ವಹಿಸಲು, ಪತ್ತೆಯಿಂದ ತಪ್ಪಿಸಿಕೊಳ್ಳಲು ಹಾಗೂ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಅವಕಾಶ ಮಾಡಿಕೊಡುವ ವ್ಯವಸ್ಥೆಗಳನ್ನು ಕಿತ್ತೊಗೆಯುವತ್ತ ಅಂತರರಾಷ್ಟ್ರೀಯ ಸಮುದಾಯ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಸೆಪ್ಟೆಂಬರ್ 11ರ ದಾಳಿಯ ಬಳಿಕ ಭಯೋತ್ಪಾದನೆ ವಿರುದ್ಧ ನಡೆದ ಜಾಗತಿಕ ಹೋರಾಟದ ಉದಾಹರಣೆಯನ್ನು ನೀಡಿದ ಅವರು, ದಾಳಿಯ ಹಿಂದಿದ್ದ ಪ್ರಮುಖ ನಾಯಕರನ್ನು ಹಲವು ವರ್ಷಗಳ ಕಾಲ ಪತ್ತೆಯಾಗದೆ ಉಳಿದಿದ್ದರೂ ಅಂತಿಮವಾಗಿ ಪತ್ತೆಹಚ್ಚಲು ಸಾಧ್ಯವಾಯಿತು ಎಂದು ಹೇಳಿದರು.
ಸೆಪ್ಟೆಂಬರ್ 11ರ ಬಳಿಕ ಭಯೋತ್ಪಾದನೆ ವಿರುದ್ಧದ ಜಾಗತಿಕ ಹೋರಾಟಕ್ಕೆ ಅಂತರರಾಷ್ಟ್ರೀಯ ಸಮುದಾಯ ಬೆಂಬಲ ನೀಡಿತ್ತು. ಆದರೆ, ಅಲ್‌ಖೈದಾದ ಭಯೋತ್ಪಾದಕ ವ್ಯವಸ್ಥೆಯು ತನ್ನ ಅಂಗಸಂಸ್ಥೆಗಳ ಮೂಲಕ ಅಫ್ಘಾನಿಸ್ತಾನದಾಚೆಯೂ ಕಾರ್ಯತಂತ್ರದ ನೆಲೆಯನ್ನು ನಿರ್ಮಿಸಿಕೊಂಡಿತ್ತು ಎಂಬುದನ್ನು ಮರೆಯಬಾರದು” ಎಂದು ತಿಳಿಸಿದರು.
‘ಉಗ್ರರು ಗುಹೆಗಳಲ್ಲಿ ಅಥವಾ ನಿರ್ಜನ ಪ್ರದೇಶಗಳಲ್ಲಿ ಅಡಗಿರಲಿಲ್ಲ’
ಭಯೋತ್ಪಾದಕ ನಾಯಕರು ಕೇವಲ ದೂರದ ಅಥವಾ ಕಾನೂನು ಸುವ್ಯವಸ್ಥೆ ದುರ್ಬಲವಾಗಿರುವ ಪ್ರದೇಶಗಳಲ್ಲೇ ಕಾರ್ಯನಿರ್ವಹಿಸುತ್ತಾರೆ ಎಂಬ ಕಲ್ಪನೆ ಸರಿಯಲ್ಲ ಎಂದು ಹೇಳಿದ ಹರೀಶ್ ಅವರು, ಅಲ್‌ಖೈದಾದ ಹಲವು ಪ್ರಮುಖ ಸದಸ್ಯರನ್ನು ಅಂತಿಮವಾಗಿ ಬಂಧಿಸಿದ ಅಥವಾ ಹತ್ಯೆಗೈದ ಘಟನೆಗಳನ್ನು ಉಲ್ಲೇಖಿಸಿದರು.
