ಉಪ ಚುನಾವಣೆ: ಪ್ರಚಾರಕ್ಕಾಗಿ ಸ್ಟಾರ್ ಗಳ ಮೊರೆ..!

ಪ್ರತೀ ಚುನಾವಣೆಯಂತೆ ಈ ಬಾರಿಯ ಚುನಾವಣೆಯಲ್ಲಿಯೂ ರಾಜಕೀಯ ಪಕ್ಷಗಳು ಪ್ರಚಾರಕ್ಕಾಗಿ ನಟ-ನಟಿಯರ ಮೊರೆ ಹೋಗಿದ್ದು, ಚುನಾವಣಾ ಕಣ ರಂಗೇರಿದೆ...
ಉಪಚುನಾವಣಾ ಪ್ರಚಾರದಲ್ಲಿ ನಟ-ನಟಿಯರು (ಸಂಗ್ರಹ ಚಿತ್ರ)
ಉಪಚುನಾವಣಾ ಪ್ರಚಾರದಲ್ಲಿ ನಟ-ನಟಿಯರು (ಸಂಗ್ರಹ ಚಿತ್ರ)
Updated on: 

ಬೆಂಗಳೂರು: ಪ್ರತೀ ಚುನಾವಣೆಯಂತೆ ಈ ಬಾರಿಯ ಚುನಾವಣೆಯಲ್ಲಿಯೂ ರಾಜಕೀಯ ಪಕ್ಷಗಳು ಪ್ರಚಾರಕ್ಕಾಗಿ ನಟ-ನಟಿಯರ ಮೊರೆ ಹೋಗಿದ್ದು, ಚುನಾವಣಾ ಕಣ ರಂಗೇರಿದೆ.

ತೀವ್ರ ಕುತೂಹಲ ಕೆರಳಿಸಿರುವ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣ ತಾರಾ ಪ್ರಚಾರಕರಿಂದ ಭಾನುವಾರ ರಂಗೇರಿತ್ತು. ಬಹಿರಂಗ ಪ್ರಚಾರಕ್ಕೆ ತಾರಾ ಮೆರುಗು ನೀಡಲು ಚಿತ್ರ  ನಟಿಯರಾದ ರಮ್ಯಾ ಹಾಗೂ ಭಾವನಾ ಅವರನ್ನು ಕಾಂಗ್ರೆಸ್ ಬಳಸಿಕೊಳ್ಳುತ್ತಿದ್ದರೆ, ಇತ್ತ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಪರವಾಗಿ ಅವರ ಪತ್ನಿ ಉಷಾ ಮತ್ತು ನಟಿ ಮಾಳವಿಕಾ ಅವರು  ಪ್ರಚಾರದಲ್ಲಿ ತೊಡಗುವ ಮೂಲಕ ತೀವ್ರ ಪೈಪೋಟಿ ನೀಡಿದರು.

ಹೆಬ್ಬಾಳ ಉಪ ಚುನಾವಣೆಯನ್ನು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡುವಿನ ಪೈಪೋಟಿ ಎಂದೇ ಕರೆಯಲಾಗುತ್ತಿದೆಯಾದರೂ, ಅಬ್ಬರದ ಬಹಿರಂಗ ಪ್ರಚಾರದ ಜತೆಜತೆಗೆ, ಮತದಾರರ  ಒಲವು ಗಳಿಸಲು ಪಕ್ಷಗಳ ನಡುವೆ ತೆರೆಮರೆಯಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್ ಪಾಲಿಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು  ಸೂಚಿಸಿರುವ ಅಭ್ಯರ್ಥಿಯಾದ್ದರಿಂದ ಚುನಾವಣೆಯನ್ನು ಶತಾಯ-ಗತಾಯ ಗೆಲ್ಲಲೇ ಬೇಕಾದ ಒತ್ತಡದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿದ್ದರೆ, ಇನ್ನು ತನ್ನ ಪಾಲಿನ ಕ್ಷೇತ್ರವನ್ನು  ಉಳಿಸಿಕೊಳ್ಳಬೇಕು ಎಂಬ ಹಪಾಹಪಿಯಲ್ಲಿ ಬಿಜೆಪಿ ನಾಯಕರಿದ್ದಾರೆ. ಮತ್ತೊಂದೆಡೆ ಜೆಡಿಎಸ್ ಕೂಡ ಗೆಲುವಿಗಾಗಿ ಶತ ಪ್ರಯತ್ನ ನಡೆಸಿದ್ದು, ಸ್ವತಃ ಪಕ್ಷದ ವರಿಷ್ಠ ಎಚ್ ಡಿ ದೇವೇಗೌಡ ಅವರೇ  ಪ್ರಚಾರಕ್ಕೆ ಧುಮುಕಿದ್ದು, ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಏರ್ಪಟ್ಟಿದೆ.

ಸಾಂಪ್ರದಾಯಿಕ ಮತಗಳ ಜತೆಗೆ ಕ್ಷೇತ್ರದ ಬಹುಸಂಖ್ಯಾತ ಒಕ್ಕಲಿಗ ಮತದಾರರನ್ನು ಸೆಳೆಯಲು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜವಾಬ್ದಾರಿ  ನೀಡಿದ್ದಾರೆ. ಅಲ್ಪಸಂಖ್ಯಾತ ಮತಗಳು ವಿಭಜನೆಯಾಗಬಾರದು. ಹಿಂದುಳಿದ ವರ್ಗಗಳ ಮತಗಳಲ್ಲಿ ಸಿಂಹಪಾಲು ಕಾಂಗ್ರೆಸ್ ಅಭ್ಯರ್ಥಿಗೇ ಸಿಗಬೇಕು ಹಾಗೂ ಸಾಧ್ಯವಾದಷ್ಟೂ ಒಕ್ಕಲಿಗ  ಮತಗಳನ್ನು ಸೆಳೆಯಬೇಕು ಎಂಬ ಸ್ಪಷ್ಟ ಗುರಿಯೊಂದಿಗೆ ಡಿ.ಕೆ. ಶಿವಕುಮಾರ್ ಬೆಳಗ್ಗೆ 8 ರಿಂದ ರಾತ್ರಿ 10 ಗಂಟೆವರೆಗೆ ಕ್ಷೇತ್ರದಲ್ಲೇ ಸುತ್ತಿ ಪ್ರಚಾರದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.  ಭಾನುವಾರ ದಿನವಿಡೀ ನಡೆದ ಪ್ರಚಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಬಿ.ಕೆ.ಹರಿಪ್ರಸಾದ್ ಭೂಪಸಂದ್ರ, ಗಂಗೇನಹಳ್ಳಿ ಮತ್ತಿತರ ಕಡೆಗಳಲ್ಲಿ ಪಾದಯಾತ್ರೆ ನಡೆಸಿ ಮತ ಯಾಚಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com