

ಬೆಂಗಳೂರು: ನನ್ನ ವಿರುದ್ಧ ಹೊಸದಾಗಿ ದಾಖಲಾಗಿರುವ ಅಕ್ರಮ ಡಿನೋಟಿಫಿಕೇಷನ್ ಪ್ರಕರಣವನ್ನು ರಾಜಕೀಯವಾಗಿಯೇ ಎದುರಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರನ್ನು ಭೇಟಿಯಾಗಿ ಕೆರೆ ಒತ್ತುವರಿ ಸದನ ಸಮಿತಿ ಮತ್ತು ಇಂಧನ ಅಕ್ರಮ ತನಿಖೆ ಸದನ ಸಮಿತಿ ಕಾರ್ಯ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದ ಬಳಿಕ
ಸುದ್ದಿಗಾರರ ಜತೆ ಮಾತನಾಡಿದ ಅವರು, `ರಾಜ್ಯ ಸರ್ಕಾರದ ಪ್ರಭಾವಿ ಸಚಿವರೊಬ್ಬರು ನನ್ನ ವಿರುದ್ಧ ಮುಹೂರ್ತ ನಿಗದಿ ಮಾಡುತ್ತೇನೆ ಎಂದು ಹೇಳಿದ್ದರು. ಅದರ ಫಲವಾಗಿಯೇ ಲೋಕಾಯುಕ್ತದಲ್ಲಿ ಹೊಸ ಎಫ್ಐಆರ್ ದಾಖಲಾಗಿದೆ. ಆದರೆ, ನಾನು ಈ ಪ್ರಕರಣದಲ್ಲಿ ಕಾನೂನಿನ ಆಶ್ರಯ ಪಡೆಯುವುದಿಲ್ಲ. ನಿರೀಕ್ಷಣಾ ಜಾಮೀನು ಪಡೆಯದೇ ರಾಜಕೀಯವಾಗಿಯೇ ಈ ಪ್ರಕರಣ ಎದುರಿಸುತ್ತೇನೆ' ಎಂದು ತಿಳಿಸಿದರು.
ಅವರು ಕಷ್ಟಪಟ್ಟು ದೊಡ್ಡ ಪ್ರಕರಣ ಪತ್ತೆ ಹಚ್ಚಿದ್ದಾರೆ. ನನ್ನ ಅತ್ತೆ ಹೆಸರಿನಲ್ಲಿ ಆಸ್ತಿ ಖರೀದಿಸಬೇಕಿದ್ದರೆ ನೇರವಾಗಿ ಡಿನೋಟಿಫೈ ಮಾಡಿ ಎಂದು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಟಿಪ್ಪಣಿ ಬರೆಯುತ್ತಿದ್ದೆ ಹೊರತು, ಕಾನೂನು ಪ್ರಕಾರ ಪರಿಶೀಲಿಸಿ ಎಂದು ಷರಾ ಬರೆಯುತ್ತಿರಲಿಲ್ಲ. ಈ ಪ್ರಕರಣವನ್ನು ತನಿಖೆ ಮಾಡುವ ಲೋಕಾಯುಕ್ತ ಅಧಿಕಾರಿಯಾರನ್ನು ಭೇಟಿ ಮಾಡಿದ್ದಾರೆ ಎಂಬುದು ಗೊತ್ತು. ಇದು ಬಹಳ ಕಷ್ಟಪಟ್ಟು ಹೆಣೆದ ಪ್ರಕರಣವಾದ್ದರಿಂದ ರಾಜಕೀಯವಾಗಿಯೇ ಎದುರಿಸುತ್ತೇನೆ ಎಂದರು.
ಇಂಧನ ಇಲಾಖೆಯಲ್ಲಿ ಅವ್ಯವಹಾರ
ಇಂಧನ ಇಲಾಖೆಯಲ್ಲಿ ಸುಮಾರು ರು.30000 ರಿಂದ ರು.40000 ಕೋಟಿ ಅವ್ಯವಹಾರವಾಗಿದೆ. ಆದರೆ, ಇಂಧನ ಸಚಿವರನ್ನೇ ಸದನ ಸಮಿತಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಅವರದ್ದೇ ಇಲಾಖೆಯಲ್ಲಿ ನಡೆದ ಅವ್ಯವಹಾರದ ಬಗ್ಗೆ ತನಿಖೆ ನಡೆಸುವ ಸಮಿತಿಗೆ ಅವರೇ ಅಧ್ಯಕ್ಷರಾದರೆ ಅಧಿಕಾರಿಗಳು ಸೂಕ್ತ ಮಾಹಿತಿ ನೀಡುತ್ತಾರೆಯೇ? ಭೂ ಒತ್ತುವರಿ ತೆರವು ಮಾಡುವುದಕ್ಕೆ ರಚಿಸಿದ ಸದನ ಸಮಿತಿಗೆ ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್ ಅವರು ಅಧ್ಯಕ್ಷರಾಗಿದ್ದಾರೆಯೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಈ ಸಮಿತಿ ಮುಂದೆ ಕೆಲವು ದಾಖಲೆಗಳನ್ನು ಇಡುವಂತೆ ನಾನು ಒತ್ತಾಯಿಸಿದ್ದೆ. ಆದರೆ, ಸಚಿವರು ಅದನ್ನು ಮನೆಗೆ ತೆಗೆದುಕೊಂಡು ಹೋಗಿ ಇಟ್ಟುಕೊಂಡಿದ್ದಾರೋ ಅಥವಾ ಸುಟ್ಟು ಹಾಕಿದ್ದಾರೋ ಗೊತ್ತಿಲ್ಲ. ಸದನ ಸಮಿತಿ ಸಭೆಯಲ್ಲಿ ಕೆಲವೊಂದು ವಿಚಾರ ಪ್ರಸ್ತಾಪಿಸಿ ದಾಗ ಶೋಭಾ ಕರಂದ್ಲಾಜೆ, ಯಡಿಯೂರಪ್ಪ ಅವರನ್ನು ಫಿಕ್ಸ್ ಮಾಡುವ ಪ್ರಯತ್ನ ನಡೆಸುತ್ತಿದ್ದೀರಾ? ಎಂದು ಪ್ರಶ್ನಿಸುತ್ತಾರೆ. ಬಹುಶಃ ಹಳೆ ಸಂಬಂಧದ ಋಣ ತೀರಿಸುತ್ತಾ ಇರಬೇಕು. ಹಳೆ ಅವ್ಯವಹಾg ಗಳನ್ನು ಮುಚ್ಚಿ ಹಾಕಿದ್ದೇ ಸಿದ್ದರಾಮಯ್ಯ ಸರ್ಕಾರದ ಸಾಧನೆ ಎಂದು ವ್ಯಂಗ್ಯವಾಡಿದರು. ಈ ಹಿನ್ನೆಲೆಯಲ್ಲಿ ನಾನು ಸದನ ಸಮಿತಿ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದೆ. ಆದರೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಬೇಡ ಎಂದು ಹೇಳಿದ್ದಾರೆ. ಜತೆಗೆ ನನ್ನ ಬೇಡಿಕೆ ಬಗ್ಗೆ ಅಧಿಕೃತ ಪತ್ರ ಬರೆಯುವಂತೆ ಸೂಚಿಸಿದ್ದಾರೆ. ಹೀಗಾಗಿ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ ಎಂದು ಹೇಳಿದರು.