ಸೆಪ್ಟೆಂಬರ್ 11ರ ದಾಳಿಯ ಸಂಚನ್ನು ರೂಪಿಸಿ ಅದಕ್ಕೆ ಹಣಕಾಸು ಒದಗಿಸಿದ್ದ ಒಸಾಮಾ ಬಿನ್ ಲಾಡೆನ್, ಜನವಸತಿ ಮತ್ತು ಭದ್ರತೆ ಹೊಂದಿದ್ದ ಪ್ರದೇಶದಲ್ಲಿನ ಭದ್ರಕೋಟೆಯಂತಹ ಕಟ್ಟಡವೊಂದರಲ್ಲಿ ಪತ್ತೆಯಾಗಿದ್ದ. ಬಳಿಕ ‘ಆಪರೇಷನ್ ನೆಪ್ಚೂನ್ ಸ್ಪಿಯರ್’ ಕಾರ್ಯಾಚರಣೆಯಲ್ಲಿ ಆತನನ್ನು ಹತ್ಯೆ ಮಾಡಲಾಯಿತು.
ದಾಳಿಯ ಪ್ರಮುಖ ರುವಾರಿ ಖಾಲಿದ್ ಶೇಖ್ ಮೊಹಮ್ಮದ್ ಸಾಮಾನ್ಯ ವಸತಿ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದಾಗ ಪತ್ತೆಯಾಗಿದ್ದ. ಅಪಹರಣಕಾರರ ತಂಡವನ್ನು ಸಂಯೋಜಿಸಿದ್ದ ರಾಮ್ಜಿ ಬಿನಾಲ್‌ಶಿಬ್ ಕೂಡ ನಗರ ಪ್ರದೇಶವೊಂದರಲ್ಲಿ ಪತ್ತೆಯಾಗಿದ್ದ.
ಅಲ್‌ಖೈದಾದ ಪ್ರಮುಖ ಸದಸ್ಯರಾದ ವಾಲಿದ್ ಬಿನ್ ಅತ್ತಾಶ್ ಮತ್ತು ಸೆಪ್ಟೆಂಬರ್ 11ರ ದಾಳಿಯ ಪ್ರಮುಖ ಹಣಕಾಸು ಹಾಗೂ ವ್ಯವಸ್ಥಾಪನಾ ಸಹಾಯಕ ಎಂದು ವಿವರಿಸಲಾದ ಮುಸ್ತಫಾ ಅಹ್ಮದ್ ಅಲ್-ಹವ್ಸಾವಿ ಅವರನ್ನು ಬಂಧಿಸಿರುವುದನ್ನೂ ಉಲ್ಲೇಖಿಸಿದರು.
ಇವರಲ್ಲಿ ಯಾರೂ ಗುಹೆಗಳಲ್ಲಿ ಅಥವಾ ನಿರ್ಜನ ಪ್ರದೇಶಗಳಲ್ಲಿ ಅಡಗಿಕೊಂಡಿರಲಿಲ್ಲ. ಬದಲಾಗಿ, ದೀರ್ಘಕಾಲ ಪತ್ತೆಯಾಗದೆ ತಪ್ಪಿಸಿಕೊಂಡಿದ್ದ ವ್ಯಕ್ತಿಗಳಾಗಿದ್ದರು.
ಹೀಗಾಗಿ ಭಯೋತ್ಪಾದನೆ ವಿರುದ್ಧದ ಅಂತರರಾಷ್ಟ್ರೀಯ ಪ್ರಯತ್ನಗಳು ದೂರದ ಪ್ರದೇಶಗಳಲ್ಲಿರುವ ಉಗ್ರರನ್ನು ಪತ್ತೆಹಚ್ಚುವುದಕ್ಕೆ ಮಾತ್ರ ಸೀಮಿತವಾಗಬಾರದು. ಇಂತಹ ಜಾಲಗಳು ಉಳಿದುಕೊಂಡು ವಿಸ್ತರಿಸಲು ಅವಕಾಶ ನೀಡುವ ವ್ಯಾಪಕ ವ್ಯವಸ್ಥೆಗಳ ಮೇಲೂ ಗಮನಹರಿಸಬೇಕು. ಇಂತಹ ಮಾನವೀಯತೆಗೆ ಅಪಾಯಕಾರಿಯಾದ ಭಯೋತ್ಪಾದಕ ಶಕ್ತಿಗಳು ಬೆಳೆಯಲು ಅನುಕೂಲ ಮಾಡಿಕೊಟ್ಟ ಪರಿಸರವನ್ನು ನಿರ್ಮೂಲನೆ ಮಾಡುವುದು ಮುಖ್ಯ ದು ಹೇಳಿದರು.
