Nepal flood: ಇನ್ನೂ ಪತ್ತೆಯಾಗದ ತಮಿಳು ನಾಡಿನ 85 ಯಾತ್ರಿಕರು; ಕುಟುಂಬಸ್ಥರ ಅರಣ್ಯರೋಧನ

ಸೆಪ್ಟೆಂಬರ್ 15ರಂದು ಅವರು ಅನಿವಾಸಿ ತಮಿಳರ ಇಲಾಖೆ(NRT) ಕಲ್ಯಾಣ ಸಚಿವ ಕೆ. ತೆನ್ನರಸು ಅವರನ್ನು ಭೇಟಿಯಾಗಿ, ಸೆಪ್ಟೆಂಬರ್ 21ರಂದು ಸಿಂಗಪೆರುಮಾಳ್ ಕೋಯಿಲ್‌ನಲ್ಲಿ ಉಪವಾಸ ಸತ್ಯಾಗ್ರಹವನ್ನೂ ನಡೆಸಿ ಮಾಹಿತಿ ನೀಡುವಂತೆ ಒತ್ತಾಯಿಸಿದ್ದರು.
Nepal flood: ಇನ್ನೂ ಪತ್ತೆಯಾಗದ ತಮಿಳು ನಾಡಿನ 85 ಯಾತ್ರಿಕರು; ಕುಟುಂಬಸ್ಥರ ಅರಣ್ಯರೋಧನ
Updated on: 

ಚೆನ್ನೈ: ನೇಪಾಳದ ಹಠಾತ್ ಪ್ರವಾಹ ಸಂಭವಿಸಿ ಒಂದು ತಿಂಗಳು ಕಳೆದರೂ, ತಮಿಳುನಾಡಿನ 85 ಯಾತ್ರಿಕರ ಸುಳಿವು ಇನ್ನೂ ಪತ್ತೆಯಾಗಿಲ್ಲ. ತಮ್ಮವರಿಗಾಗಿ ಕಾಯುತ್ತಿರುವ ಕುಟುಂಬಗಳು ನೋವು, ಆತಂಕದ ನಡುವೆಯೇ ದಿನದೂಡುತ್ತಿವೆ.

ಸೆಪ್ಟೆಂಬರ್ 15ರಂದು ಅವರು ಅನಿವಾಸಿ ತಮಿಳರ ಇಲಾಖೆ(NRT) ಕಲ್ಯಾಣ ಸಚಿವ ಕೆ. ತೆನ್ನರಸು ಅವರನ್ನು ಭೇಟಿಯಾಗಿ, ಸೆಪ್ಟೆಂಬರ್ 21ರಂದು ಸಿಂಗಪೆರುಮಾಳ್ ಕೋಯಿಲ್‌ನಲ್ಲಿ ಉಪವಾಸ ಸತ್ಯಾಗ್ರಹವನ್ನೂ ನಡೆಸಿ ಮಾಹಿತಿ ನೀಡುವಂತೆ ಒತ್ತಾಯಿಸಿದ್ದರು.

ತಮ್ಮವರ ಕುರಿತು ಯಾವುದೇ ಖಚಿತ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ, ಕುಟುಂಬಗಳು ಬಹುತೇಕ ಏಕಾಂಗಿಯಾಗಿ ಹೋರಾಟ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದ್ದಾರೆ. ಕೆಲವರು ನೇಪಾಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆಯಲ್ಲಿ ನೆರವಾಗಲು ಸಿದ್ಧರಿರುವುದಾಗಿಯೂ ತಿಳಿಸಿದ್ದಾರೆ.

