

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆ ವಿರೋಧಿಸಿ ಸೋಮವಾರದಿಂದ ಪ್ರತಿಪಕ್ಷಗಳು ಕೈಗೊಂಡಿದ್ದ ಧರಣಿ ಮಂಗಳವಾರ ಅಂತ್ಯಕಂಡಿದ್ದು, ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಸಂಧಾನ ಪ್ರಕ್ರಿಯೆ ಫಲಿಸಿದೆ.
ಎಸಿಬಿ ರಚನೆ ಅಧಿಸೂಚನೆಯನ್ನು ಹಿಪಂಡೆಯಬೇಕು ಎಂಬ ಪ್ರತಿಪಕ್ಷ ಬೇಡಿಕೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದ್ದ, ಹಿನ್ನಲೆಯಲ್ಲಿ ಇಂದು ಬೆಳಗ್ಗಿನಿಂದಲೇ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ರಚನೆ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಸದನದಲ್ಲಿ ಧರಣಿ ನಡೆಸಿದರು. ಈ ಹಿನ್ನಲೆಯಲ್ಲಿ ಇಂದು ಬೆಳಗ್ಗೆ ಸ್ಪೀಕರ್ ಕಾಗೋಡು ತಿಮ್ಮರಪ್ಪ ಅವರು ಪ್ರತಿಪಕ್ಷಗಳ ಮುಖಂಡರೊಂದಿಗೆ ನಡೆಸಿದ ಸಂಧಾನ ಪ್ರಕ್ರಿಯೆ ಸಫಲವಾಗಿದ್ದು, ಧರಣಿ ಕೈಬಿಡಲು ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಭೃಷ್ಟಾಚಾರ ನಿಗ್ರಹ ದಳದಲ್ಲಿ ಕೆಲ ಬದಲಾವಣೆಗಳನ್ನು ತರಬೇಕು ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಸರ್ಕಾರಕ್ಕೆ ನೀಡಿದ್ದು, ವಿಪಕ್ಷಗಳಿಗೆ ಲೋಕಾಯುಕ್ತ ಖಾಯ್ದೆ ತಿದ್ದುಪಡಿಗೆ, ಎಸಿಬಿ ವಿಚಾರದಲ್ಲಿ ಚರ್ಚೆ ನಡೆಸಲು ಪ್ರತ್ಯೇಕ ಅವಕಾಶ ನೀಡುವುದಾಗಿ ಸ್ಪೀಕರ್ ಭರವಸೆ ನೀಡಿದರು. ರಾಜ್ಯ ಸರ್ಕಾರ ಕೂಡ ಎಸಿಬಿಯಲ್ಲಿ ಬದಲಾವಣೆಗೆ ಸಮ್ಮತಿ ಸೂಚಿಸಿದ ಬಳಿಕ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ತಮ್ಮ ಪ್ರತಿಭಟನೆ ಹಿಂಪಡೆದುಕೊಂಡರು ಎಂದು ತಿಳಿದುಬಂದಿದೆ.
ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಅವರು ಯಾವುದೇ ಕಾರಣಕ್ಕೂ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲ ಮಾಡಲು ಅವಕಾಶ ನೀಡುವುದಿಲ್ಲ ಮತ್ತು ಎಸಿಬಿಯನ್ನುಕೂಡಲೇ ಸರ್ಕಾರ ಹಿಂಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸೇರಿದಂತೆ ಅವರ ಸಂಪುಟದ ಹಲವು ಸದಸ್ಯರ ವಿರುದ್ದ ಹಲವು ಪ್ರಕರಣಗಳು ದಾಖಲಾಗಿದ್ದು, ಅವರ ವಿರುದ್ಧ ತನಿಖೆ ನಡೆಯದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರ ಎಸಿಬಿ ರಚನೆಯ ಹುನ್ನಾರ ನಡೆಸಲಾಗಿದೆ ಎಂದು ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದರು.