

ಮೈಸೂರು: ವೈಟ್ ಪೇಪರ್ ಅನ್ನೋದು ಬಿಜೆಪಿಯವರಿಗೆ ರೋಗ. ರಾಜ್ಯದ ಸಮಸ್ಯೆಗಳ ಬಗ್ಗೆ ಕೇಂದ್ರದಲ್ಲಿ ಮಾತನಾಡುವ ಶಕ್ತಿ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ಕೇಂದ್ರ ಸರ್ಕಾರ ಬರ ಪರಿಸ್ಥಿತಿ ನಿರ್ವಹಣೆಗೆ ಅನುದಾನ ನೀಡಿದ್ದರೂ ಕೂಡಾ ರಾಜ್ಯ ಸರ್ಕಾರ ರೈತರಿಗೆ ಅನುದಾನ ನೀಡಿಲ್ಲ ಎಂದು ಪರಿಷತ್ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ಆರೋಪಿಸಿದ್ದರು.
ಈಶ್ವರಪ್ಪನಿಗೆ ತಾನು ಏನು ಮಾತಾಡುತ್ತಿದ್ದೇನೆ ಎಂಬುದರ ಬಗ್ಗೆ ಅರಿವಿಲ್ಲ. ನಾನು ಕೊಟ್ಟ ಮಾಹಿತಿ ತಪ್ಪಾಗಿದ್ದರೆ ಈಶ್ವರಪ್ಪ ರಾಜೀನಾಮೆ ಕೊಡ್ತಾನಾ? ಎಂದು ಸಿಎಂ ಸಿದ್ದರಾಮಯ್ಯ ಈಶ್ವರಪ್ಪ ಅವರನ್ನು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರ ಮುಂಗಾರು ಬೆಳೆ ನಷ್ಟಕ್ಕೆ ಕೊಟ್ಟ ಅನುದಾನವನ್ನು ಜಿಲ್ಲಾಧಿಕಾರಿಗಳ ಮೂಲಕ ಹಂಚಿದ್ದೇವೆ. ಆದರೆ ಹಿಂಗಾರು ಬರ ನಿರ್ವಹಣೆಗೆ ಕೇಂದ್ರ ನೀಡಬೇಕಿರುವ 720 ಕೋಟಿ ರೂಪಾಯಿ ಅನುದಾನ ಇನ್ನೂ ಕೊಟ್ಟಿಲ್ಲ. ಹಾಗಾಗಿ ನಾನು ಹೇಳಿದ ಮಾಹಿತಿ ತಪ್ಪಾಗಿದ್ದರೆ ಈಶ್ವರಪ್ಪ ರಾಜೀನಾಮೆ ಕೊಡ್ತಾನಾ? ಎಂದು ಏಕವಚನದಲ್ಲಿ ಸವಾಲು ಹಾಕಿದ್ದಾರೆ.