ಇದೇ ವೇಳೆ ಸೆಪ್ಟೆಂಬರ್ 11ರ ದಾಳಿಗೆ ಕಾರಣವಾದ ಅಲ್‌ಖೈದಾ ಜಾಲದ ಬಳಿಕವೂ ಇದೇ ರೀತಿಯ ಪರಿಸ್ಥಿತಿ ಮುಂದುವರಿದಿದೆ ಎಂದು ಭಾರತ ಎಚ್ಚರಿಸಿದೆ.
ವರ್ಷಗಳ ಕಾಲ ಇದೇ ರೀತಿಯ ‘ಸಹಾಯಕ ವಾತಾವರಣ’ ಅಲ್‌ಖೈದಾದ ಅಂಗಸಂಸ್ಥೆಗಳಾದ ಲಷ್ಕರ್-ಇ-ತೊಯ್ಬಾ ಮತ್ತು ಜೈಷ್-ಇ-ಮೊಹಮ್ಮದ್ ಸೇರಿದಂತೆ ಕೆಲವು ಸಂಘಟನೆಗಳಿಗೆ ಕಾರ್ಯನಿರ್ವಹಿಸಲು ಸ್ಥಳ, ಬೆಂಬಲ ಮತ್ತು ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಅವಕಾಶ ಕಲ್ಪಿಸಿದೆ ಎಂದು ಆರೋಪಿಸಿದರು.
ಕೆಲವು ಸಂಘಟನೆಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಬಂಧಗಳ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲು ವಿವಿಧ ಹೆಸರುಗಳು ಮತ್ತು ಗುರುತುಗಳನ್ನು ಬಳಸಿಕೊಂಡಿವೆ. ಆದರೆ, ಅವುಗಳ ನಾಯಕತ್ವ ಹಾಗೂ ಭಯೋತ್ಪಾದನಾ ತರಬೇತಿ ಮೂಲಸೌಕರ್ಯಗಳು ಪರಿಣಾಮಗಳಿಂದ ರಕ್ಷಿಸಲ್ಪಟ್ಟಿವೆ ಎಂದು ಆರೋಪಿಸಿದರು.
ಗಡಿಗಳಾಚೆ ಕಾರ್ಯನಿರ್ವಹಿಸುವ ಭಯೋತ್ಪಾದಕ ಜಾಲಗಳಿಗೆ ಮುಂದುವರಿದಿರುವ ಆಶ್ರಯದ ವಿರುದ್ಧ ಸಂಘಟಿತ ಅಂತರರಾಷ್ಟ್ರೀಯ ಪ್ರತಿಕ್ರಿಯೆಗೆ ಭಾರತ ಕರೆ ನೀಡಿದೆ.
ಇಂತಹ ಆಶ್ರಯ ಮುಂದುವರಿಯದಂತೆ ಅಂತರರಾಷ್ಟ್ರೀಯ ಸಮುದಾಯ ಒಗ್ಗಟ್ಟಿನಿಂದ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿರುವ ಮತ್ತಷ್ಟು ವ್ಯಕ್ತಿಗಳು ಮತ್ತು ಸಂಘಟನೆಗಳು ಶಿಕ್ಷೆಯಿಂದ ತಪ್ಪಿಸಿಕೊಂಡು ಕಾರ್ಯನಿರ್ವಹಿಸುವ ಸಾಧ್ಯತೆಯಿದೆ ಎಂದು ಎಚ್ಚರಿಸಿದರು.
