

ಬೆಂಗಳೂರು: ಕೆಲ ಬಿಜೆಪಿ ಶಾಸಕರು ಬಿಜೆಪಿ ಸೇರಲು ಉತ್ಸುಕರಾಗಿದ್ದು, ಅವರೊಂದಿಗೆ ಸಂಪರ್ಕದಲ್ಲಿರುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಕ್ವಿಟ್ ಇಂಡಿಯಾ ಆಂದೋಲನ ಅಂಗವಾಗಿ ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷ ಸೇರಲು ಉತ್ಸುಕರಾಗಿದ್ದಾರೆ ಆದಾಗ್ಯೂ, ಈಗ ಎಲ್ಲಾ ಮಾಹಿತಿಯನ್ನು ಬಹಿರಂಗಗೊಳಿಸುವುದಿಲ್ಲ ಎಂದು ಹೇಳಿದರು.
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ಆಡಳಿತದ ಬಗ್ಗೆ ದೇಶದಲ್ಲಿನ ಎಲ್ಲ ಜನರು ಬೇಸತ್ತಿದ್ದಾರೆ. ರೈತರು ತಮ್ಮ ಬೆಳೆಗಳಿಗೆ ಉತ್ತಮ ಆದಾಯ ಪಡೆಯುವಂತಾಗಿಲ್ಲ. ಯುವ ಜನಾಂಗಕ್ಕೆ ಉದ್ಯೋಗ ದೊರೆಯುತ್ತಿಲ್ಲ. ಕೋಮುವಾದಿ ಪಕ್ಷವನ್ನು ಸೋಲಿಸಿ ರಾಹುಲ್ ಗಾಂಧಿ ಅವರನ್ನು ಮುಂದಿನ ಪ್ರಧಾನಿ ಮಾಡುತ್ತೇವೆ ಎಂದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ದೇಶವನ್ನು ಕೋಮು ವಿಭಜನೆ ಮಾಡಿ ಆಳ್ವಿಕೆ ಮಾಡುವವರನ್ನು ದೇಶ ವಿರೋಧಿಗಳು ಎಂದು ಬ್ರಾಂಡ್ ಮಾಡಬೇಕಾಗಿದೆ. ರಾಜಕೀಯ ಉದ್ದೇಶದಿಂದ ಕೇಂದ್ರಸರ್ಕಾರ ಆದಾಯ ತೆರಿಗೆ ಇಲಾಖೆ ಅಂತಹ ಕೇಂದ್ರಸರ್ಕಾರದ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.