ಬೆಂಗಳೂರು: ಆರ್ ಎಸ್ ಎಸ್ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ರನ್ನು ಬಂಧಿಸುವಂತೆ ದಕ್ಷಿಣ ಕನ್ನಡ ಜಿಲ್ಲೆ ಎಸ್ ಪಿ ಭೂಷಣ್ ಜಿ ಬೊರಸೆ ಅವರಿಗೆ ಸಚಿವ ರಮಾನಾಥ ರೈ ಆದೇಶ ನೀಡುತ್ತಿರುವ ವಿಡಿಯೋ ಪ್ರಕರಣ ಸೋಮವಾರ ವಿಧಾನಸಭೆಯ ಕಲಾಪದಲ್ಲೂ ಪ್ರತಿಧ್ವನಿಸುವ ಮೂಲಕ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಯಿತು.
ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಂಧಿಸುವಂತೆ ಹೇಳಿರುವ ಸಚಿವ ರಮಾನಾಥ ರೈ ಅವರು ಕೂಡಲೇ ರಾಜೀನಾಮೆ ನೀಡಬೇಕೆಂದು ಕಲಾಪ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಸದಸ್ಯರು ಪಟ್ಟು ಹಿಡಿದು ಆಗ್ರಹಿಸಿದರು.
ಬಿಜೆಪಿ, ಕಾಂಗ್ರೆಸ್ ಸದಸ್ಯರ ನಡುವೆ ವಾಕ್ಸಮರ ನಡೆಯುತ್ತಿದ್ದಂತೆಯೇ ಸ್ಪೀಕರ್ ಕೆಬಿ ಕೋಳಿವಾಡ ಅವರು ಎದ್ದು ನಿಂತು ಗದ್ದಲ ಎಬ್ಬಿಸದಂತೆ ಮನವಿ ಮಾಡಿದರು. ಆದರೆ ಸಚಿವ ರಮಾನಾಥ ರೈ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಶಾಸಕರು ರಾಜೀನಾಮೆ ಕೊಡುವಂತೆ ಪಟ್ಟು ಹಿಡಿದು ಒತ್ತಾಯಿಸಿದರು.
ಜಗದೀಶ್ ಶೆಟ್ಟರ್ ಅವರು ವಿಷಯ ಪ್ರಸ್ತಾಪಿಸಿ, ಪ್ರಭಾಕರ್ ಭಟ್ ಅವರನ್ನು ಬಂಧಿಸಿ ಎಂದು ಹೇಳಲು ರಮಾನಾಥ ರೈ ಯಾರು ಎಂದು ಪ್ರಶ್ನಿಸಿದರು. ಈ ವೇಳೆ ಹಲವು ಬಿಜೆಪಿ ನಾಯಕರು ಶೆಟ್ಟರ್ ಬೆಂಬಲಕ್ಕೆ ನಿಂತರು. ರಮಾನಾಥ್ ರೈ ಅವರು ಕರಾವಳಿ ಭಾಗದಲ್ಲಿ ಕೋಮು ಗಲಭೆ ಹೆಚ್ಚುತ್ತಿದೆ ಎಂದು ಆರೋಪಿಸಿದರು.
ಇನ್ನು ರಮಾನಾಥ ರೈ ಅವರನ್ನು ಸಮರ್ಥಿಸಿಕೊಂಡ ಜಿ. ಪರಮೇಶ್ವರ, ಪ್ರಭಾಕರ್ ಭಟ್ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ, ಇದ ಕೋಮ ಸಂಘರ್ಷಕ್ಕೆ ಕಾರಣವಾಗಿದೆ ಎಂದು ಹೇಳಿದರು. ಎಸ್ ಪಿ ಅವರಿಗೆ ಬಂಧಿಸಿ ಅಂತ ಹೇಳಿದ ತಕ್ಷಣ, ಅವರು ಕರುಡಾಗಿ ಯಾರನ್ನು ತನಿಖೆ ಮಾಡದೇ ಬಂಧಿಸುವುದಿಲ್ಲ ಎಂದು ಹೇಳಿದ್ದಾರೆ.
ರಮಾನಾಥ ರೈ ಅವರು ರಾಜೀನಾಮೆ ನೀಡುವಂತೆ ಒತ್ತಾಯಿಸಿ ಮಂಗಳೂರಿನಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.