ರಾಹುಲ್​ಗೆ ಎಳ್ಳಷ್ಟು ರಾಜಕೀಯ ಜ್ಞಾನವಿಲ್ಲ ,ಮುಸ್ಲಿಂ ಲೀಗ್​​ನಿಂದ ಪ್ರಿಯಾಂಕಾಗೆ ಗೆಲುವು; ಸುಧಾಂಶು ತ್ರಿವೇದಿ

ಬಂಗಾಳದಲ್ಲಿ 1977 ರಿಂದ, ಬಿಹಾರದಲ್ಲಿ 1990 ರಿಂದ, ಉತ್ತರ ಪ್ರದೇಶದಲ್ಲಿ 1989 ರಿಂದ, ಒಡಿಶಾದಲ್ಲಿ 1999 ರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿಲ್ಲ ಎಂದು ತ್ರಿವೇದಿ ಅಂಕಿ-ಅಂಶಗಳ ಸಮೇತ ಕೈ ನಾಯಕರಿಗೆ ಕುಟುಕಿದರು.
rahul and priyanka
ರಾಹುಲ್ ಮತ್ತು ಪ್ರಿಯಾಂಕಾ
Updated on: 

ನವದೆಹಲಿ: ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆ ಮತ್ತು ಕೇಂದ್ರ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ದಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ನಡೆಸಿದ ಪತ್ರಿಕಾಗೋಷ್ಠಿಯ ವಿರುದ್ಧ ಬಿಜೆಪಿ ತಿರುಗೇಟು ನೀಡಿದ್ದು, ರಾಹುಲ್​ಗೆ ಎಳ್ಳಷ್ಟು ರಾಜಕೀಯ ಜ್ಞಾನವಿಲ್ಲ ಎಂದು ಬಿಜೆಪಿ ಟೀಕಿಸಿದೆ.

ರಾಹುಲ್ ಗಾಂಧಿ ಅವರ ಪತ್ರಿಕಾಗೋಷ್ಠಿ ಕುರಿತಾಗಿ ಪ್ರತಿಕ್ರಿಯೆ ನೀಡಿದ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ, ಕಾಂಗ್ರೆಸ್ ತನ್ನ ಸ್ವಂತ ಬಲದ ಮೇಲೆ ಒಂದೇ ಒಂದು ಚುನಾವಣೆಯನ್ನೂ ಗೆಲ್ಲಲು ಸಾಧ್ಯವಾಗಿಲ್ಲ. ಪ್ರಿಯಾಂಕಾ ಗಾಂಧಿ ಅವರು ಮುಸ್ಲಿಂ ಲೀಗ್ ಬೆಂಬಲದೊಂದಿಗೆ ವಯನಾಡ್ ಕ್ಷೇತ್ರವನ್ನು ಗೆದ್ದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬಂಗಾಳದಲ್ಲಿ 1977 ರಿಂದ, ಬಿಹಾರದಲ್ಲಿ 1990 ರಿಂದ, ಉತ್ತರ ಪ್ರದೇಶದಲ್ಲಿ 1989 ರಿಂದ, ಒಡಿಶಾದಲ್ಲಿ 1999 ರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿಲ್ಲ ಎಂದು ತ್ರಿವೇದಿ ಅಂಕಿ-ಅಂಶಗಳ ಸಮೇತ ಕೈ ನಾಯಕರಿಗೆ ಕುಟುಕಿದರು.

ಚುನಾವಣಾ ಆಯೋಗದ ಪ್ರಕ್ರಿಯೆ ಮತ್ತು ಎಸ್‌ಐಆರ್ ಕುರಿತ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯನ್ನು ಪ್ರಶ್ನಿಸಿದ ಸುಧಾಂಶು ತ್ರಿವೇದಿ, ವರದಿಯಲ್ಲಿ ಚುನಾವಣಾ ಆಯುಕ್ತರ ಹೇಳಿಕೆಗಳನ್ನು ಏಕೆ ಬಳಸಲಾಗಿಲ್ಲ, ಆರೋಪ ಹೊತ್ತಿರುವವರ ಹೇಳಿಕೆಗಳೇ ಇಲ್ಲದೆ, ಅವರ ವಿರುದ್ಧವಾಗಿ ಒಂದು ಪರಿಪೂರ್ಣ ಮತ್ತು ನೈಜ ವರದಿ ಸಿದ್ಧಪಡಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

rahul and priyanka
'ಮೋದಿ, ಶಾ, ಜ್ಞಾನೇಶ್ ಕುಮಾರ್ ದೇಶದ್ರೋಹಿಗಳು'; ನೂರಕ್ಕೆ ನೂರರಷ್ಟು ಎಲ್ಲಾ ಚುನಾವಣೆಗಳಲ್ಲೂ ಅಕ್ರಮ; ಸಂಚುಕೋರರಿಗೆ ಶಿಕ್ಷೆಯಾಗಬೇಕು: ರಾಹುಲ್ ಗಾಂಧಿ

