ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತವರು ಜಿಲ್ಲೆಯಲ್ಲೇ ಭಾರೀ ಮುಖಭಂಗವಾಗಿದೆ. ಮೈಸರೂ ಜಿಲ್ಲಾ ಪಂಚಾಯತ್ ನಲ್ಲಿ ಅಧಿಕಾರ ಹಿಡಿಯುವಲ್ಲಿ ಕಾಂಗ್ರೆಸ್ ವಿಫಲವಾಗಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಅಧಿಕಾರ ದಕ್ಕಿದೆ.
ಇಂದು ನಡೆದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಜೆಡಿಎಸ್, ಬಿಜೆಪಿ ರಣತಂತ್ರದೆದುರು ಕಾಂಗ್ರೆಸ್ ಮಂಕಾಗಿದ್ದು, ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಜೆಡಿಎಸ್ ನ ನಹಿಮಾ ಸುಲ್ತಾನ್ ಆಯ್ಕೆಯಾಗಿದ್ದಾರೆ.
ನಹಿಮಾ ಸುಲ್ತಾನ್ ಅವರು ಕಾಂಗ್ರೆಸ್ ಅಭ್ಯರ್ಥಿ ಜಯಮ್ಮ ವಿರುದ್ಧ 5 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
49 ಸದಸ್ಯ ಬಲ ಹೊಂದಿರುವ ಮೈಸೂರು ಜಿಲ್ಲಾ ಪಂಚಾಯ್ತಿಯಲ್ಲಿ ಕಾಂಗ್ರೆಸ್ 22, ಜೆಡಿಎಸ್ 18, ಬಿಜೆಪಿ 08 ಹಾಗೂ ಓರ್ವ ಪಕ್ಷೇತರ ಸದಸ್ಯರಿದ್ದಾರೆ. ಇದೀಗ ಜಿಪಂ ಗದ್ದುಗೆ ಏರಲು ಜೆಡಿಎಸ್, ಬಿಜೆಪಿ ಮೈತ್ರಿ ಮಾಡಿಕೊಂಡಿವೆ.