ಕೈ ಅಭ್ಯರ್ಥಿಗಳ ಸೋಲು; ಉಸ್ತುವಾರಿ ಸಚಿವರ ತಲೆದಂಡ?

ಕಾಂಗ್ರೆಸ್ ಪಕ್ಷದ ಮಟ್ಟಿಗೆ ಪ್ರಸ್ತುತ ಪಂಚಾಯತ್ ಚುನಾವಣೆ ನಿರೀಕ್ಷಿತ ಫಲಿತಾಂಶವಾಗಿಲ್ಲದೇ ಇರುವುದು ಆ ಪಕ್ಷದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ...
ಸಿಎಂ ಸಿದ್ದರಾಮಯ್ಯ ಮತ್ತು ಸಚಿವರು (ಸಂಗ್ರಹ ಚಿತ್ರ)
ಸಿಎಂ ಸಿದ್ದರಾಮಯ್ಯ ಮತ್ತು ಸಚಿವರು (ಸಂಗ್ರಹ ಚಿತ್ರ)
Updated on: 

ಬೆಂಗಳೂರು: ಕಾಂಗ್ರೆಸ್ ಪಕ್ಷದ ಮಟ್ಟಿಗೆ ಪ್ರಸ್ತುತ ಪಂಚಾಯತ್ ಚುನಾವಣೆ ನಿರೀಕ್ಷಿತ ಫಲಿತಾಂಶವಾಗಿಲ್ಲದೇ ಇರುವುದು ಆ ಪಕ್ಷದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.

ಪ್ರಮುಖವಾಗಿ ಘಟಾನುಘಟಿ ನಾಯಕರ ಸಂಬಂಧಿಕರು ಮತ್ತು ಬೆಂಬಲಿತ ಅಭ್ಯರ್ಥಿಗಳೇ ಸೋತಿದ್ದು, ಕಾಂಗ್ರೆಸ್ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮತ್ತೊಂದೆಡೆ ಪಂಚಾಯಿತಿ ಫಲಿತಾಂಶವು ಸಿದ್ದರಾಮಯ್ಯ ಸರ್ಕಾರದ ಕೆಲ ಸಚಿವರ ಮೇಲೂ ವ್ಯತಿರಿಕ್ತ ಪರಿಣಾಮ ಉಂಟುಮಾಡುವ ಸಾಧ್ಯತೆ ದಟ್ಟವಾಗಿದ್ದು, ಫಲಿತಾಂಶದ ಹೊಣೆಯನ್ನು ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಟ್ಟುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಬಜೆಟ್ ಅಧಿವೇಶನದ ನಂತರದಲ್ಲಿ ಕೆಲವರ ಖಾತೆ ಬದಲಾವಣೆ ಅಥವಾ ಕೆಲವರನ್ನು ಸಂಪುಟದಿಂದಲೇ ಕೈಬಿಡುವಂತಹ ಕ್ರಮವೂ ಅನಿರೀಕ್ಷಿತವೇನಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸಚಿವ ಕೆ.ಜೆ.ಜಾರ್ಜ್, ಮಂಡ್ಯ ಉಸ್ತುವಾರಿ ಸಚಿವ ಅಂಬರೀಶ್, ಮೈಸೂರು ಜಿಲ್ಲೆ ಉಸ್ತುವಾರಿ ಶ್ರೀನಿವಾಸಪ್ರಸಾದ್, ಕೊಡಗು ಜಿಲ್ಲೆಯ ದಿನೇಶ್ ಗುಂಡೂರಾವ್, ಉಡುಪಿ ಜಿಲ್ಲೆಯ ವಿನಯ್‌ಕುಮಾರ್ ಸೊರಕೆ, ದಕ್ಷಿಣ ಕನ್ನಡ ಜಿಲ್ಲೆಯ ರಮಾನಾಥ್ ರೈ, ಚಿಕ್ಕಮಗಳೂರು ಜಿಲ್ಲೆಯ ಡಾ.ಜಿ.ಪರಮೇಶ್ವರ್, ತುಮಕೂರು ಜಿಲ್ಲೆಯಲ್ಲಿ ಟಿ.ಬಿ.ಜಯಚಂದ್ರ, ಹಾಸನ ಜಿಲ್ಲೆಯಲ್ಲಿ ಎ.ಮಂಜು, ಶಿವಮೊಗ್ಗದಲ್ಲಿ ಕಿಮ್ಮನೆ ರತ್ನಾಕರ, ಧಾರವಾಡ ಜಿಲ್ಲೆಯಲ್ಲಿ ವಿನಯ್ ಕುಲಕರ್ಣಿ, ಬಾಗಲಕೋಟೆಯಲ್ಲಿ ಎಸ್.ಆರ್.ಪಾಟೀಲ್, ವಿಜಯಪುರದಲ್ಲಿ ಎಂ.ಬಿ.ಪಾಟೀಲ್, ಕಲಬುರಗಿಯಲ್ಲಿ ಖಮರುಲ್ ಇಸ್ಲಾಂ, ರಾಯಚೂರಿನಲ್ಲಿ ಡಾ. ಶರಣ್ ಪ್ರಕಾಶ್ ಪಾಟೀಲ್, ದಾವಣಗೆರೆಯಲ್ಲಿ ಶ್ಯಾಮನೂರು ಶಿವಶಂಕರಪ್ಪ, ಬಳ್ಳಾರಿ ಜಿಲ್ಲೆಯ ಟಿ.ಪರಮೇಶ್ವರ್ ನಾಯಕ್ ಹಾಗೂ ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ಘಟಾನುಘಟಿ ನಾಯಕರು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ವಿಫಲರಾಗಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ತವರಿನಲ್ಲಿ ಮತ್ತು ಕೆಪಿಸಿಸಿ ಅಧ್ಯಕ್ಷರ ತವರು ಜಿಲ್ಲೆಯಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿಗಳು ಸೋತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಉಸ್ತುವಾರಿ ಸಚಿವರಿಗೆ ಫಲಿತಾಂಶದ ಹೊಣೆ ಹೊರಿಸಿ ತಲೆದಂಡಕ್ಕೆ ರಾಜ್ಯ ಸರ್ಕಾರ ಮುಂದಾಗುತ್ತದೆಯೇ ಎಂಬ ಅನುಮಾನಗಳು ಕೂಡ ವ್ಯಕ್ತವಾಗುತ್ತಿವೆ. ಆದರೆ ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ಸಂಬಂಧ ನೀಡಿದ್ದ ಎಚ್ಚರಿಕೆಯ ಪ್ರಕಾರ ಉಸ್ತುವಾರಿ ಸಚಿವರ ವಿರುದ್ಧ ಕ್ರಮಕ್ಕೆ ಮುಂದಾಗುವರೆ ಎಂಬುದನ್ನು ಕಾದು ನೋಡಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com