ಮಾಧ್ಯಮಗಳಲ್ಲಿ ಈ ದುರಂತದ ಕುರಿತು ವರದಿ ಬರುತ್ತಿರುವುದು ಕಡಿಮೆಯಾಗುತ್ತಿರುವ ಬಗ್ಗೆ TNIE ಜತೆ ಮಾತನಾಡಿದ ಕ್ರೋಂಪೇಟೆಯ 55 ವರ್ಷದ ಎನ್. ಮರವೇಳ್ ನೇಪಾಳಕ್ಕೆ 49 ಯಾತ್ರಿಕರನ್ನು ಕರೆದೊಯ್ದಿದ್ದ ಮಹಾದೇವ್ ಕೈಲಾಶ್ ಯಾತ್ರೆಯ ಮಾಲೀಕರಾಗಿದ್ದಾರೆ. ಆ ಯಾತ್ರಿಕರೆಲ್ಲರೂ ಇನ್ನೂ ನಾಪತ್ತೆಯಾಗಿದ್ದಾರೆ. ಬಹುಶಃ ನಾವು ಈಗ ಹಳೆಯ ಸುದ್ದಿಯಾಗಿದ್ದೇವೆ. ತಮಿಳುನಾಡು ಮತ್ತು ಚೆನ್ನೈನಲ್ಲಿ ಪ್ರತಿದಿನ ಸಾಕಷ್ಟು ಘಟನೆಗಳು ನಡೆಯುತ್ತಿವೆ. ಹೀಗಾಗಿ ನಮ್ಮ ಸಮಸ್ಯೆಯ ಬಗ್ಗೆ ಮಾತನಾಡಲು ಯಾರಿಗೂ ಆಸಕ್ತಿ ಇಲ್ಲದಂತಾಗಿದೆ ಎಂದು ಹೇಳಿದರು.

Nepal flood: ಇನ್ನೂ ಪತ್ತೆಯಾಗದ ತಮಿಳು ನಾಡಿನ 85 ಯಾತ್ರಿಕರು; ಕುಟುಂಬಸ್ಥರ ಅರಣ್ಯರೋಧನ
ನೇಪಾಳ ಪ್ರವಾಹ ದುರಂತ: ಸಂತ್ರಸ್ತರ ಕುಟುಂಬಸ್ಥರ DNA ಮಾದರಿ ಸಂಗ್ರಹಕ್ಕೆ ಸರ್ಕಾರ ಮುಂದು; ಬೌರಿಂಗ್ ಆಸ್ಪತ್ರೆಯಲ್ಲಿ ವ್ಯವಸ್ಥೆ..!

ಮರವೇಳ್ ಅವರ 28 ವರ್ಷದ ಪುತ್ರ ಎನ್. ಸತ್ಯ ನಾರಾಯಣನ್ ಕೂಡ ನಾಪತ್ತೆಯಾಗಿದ್ದಾರೆ. ಅವರು ಚೆನ್ನೈನಿಂದ ತೆರಳಿದ್ದ 48 ಯಾತ್ರಿಕರ ತಂಡದ ನೇತೃತ್ವ ವಹಿಸಿದ್ದರು. ಈ ತಂಡ ಹಿಮಾಲಯ ಪ್ರವಾಸವನ್ನು ಪೂರ್ಣಗೊಳಿಸಿ, ಪ್ರವಾಹ ಅಪ್ಪಳಿಸಿದಾಗ ಚೀನಾದ ವಲಸೆ ನಿಯಂತ್ರಣ ಕೇಂದ್ರದಲ್ಲಿತ್ತು.

ನಾನು ಆಧ್ಯಾತ್ಮಿಕ ವ್ಯಕ್ತಿ. ನಮ್ಮ ಕುಟುಂಬವೂ ಜ್ಯೋತಿಷ್ಯದಲ್ಲಿ ನಂಬಿಕೆ ಇಟ್ಟಿದೆ. ಸತ್ಯ ನಾರಾಯಣನ್ ಬದುಕಿದ್ದಾರೆ, ಆದರೆ ನಮ್ಮನ್ನು ಸಂಪರ್ಕಿಸಲು ಸಾಧ್ಯವಾಗದ ಸ್ಥಳದಲ್ಲಿದ್ದಾರೆ. ಭಾಷೆಯ ಸಮಸ್ಯೆ ಇರುವ ಸ್ಥಳವೊಂದರಲ್ಲಿ ಅವರು ಸಿಲುಕಿಕೊಂಡಿದ್ದಾರೆ. ನಾವು ಭರವಸೆ ಕಳೆದುಕೊಂಡಿಲ್ಲ. ಅವರ ಒಂಬತ್ತು ತಿಂಗಳ ಮಗು ತಂದೆಯ ವಾಪಸಾತಿಗಾಗಿ ಕಾಯುತ್ತಿದೆ ಎಂದು ಮರವೇಳ್ ಹೇಳಿದರು.

ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸುವುದು ಹಾಗೂ ನಾಪತ್ತೆಯಾದವರನ್ನು ಗುರುತಿಸುವ ಉದ್ದೇಶದಿಂದ ಸರ್ಕಾರ ಡಿಎನ್‌ಎ ಪ್ರೊಫೈಲಿಂಗ್ ಪ್ರಕ್ರಿಯೆಯನ್ನು ಘೋಷಿಸಿತ್ತು. ಇದರಡಿ, ನಾಪತ್ತೆಯಾದವರ ಮೊದಲ ಹಂತದ ಜೈವಿಕ ಸಂಬಂಧಿಕರ ಡಿಎನ್‌ಎ ಪ್ರೊಫೈಲ್‌ಗಳನ್ನು ನೇಪಾಳ ಮತ್ತು ಚೀನಾ ಸರ್ಕಾರಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ. ಎನ್‌ಆರ್‌ಟಿ ಇಲಾಖೆಯ ಪ್ರಕಾರ, ಕನಿಷ್ಠ 78 ನಾಪತ್ತೆಯಾದವರ ಕುಟುಂಬ ಸದಸ್ಯರು ಡಿಎನ್‌ಎ ರಕ್ತದ ಮಾದರಿಗಳನ್ನು ನೀಡಿದ್ದಾರೆ.

ತಮ್ಮ ಪೋಷಕರೊಂದಿಗೆ ಈ ಯಾತ್ರೆಗೆ ತೆರಳಿ ನಾಪತ್ತೆಯಾಗಿರುವ ಕಾಂಚೀಪುರಂನ ಮಹಿಳೆಯೊಬ್ಬರು TNIE ಜೊತೆ ಮಾತನಾಡಿ, ಸೆಪ್ಟೆಂಬರ್ 16ರಂದು ತಮ್ಮ ಡಿಎನ್‌ಎ ಪ್ರೊಫೈಲ್‌ಗಳನ್ನು ನೇಪಾಳ ಮತ್ತು ಚೀನಾ ಸರ್ಕಾರಗಳಿಗೆ ಕಳುಹಿಸಲಾಗಿದೆ ಎಂಬ ಸ್ವೀಕೃತಿ ಪತ್ರ ತಮಗೆ ದೊರೆತಿದೆ ಎಂದು ಹೇಳಿದರು. ಆದರೆ 10 ದಿನ ಕಳೆದರೂ ಯಾವುದೇ ಮುಂದಿನ ಮಾಹಿತಿ ದೊರೆತಿಲ್ಲ.

ನಾನು ಸರ್ಕಾರದಿಂದ ಏನನ್ನೂ ಕೇಳುತ್ತಿಲ್ಲ, ಅವರನ್ನು ದೂಷಿಸುತ್ತಲೂ ಇಲ್ಲ. ನಾನು ಎಷ್ಟು ದಿನ ಕಾಯಬೇಕು ಎಂಬುದನ್ನು ಮಾತ್ರ ತಿಳಿದುಕೊಳ್ಳಲು ಬಯಸುತ್ತೇನೆ. ಕಾಯುವ ಸಮಯಕ್ಕೂ ಒಂದು ಮಿತಿ ಇರಬೇಕಲ್ಲವೇ ಎಂದು ಕೇಳುತ್ತಾರೆ.