ಇದಕ್ಕೂ ಮುನ್ನ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ದೇಶದ ಚುನಾವಣಾ ವ್ಯವಸ್ಥೆಯ ಮೇಲೆಯೇ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿ, ತಕ್ಷಣವೇ ತಮ್ಮ ಹುದ್ದೆಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದರು.

ಬಿಜೆಪಿ ಸರ್ಕಾರ ರಚಿಸಿದ ನಂತರವಷ್ಟೇ ಆಡಳಿತ ವಿರೋಧಿ ಅಲೆ ಒಂದು ಸ್ಥಾಪಿತ ಪ್ರವೃತ್ತಿಯಾಗಿದೆ ಎಂಬ ರಾಹುಲ್ ಗಾಂಧಿಯವರ ಹೇಳಿಕೆಯನ್ನು ತಳ್ಳಿಹಾಕಿದ ಬಿಜೆಪಿ ನಾಯಕ, ಇದು ರಾಜಕೀಯ ವಿವೇಕದ ಸಂಪೂರ್ಣ ಕೊರತೆ ಎಂದು ಬಣ್ಣಿಸಿದರು. ಕಾಂಗ್ರೆಸ್ ವಿರುದ್ಧ ಆಡಳಿತ ವಿರೋಧಿ ಅಲೆ ಖಂಡಿತವಾಗಿಯೂ ಬಹಳ ಸ್ಥಿರವಾಗಿದೆ ಮತ್ತು ಪ್ರಬಲವಾಗಿದೆ ಎಂಬುದು ಸತ್ಯ," ಎಂದು ತ್ರಿವೇದಿ ಅಭಿಪ್ರಾಯಪಟ್ಟರು.

ರಾಹುಲ್ ಗೆ ಭಾರತೀಯ ರಾಜಕೀಯ ಇತಿಹಾಸದ ಬಗ್ಗೆ ಅರಿವಿಲ್ಲವೇ? 1967 ರಿಂದೀಚೆಗೆ ಕಾಂಗ್ರೆಸ್ ತಮಿಳುನಾಡಿನಲ್ಲಿ ಎಂದಿಗೂ ಅಧಿಕಾರಕ್ಕೆ ಮರಳಿಲ್ಲ - ಆಗ ಭಾರತೀಯ ಜನತಾ ಪಕ್ಷವು ಅಸ್ತಿತ್ವದಲ್ಲಿಯೂ ಇರಲಿಲ್ಲ. ಬಂಗಾಳದಲ್ಲಿ 1977 ರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿಲ್ಲ. ಮತ್ತು 1977 ರಿಂದ 2011 ರವರೆಗೆ, ಅಂದರೆ 34 ವರ್ಷಗಳ ಕಾಲ ಅಲ್ಲಿ ಕಮ್ಯುನಿಸ್ಟ್ ಸರ್ಕಾರವಿತ್ತು.

ಆದರೂ, ರಾಹುಲ್ ಗಾಂಧಿಯವರಿಗೆ ಇದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ "ಬಿಹಾರದಲ್ಲಿ 1990 ರಿಂದ ಕಾಂಗ್ರೆಸ್ ಸರ್ಕಾರವಿಲ್ಲ. ಉತ್ತರ ಪ್ರದೇಶದಲ್ಲಿ 1989 ರಿಂದ ಕಾಂಗ್ರೆಸ್ ಅಧಿಕಾರದಲ್ಲಿಲ್ಲ. 1999 ರಿಂದ ಒಡಿಶಾದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿಲ್ಲ. ರಾಹುಲ್ ಗಾಂಧಿಗೆ ಇದರ ಅರಿವಿಲ್ಲ... ಪಾರದರ್ಶಕ ಚುನಾವಣೆಗಳು, ಸಿಸಿಟಿವಿ ಕ್ಯಾಮೆರಾಗಳು ಮತ್ತು ಸ್ವತಂತ್ರ ಮಾಧ್ಯಮಗಳು ಬಂದಾಗಿನಿಂದ, ಅವರಿಗೆ ಅಧಿಕಾರಕ್ಕೆ ಬರುವುದು ಕಷ್ಟಕರವಾಗಿದೆ," ಎಂದು ವಾಗ್ದಾಳಿ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com