

ಮಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಇಂದು ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಕೆಯಲ್ಲಿ ಒಂದು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದೆ.
ಮಂಗಳೂರಿನ ಟಿಎಂಪೈ ಹಾಲ್ನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ರಾಹುಲ್ ಗಾಂಧಿ, ಚುನಾವಣಾ ಪ್ರಣಾಳಿಕೆ ಕರ್ನಾಟಕ ಜನರ ಧ್ವನಿ ಎಂದು ಬಣ್ಣಿಸಿದ್ದರು. ಮೂರು ಅಥವಾ ನಾಲ್ವರೂ ಕೊಠಡಿಯೊಂದರಲ್ಲಿ ಕುಳಿತು ಸಿದ್ದಪಡಿಸಿರುವ ದಾಖಲೆ ಅಲ್ಲ ಎಂದರು.
ಪ್ರಧಾನಿ ನರೇಂದ್ರಮೋದಿ ಜನರಿಗೆ ಮನ್ ಕೀ ಬಾತ್ ಹೇಳುತ್ತಾರೆ. ಆದರೆ. ಈ ಪ್ರಣಾಳಿಕೆ ರಾಜ್ಯದ ಜನರ ಮನದ ಮಾತು ಆಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಬಿಜೆಪಿ ಪ್ರಣಾಳಿಕೆ ರಾಜ್ಯದ ಜನರಿಗಾಗಿ ಸಿದ್ಧಗೊಂಡಿರುವುದಿಲ್ಲ. ಅದರಲ್ಲಿ ಆರ್ ಎಸ್ ಎಸ್ ಸಿದ್ಧಾಂತಗಳು ಪ್ರತಿಬಿಂಬಿತವಾಗಿರುತ್ತದೆ ಎಂದು ಅವರು ಟೀಕಿಸಿದರು.
ಸಿದ್ದರಾಮಯ್ಯ ಸರ್ಕಾರ ಹಿಂದಿನ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯಲ್ಲಿ ಶೇ.95 ರಷ್ಟು ಪೂರ್ಣಗೊಳಿಸಲಾಗಿದೆ. ಮೇ 12 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 225 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಉದ್ಯೋಗ ಸೃಷ್ಟಿಯ ಗುಮ್ಮ ಎಲ್ಲ ಸರ್ಕಾರಗಳನ್ನು ಕಾಡುತ್ತಲೇ ಇರುತ್ತದೆ.
ಪ್ರಧಾನಮಂತ್ರಿ ನರೇಂದ್ರಮೋದಿ ಪ್ರತಿವರ್ಷ 1 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು. ಆದರೆ, 1 ಸಾವಿರ ಜನರಿಗೂ ಉದ್ಯೋಗ ದೊರೆಯಲಿಲ್ಲ. ಇರುವ ನೌಕರರಿಗೂ ಕೂಡಾ ಉದ್ಯೋಗ ಇಲ್ಲದಂತಾಗಿದೆ ಎಂದು ಕಳೆದ ತಿಂಗಳಷ್ಟೇ ಬಿಜೆಪಿ ಅಂಗಪಕ್ಷವಾದ ಶಿವಸೇನಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿತ್ತು,