ಮೈಸೂರು: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಬಿಜೆಪಿಯು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿರುವುದು ದೊಡ್ಡ ಪರಿವರ್ತನೆಗೆ ನಾಂದಿಯಾಗಲಿದೆ ಎಂಬುದು ಕೇವಲ ಭ್ರಮೆ. ಈಗಾಗಲೇ ಮೋದಿ ಅವರು ಪ್ರಧಾನಿ ಆಗೋದ್ರು ಎಂದು ಆರ್‌ಎಸ್‌ಎಸ್ ಹಾಗೂ ಬಿಜೆಪಿ ದೇಶದ ಜನರಲ್ಲಿ ಭ್ರಮೆ ಹುಟ್ಟಿಸುತ್ತಿವೆ ಎಂದು ವಿಶ್ವನಾಥ್ ಕಿಡಿ ಕಾರಿದರು.
ಮೈಸೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ವಿಶ್ವನಾಥ್, 'ಕಾಂಗ್ರೆಸ್ ಕಾರ್ಯಕ್ರಮ ಆಧಾರಿತ ಪಕ್ಷ. ಆದರೆ, ಬಿಜೆಪಿ ಯಾವ ಕಾರ್ಯಕ್ರಮ ಕೊಡುತ್ತದೆ? ನರೇಂದ್ರ ಮೋದಿ ಅವರಿಂದ ಬಡವರಿಗೆ ಮನೆ, ನಿವೇಶನ, ಶಾಲೆ, ಚಿಕಿತ್ಸೆ, ಸುಭದ್ರ ಹಾಗೂ ಶಾಂತಿ, ಸಮಾಧಾನಕರ ಆಡಳಿತ ನೀಡಲು ಸಾಧ್ಯವೇ' ಎಂದು ಅವರು ಪ್ರಶ್ನಿಸಿದರು. ಬಿಜೆಪಿಗೆ ಯಾರ ಬಗ್ಗೆಯೂ ಗೌರವ ಇಲ್ಲ. ಮುತ್ಸದ್ಧಿ ನಾಯಕ ಎಲ್.ಕೆ. ಆಡ್ವಾಣಿ ಅವರಿಗೆ ಬೆಲೆ ನೀಡುತ್ತಿಲ್ಲ. ಮೂಲೆಗುಂಪು ಮಾಡಿದ್ದಾರೆ.
ಅಲ್ಲಿ ಕೋಮು ಸೌಹಾರ್ದಕ್ಕೂ ಬೆಲೆ ಇಲ್ಲ. ಈ ಹಿನ್ನೆಲೆಯಲ್ಲಿ 2014ರ ಲೋಕಸಭಾ ಚುನಾವಣೆ ಐಕ್ಯತೆ, ಜಾತ್ಯತೀತತೆ, ಬಡವರು, ರೈತರ ಸಮಸ್ಯೆಗಳ ಸ್ಪಂದಿಸುವವರ ಆಧಾರದ ಮೇಲೆ ನಡೆಯುತ್ತದೆ. ಭಾರತ ಅಚಲವಾಗಿರಬೇಕು. ಅಖಂಡವಾಗಿರಬೇಕು ಎಂದು ಜನತೆ ಬಯಸುತ್ತಾರೆ ಎಂದು ವಿಶ್ವನಾಥ್ ಹೇಳಿದರು. ಬಿಜೆಪಿಯತ್ತ ಮುಖ ಮಾಡಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ನಿಲುವಿನ ಬಗ್ಗೆಯೂ ಅವರು ಸ್ಪಷ್ಟ ಉತ್ತರ ನೀಡಲಿಲ್ಲ. ಬದಲಿಗೆ ಬಿಜೆಪಿ ಸೇರಿ ಮಜಾ ಮಾಡ್ಲಿ ಬಿಡಿ ಎಂದರು.