ಮಾಧ್ಯಮಗಳ ವಿರುದ್ಧ ಕೇಂದ್ರ ಸರ್ಕಾರ ದಮನಕಾರಿ ನೀತಿ: ರಾಹುಲ್ ಗಾಂಧಿ ಆರೋಪ

ಕಾಂಗ್ರೆಸ್ ಪಕ್ಷದ ಮುಖವಾಣಿ ಹಾಗೂ ಸ್ಥಗಿತಗೊಂಡಿದ್ದ ಐತಿಹಾಸಿಕ ಪತ್ರಿಕೆ 'ನ್ಯಾಷನಲ್ ಹೆರಾಲ್ಡ್' ಅನ್ನು ಕಾಂಗ್ರೆಸ್ ಉಪಾಧ್ಯಕ್ಷ ....
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಪತ್ರಿಕೆ ಬಿಡುಗಡೆ ಮಾಡುತ್ತಿರುವುದು
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಪತ್ರಿಕೆ ಬಿಡುಗಡೆ ಮಾಡುತ್ತಿರುವುದು
Updated on: 
ಬೆಂಗಳೂರು: ಕಾಂಗ್ರೆಸ್ ಪಕ್ಷದ ಮುಖವಾಣಿ ಹಾಗೂ ಸ್ಥಗಿತಗೊಂಡಿದ್ದ ಐತಿಹಾಸಿಕ ಪತ್ರಿಕೆ 'ನ್ಯಾಷನಲ್ ಹೆರಾಲ್ಡ್' ಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಬೆಂಗಳೂರಿನಲ್ಲಿ ಸೋಮವಾರ ಮರು ಚಾಲನೆ ನೀಡಿದ್ದಾರೆ.
ಇಂದು ಬೆಂಗಳೂರಿನಲ್ಲಿ ಪಕ್ಷದ ಐತಿಹಾಸಿಕ ಪತ್ರಿಕೆಗೆ ಚಾಲನೆ ನೀಡಿ ಮಾತನಾಡಿದ ರಾಹುಲ್ ಗಾಂಧಿ ಅವರು, ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಬಲವಂತವಾಗಿ ಜನರ ಬಾಯಿ ಮುಚ್ಚಿಸುತ್ತಿದೆ. ಮಾಧ್ಯಮಗಳ ವಿರುದ್ಧವೂ ದಮನಕಾರಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಸತ್ಯದ ಪರವಾಗಿ ನಿಲ್ಲುವವರನ್ನು ಕೇಂದ್ರ ಸರ್ಕಾರ ಅಧಿಕಾರಯುತವಾಗಿ ತುಳಿಯುತ್ತಿದೆ. ಆದರೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಎದೆಗಾರಿಕೆ ಇದ್ದು, ಅದರ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 
ಎನ್ ಡಿಎ ಸರ್ಕಾರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದ್ದು, ದೇಶದಲ್ಲಿ ರೈತರಿಗೆ, ದಲಿತರಿಗೆ ಹಾಗೂ ಪತ್ರಕರ್ತರಿಗೆ ಸ್ವಾತಂತ್ರ್ಯ ಇಲ್ಲದಂತಾಗಿದೆ ಎಂದು ಆರೋಪಿಸಿದ್ದಾರೆ.
ರಾಜಕೀಯ ಕಾರಣಗಳಿಂದಾಗಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ನಿಂತು ಹೋಗಿತ್ತು. ಈಗ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಪುನರಾರಂಭಗೊಳ್ಳುವ ಮೂಲಕ ದೇಶಕ್ಕೆ ಸ್ಫೂರ್ತಿ ತುಂಬುತ್ತೆ. ಪತ್ರಿಕೆ ಪಕ್ಷದ ಮುಖವಾಣಿ ಆಗುವುದು ಬೇಡ ಎಂದು ಹೇಳಿದ್ದು, ಪತ್ರಿಕೆಯಲ್ಲಿ ನನ್ನ ವಿರುದ್ಧವೂ ಬರೆಯಿರಿ ಎಂದು ಹೇಳಿರುವುದಾಗಿ ರಾಹುಲ್ ಗಾಂಧಿ ಅವರು ತಿಳಿಸಿದರು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಎಲ್ಲರ ದನಿಯಾಗಲಿದೆ. ಸ್ವಾತಂತ್ರ್ಯ, ಸಮಾನತೆ ಪತ್ರಿಕೆಯ ನೀತಿಯಾಗಿದ್ದು, ಇದು ಯಾವತ್ತಿದ್ದರ್ರೂ ಚ್ಯಾಂಪಿಯನ್. ಈಗಲು ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಬೇಕಾಗಿದೆ ಎಂದರು.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು 70 ವರ್ಷ ಇತಿಹಾಸವಿರುವ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಬೆಂಗಳೂರಿನಲ್ಲಿ ಪುನಾರಂಭಿಸುತ್ತಿರುವ ಹೆಮ್ಮೆಯ ವಿಷಯ ಎಂದರು.
ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಸುವರ್ಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಈ ವೇಳೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಸಹ ಉಪಸ್ಥಿತಿದ್ದರು.
ದೇಶದ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರು ಕುಟುಂಬದ ಟ್ರಸ್ಟ್ ಮೂಲಕ ನಡೆಯುತ್ತಿದ್ದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮುದ್ರಣವನ್ನು 2008ರಲ್ಲಿ ಸ್ಥಗಿತಗೊಳಿಸಲಾಗಿತ್ತು. ಇಂದು ಬೆಂಗಳೂರಿನಲ್ಲಿ ಮರು ಮುದ್ರಣಗೊಂಡಿದ್ದು, ಒಂದುವರೆ ತಿಂಗಳು ವಾರ ಪತ್ರಿಕೆಯಾಗಿ, ಬಳಿಕ ದೈನಿಕವಾಗಿ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಪ್ರಕಟಗೊಳ್ಳಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com