ಬಳಿಕ ಅಫ್ಘಾನಿಸ್ತಾನಕ್ಕೆ ಮರಳುತ್ತಿರುವ ಜನರು ಎದುರಿಸುತ್ತಿರುವ ಮಾನವೀಯ ಬಿಕ್ಕಟ್ಟಿನ ಬಗ್ಗೆಯೂ ಭಾರತ ಕಳವಳ ವ್ಯಕ್ತಪಡಿಸಿದೆ.
2025ರಲ್ಲಿ 29 ಲಕ್ಷ ಅಫ್ಘಾನಿಸ್ತಾನಿಗಳು ದೇಶಕ್ಕೆ ಮರಳಿದ್ದು, 2026ರ ಆಗಸ್ಟ್ 22ರವರೆಗೆ ಮತ್ತೂ 11.5 ಲಕ್ಷ ಮಂದಿ ಮರಳಿದ್ದಾರೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ವರದಿಯನ್ನು ಉಲ್ಲೇಖಿಸಿ ಹರೀಶ್ ಹೇಳಿದರು. ಇವರಲ್ಲಿ ಹೆಚ್ಚಿನವರು ಬಲವಂತವಾಗಿ ಹಿಂದಿರುಗಿದವರು ಎಂದು ತಿಳಿಸಿದರು.
ಮರಳುವಿಕೆ ಸ್ವಯಂಪ್ರೇರಿತ, ಸುರಕ್ಷಿತ ಹಾಗೂ ಗೌರವಯುತವಾಗಿರಬೇಕು ಎಂದು ಭಾರತ ಒತ್ತಿಹೇಳಿದ್ದು, ಆಹಾರ ಮತ್ತು ಆಶ್ರಯ ಸೇರಿದಂತೆ ಅಗತ್ಯ ನೆರವು ಒದಗಿಸಲು ವಿಶ್ವಸಂಸ್ಥೆಯ ಸಂಸ್ಥೆಗಳು ಮತ್ತು ಅಫ್ಘಾನ್ ಅಧಿಕಾರಿಗಳೊಂದಿಗೆ ಸಹಕರಿಸುತ್ತಿದೆ ಎಂದು ತಿಳಿಸಿದೆ.
ಆದರೆ, ಭದ್ರತಾ ಮಂಡಳಿಯಲ್ಲಿನ ಭಾರತದ ಪ್ರಮುಖ ಸಂದೇಶವು ಭಯೋತ್ಪಾದಕ ಜಾಲಗಳಿಗೆ ಪ್ರದೇಶ, ಸಂಪನ್ಮೂಲಗಳು, ಬೆಂಬಲ ವ್ಯವಸ್ಥೆಗಳು ಮತ್ತು ಸುರಕ್ಷಿತ ಆಶ್ರಯಗಳು ಲಭ್ಯವಾಗುವುದರಿಂದ ಉಂಟಾಗುವ ಭದ್ರತಾ ಪರಿಣಾಮಗಳ ಕುರಿತಾಗಿತ್ತು.
ಸೆಪ್ಟೆಂಬರ್ 11ರ ದಾಳಿಯ 25ನೇ ವಾರ್ಷಿಕೋತ್ಸವದ ಕೆಲವೇ ದಿನಗಳ ಬಳಿಕ ಈ ಹೇಳಿಕೆ ಬಂದಿದೆ. ಆ ದಾಳಿಯಲ್ಲಿ 2,977 ಮಂದಿ ಮೃತಪಟ್ಟಿದ್ದು, ಬಳಿಕ ಅಲ್‌ಖೈದಾ ಮತ್ತು ತಾಲಿಬಾನ್ ವಿರುದ್ಧ ಅಫ್ಘಾನಿಸ್ತಾನದಲ್ಲಿ ಅಮೆರಿಕ ನೇತೃತ್ವದ ಸೇನಾ ಕಾರ್ಯಾಚರಣೆ ಆರಂಭವಾಗಿತ್ತು.