

ಬೆಂಗಳೂರು: ಕೇಂದ್ರ ಸರ್ಕಾರದ ಅನುದಾನದ ಯೋಜನೆಗಳಿಗೆ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಮಂತ್ರಿಗಳ ಚಿತ್ರ ಹಾಕಿಕೊಳ್ಳಬಾರದು ಎಂದು ವಿರೋಧಿಸಿ ಧರಣಿ ನಡೆಸಿದ ವರು ಇಂದು ರಾಜ್ಯಾದ್ಯಂತ ದೊಡ್ಡ ಭಿತ್ತಿ ಚಿತ್ರಗಳನ್ನು ಹಾಕಿಸಿಕೊಳ್ಳುತ್ತಿದ್ದಾರೆ. ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆಗೆ ಕೇಂದ್ರ ಸರ್ಕಾರ ಶೇ.75ರಷ್ಟು ಹಣ ನೀಡುತ್ತದೆ. ಸರ್ವ ಶಿಕ್ಷಣ ಅಭಿಯಾನಕ್ಕೂ ಕೇಂದ್ರದಿಂದ ಇದೇ ಪ್ರಮಾಣದ ಅನುದಾನ ಬರುತ್ತದೆ. ಆದರೆ ರಾಜ್ಯದಲ್ಲಿಯೋಜನೆ ಜಾರಿಯಾಗುವಾಗ ಸಂಪೂರ್ಣ ರಾಜ್ಯ ಸರ್ಕಾರದ ಯೋಜನೆಯಂತೆ ಬಿಂಬಿಸಿ ಪ್ರಚಾರ ಪಡೆಯಲಾಗುತ್ತಿದೆ. ಇವೆರಡು ಯೋಜನೆಗಳಿಗೆ ಸಂಬಂಧಿಸಿದ ಭಿತ್ತಿಪತ್ರ ಹಾಗೂ ಪ್ರಚಾರಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಪರಮೇಶ್ವರ್ ನಾಯ್ಕ್ ಹಾಗೂ ಕಿಮ್ಮನೆ ರತ್ನಾಕರ ಅವರ ಚಿತ್ರಗಳನ್ನು ಪ್ರಕಟಿಸಲಾಗಿದೆ. ಈ ಬಗ್ಗೆ ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ಧ್ವನಿ ಎತ್ತಿದ್ದು, ರಾಜ್ಯ ಸರ್ಕಾರದ ಈ ನೀತಿಯನ್ನು ಖಂಡಿಸಿದ್ದಾರೆ. ಕಾರ್ಮಿಕ ಇಲಾಖೆ ಮುಖ್ಯಮಂತ್ರಿ ಹಾಗೂ ಸಚಿವರ ಚಿತ್ರ ಹಾಕಿ ತಯಾರಿಸಿರುವ ಭಿತ್ತಿಪತ್ರಗಳನ್ನು ಹಂಚದಂತೆ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.
ವಿಚಿತ್ರವೆಂದರೆ ಸರಿಯಾಗಿ ನಾಲ್ಕೂವರೆ ವರ್ಷಗಳ ಹಿಂದೆ ಇದೇ ವಿಚಾರಕ್ಕೆ ಸಂಬಂಧಿಸಿ ಅಂದು ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಧರಣಿ ನಡೆಸಿದ್ದರು! ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ದ್ದಾಗ 108 ಆ್ಯಂಬುಲೆನ್ಸ್ನಲ್ಲಿ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಬಿ.ಶ್ರೀರಾಮುಲು ಚಿತ್ರಗಳನ್ನು ಹಾಕಲಾಗಿದೆ ಎಂದು ಕಾಂಗ್ರೆಸ್ ಶಾಸಕ ಎನ್.ಸಂಪಂಗಿ ಅವರು 2010ರ ಜು.9ರಂದು ವಿಧಾನಸಭೆಯಲ್ಲಿ ಆಕ್ಷೇಪವ್ಯಕ್ತಪಡಿಸಿದ್ದರು. ಅಂದು ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರ
ಚಿತ್ರವನ್ನು ಜತೆಯಲ್ಲಿ ಪ್ರಕಟಿಸಬೇಕು ಎಂದು ಆಗ್ರಹಿಸಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಧರಣಿ ನಡೆಸಲಾಗಿತ್ತು. ಆದರೆ ಅದೇ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ 108 ಆ್ಯಂಬುಲೆನ್ಸ್ ಸೇರಿದಂತೆ ಕೇಂದ್ರಸರ್ಕಾರದ ಅನುದಾನದಲ್ಲಿ ನಡೆಯುತ್ತಿರುವ ಎಲ್ಲ ಯೋಜನೆಗಳಲ್ಲಿ ತಮ್ಮ ಹಾಗೂ ತಮ್ಮ ಸಚಿವರ ಚಿತ್ರ ಪ್ರಕಟಿಸಿಕೊಳ್ಳುತ್ತಿದ್ದಾರೆ. ಜತೆಗೆ ಪ್ರಧಾನಿ ಹೆಸರು, ಚಿತ್ರದ ಸುಳಿವು ಕೂಡ ಇಲ್ಲ. ಕೇಂದ್ರ ಸರ್ಕಾರದ ನೆರವಿನ ಪ್ರಸ್ತಾಪವೂ ಇಲ್ಲ. ವಿಮೆಯಲ್ಲೂ ಇಲ್ಲ, ಶಿಕ್ಷಣವೂ ಇಲ್ಲ!
ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆಗೆ ಮುನ್ನುಡಿ ಬರೆಯಲಾಗಿತ್ತು. ಆದರೆ, ಯೋಜನೆ ಆರಂಭದ ಯಾವುದೇ ಪ್ರಕ್ರಿಯೆಗೆ ಚಾಲನೆ ಸಿಕ್ಕಿರಲಿಲ್ಲ. ಎನ್ ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಯೋಜನೆಗೆ ಹಣ ನೀಡುವ ಜತೆಗೆ ಟೆಂಡರ್ ಪೂರೈಸಿ ಯೋಜನೆ ಆರಂಭಿಸಲಾಯಿತು. ಆ ಯೋಜನೆಗೆ ಇಂದು ಕೂಡ ಕೇಂದ್ರ ಸರ್ಕಾರ ಶೇ.75ರಷ್ಟು ಧನಸಹಾಯ ಮಾಡುತ್ತಿದೆ. ಆರೋಗ್ಯ ವಿಮೆಯ ಶೇ.75ರಷ್ಟು ಪ್ರೀಮಿಯïಂನ್ನು ಕೇಂದ್ರವೇ ತುಂಬಿಕೊಡುತ್ತದೆ. ಉಳಿದ ಪ್ರೀಮಿಯಂ ಮೊತ್ತವನ್ನು ರಾಜ್ಯ ಸರ್ಕಾರ ಭರಿಸುತ್ತದೆ. ಆದರೆ ಇತ್ತೀಚೆಗೆ ರಾಜ್ಯ ಸರ್ಕಾರ ಹೊರಡಿಸಿದ ಬಿsತ್ತಿಪತ್ರ ಹಾಗೂ ವಾರ್ತಾ ಇಲಾಖೆಯ ಪ್ರಚಾರಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ನಾಯ್ಕ್ ಚಿತ್ರ ಮಾತ್ರವಿದೆ. ಇನ್ನು ಎನ್ಡಿಎ ಸರ್ಕಾರದ ಅವಧಿಯಲ್ಲೇ ಆರಂಭವಾದ ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮದ ಜತೆಗೆ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆಯೂ ರಾಜ್ಯದಲ್ಲಿ ಅನುಷ್ಠಾನದಲ್ಲಿದೆ. ಇವೆರಡು ಯೋಜನೆಗೆ ಕೇಂದ್ರ ಸರ್ಕಾರ ಶೇ.75ರಷ್ಟು ಅನುದಾನ ನೀಡುತ್ತದೆ. ಆದರೆ ರಾಜ್ಯ ಸರ್ಕಾರದ ಪ್ರಚಾರ ಅಥವಾ ಭಿತ್ತಿಪತ್ರಗಳಲ್ಲಿ ಎಲ್ಲಿಯೂ ಪ್ರಧಾನಿ ಅಥವಾ ಕೇಂದ್ರ ಸಚಿವರ ಚಿತ್ರಗಳು ಇರುವುದಿಲ್ಲ. ಮೂಲತಃ ಜನರ ತೆರಿಗೆ ಹಣದಿಂದ ರೂಪಿಸಿರುವ ಯೋಜನೆಗಳಿಗೆ
ಆಡಳಿತ ನಡೆಸುತ್ತಿರುವವರ ಚಿತ್ರ ಹಾಕುವುದೇ ಸರಿಯಲ್ಲ. ಆದರೆ ಹಿಂದೆ ವಿರೋಧವ್ಯಕ್ತಪಡಿಸಿದ್ದ ಸಿದ್ದರಾಮಯ್ಯ ಅವರೇ ಈ ಕೆಲಸಕ್ಕೆ ಮುಂದಾಗಿರುವುದು ಆಶ್ಚರ್ಯ ಮೂಡಿಸಿದೆ. ಕೇಂದ್ರ ಸರ್ಕಾರದ ಯೋಜನೆಗೆ ರಾಜ್ಯ ಸರ್ಕಾರಗಳು ತಮ್ಮ ಪ್ರಚಾರಕ್ಕೆ ಬಳಸಿಕೊಳ್ಳುವುದನ್ನು ಈ ಹಿಂದೆ ಕೇಂದ್ರ ಆರೋಗ್ಯ ಮಂತ್ರಿಯಾಗಿದ್ದ
ಗುಲಾಂ ನಬಿ ಆಜಾದ್ ಕೂಡ ಲೋಕಸಭೆಯಲ್ಲಿ ಆಕ್ಷೇಪವ್ಯಕ್ತಪಡಿಸಿದ್ದರು
ಕೇಂದ್ರ ಸರ್ಕಾರದ ಯೋಜನೆಗಳನ್ನು ರಾಜ್ಯ ಸರ್ಕಾರ ಹೈಜಾಕ್ ಮಾಡುತ್ತಿದೆ. ಕೇಂದ್ರ ಸರ್ಕಾರವು ಅನುದಾನ ನೀಡುತ್ತಿದ್ದರೂ ರಾಜ್ಯ ಸರ್ಕಾರ ತನ್ನದೇ ಯೋಜನೆ ಎಂದು ಹೇಳಿಕೊಳ್ಳುತ್ತಿದೆ. ಈ ಹಿಂದೆ ಕೇಂದ್ರ ಸರ್ಕಾರದ ಯೋಜನೆಗಳಿಗೆ ರಾಜ್ಯ ಸರ್ಕಾರದ ಹಣೆಪಟ್ಟಿ ಹಚ್ಚುವುದನ್ನು ವಿರೋಧಿಸಿದ್ದ ಸಿದ್ದರಾಮಯ್ಯ ಇಂದು ಅದೇ ತಪ್ಪು ಮಾಡುತ್ತಿದ್ದಾರೆ.
ಪ್ರಧಾನಿಯ ಮಹತ್ವಾಕಾಂಕ್ಷಿ ಯೋಜನೆಯನ್ನು ತಮ್ಮ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ಖಂಡನಾರ್ಹ.
- ಪ್ರತಾಪ್ ಸಿಂಹ, ಸಂಸದ