ತಮ್ಮ ಪೋಷಕರು ಈ ಯಾತ್ರೆಗೆ ತೆರಳಿ ನಾಪತ್ತೆಯಾಗಿರುವ 17 ವರ್ಷದ ಶಾಲಾ ಬಾಲಕನ ಬಗ್ಗೆಯೂ ಆ ಮಹಿಳೆ ಮಾತನಾಡುತ್ತಾರೆ. ಆತನ ಶಿಕ್ಷಣ, ವಿದ್ಯುತ್ ಬಿಲ್‌ಗಳು ಮತ್ತು ಇತರ ಅಗತ್ಯ ವೆಚ್ಚಗಳನ್ನು ಭರಿಸಲು ಯಾರೂ ಇಲ್ಲದ ಕಾರಣ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಅವನ ಭವಿಷ್ಯಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ತಂಜಾವೂರಿನ ಸ್ವಾಮಿಮಲೈನ 34 ವರ್ಷದ ಆರ್. ಮಣಿಕಂದನ್ ಅವರ ಪೋಷಕರಾದ ಡಿ. ರಾಜಕುಮಾರ್ ಮತ್ತು ಆರ್. ಜಯಂತಿ ಕೂಡ ನಾಪತ್ತೆಯಾದ ಯಾತ್ರಿಕರಲ್ಲಿದ್ದಾರೆ. ನಮ್ಮ ಪೋಷಕರು ನಾಪತ್ತೆಯಾಗಿದ್ದು, ಅವರ ಸುಳಿವು ಸಿಗದಿರುವ ವಾಸ್ತವವನ್ನು ಒಪ್ಪಿಕೊಳ್ಳಲು ನಮಗೆ ಇನ್ನೂ ಸಾಧ್ಯವಾಗುತ್ತಿಲ್ಲ. ಯಾವುದೇ ಮಾಹಿತಿ ನಮಗೆ ಬಂದಿಲ್ಲ. ನಾವು ಸಂಪೂರ್ಣವಾಗಿ ತಮಿಳುನಾಡು ಸರ್ಕಾರವನ್ನೇ ಅವಲಂಬಿಸಿದ್ದೇವೆ ಎಂದು ಹೇಳಿದರು.

ತಮ್ಮ ತಾಯಿ ಆರ್. ಶಿವಯೋಗಂ (65ವ) ನಾಪತ್ತೆಯಾಗಿರುವ ಆರ್. ಅನಿತಾ, ನೇಪಾಳದಲ್ಲಿ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದರು. ಕನಿಷ್ಠ ಅವರು ಪ್ರಯತ್ನವನ್ನಾದರೂ ಮಾಡಬಹುದಿತ್ತು. ನೇಪಾಳದ ಆಸ್ಪತ್ರೆಗಳಲ್ಲೂ ತಮಿಳು ಭಾಷೆ ಬಲ್ಲ ಸಿಬ್ಬಂದಿಯ ನೆರವಿನಿಂದ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.

ತಮ್ಮ ಅತ್ತೆ ಎಂ. ಚಿತ್ರಾ (62ವ), ನಾಪತ್ತೆಯಾಗಿರುವ ಸುಜಿತಾ, ಇತ್ತೀಚೆಗೆ ಚೆನ್ನೈನಲ್ಲಿ ಸರ್ಕಾರಿ ಅಧಿಕಾರಿಗಳನ್ನು ಭೇಟಿಯಾದ ಸಂಬಂಧಿಕರಿಗೂ ಯಾವುದೇ ಮಹತ್ವದ ಮಾಹಿತಿ ದೊರೆತಿಲ್ಲ ಎಂದು ಹೇಳಿದರು.

ಮಯಿಲಾಡುತುರೈನ ಉದಯಕುಮಾರ್ ಅವರ ಪತ್ನಿ ರಾಜೇಶ್ವರಿ (57ವ) ನಾಪತ್ತೆಯಾಗಿರುವುದು ಅವರ ಮನೆಯವರನ್ನು ದಿಕ್ಕೇ ತೋಚದಂತೆ ಮಾಡಿದೆ. ನಾನು ಪ್ರತಿದಿನ ಅವರಿಗಾಗಿ ಪ್ರಾರ್ಥಿಸುತ್ತಿದ್ದೇನೆ. ಇನ್ನೇನು ಮಾಡಲು ಸಾಧ್ಯ ಎಂದು ಕೇಳಿದರು.

TNIE ಹಲವು ಬಾರಿ ಪ್ರಯತ್ನಿಸಿದರೂ, ಈ ಕುರಿತು ಪ್ರತಿಕ್ರಿಯೆ ಪಡೆಯಲು ಎನ್‌ಆರ್‌ಟಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com