ರಾಜಕೀಯ

ವಿಜಯಪುರ: ಸೋಲಿಗೆ ಇವಿಎಂ ಕಾರಣ ಎನ್ನಲು ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದೆ - ಪ್ರಧಾನಿ ಮೋದಿ

ವಿಜಯಪುರ: ಸೋಲಿಗೆ ಇವಿಎಂ ಕಾರಣ ಎನ್ನಲು ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದೆ - ಪ್ರಧಾನಿ ಮೋದಿ
ಬಸವ ನಾಡು ವಿಜಯಪುರದಲ್ಲಿ ಪ್ರಧಾನಿ ಮೋದಿ; ಬೃಹತ್ ವೇದಿಕೆಯಲ್ಲಿ ಜನತೆಯನ್ನುದ್ದೇಶಿಸಿ ಭಾಷಣ
Published On :
ವಿಜಯಪುರ: ಬಸವ ನಾಡು ವಿಜಯಪುರದ ಬೃಹತ್ ವೇದಿಕೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾಷಣವನ್ನು ಆರಂಭಿಸಿದ್ದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. 
ವಿಜಯಪುರದ ಜನರಿಗೆ ಕನ್ನಡದಲ್ಲಿಯೇ ಶುಭಾಶಯಗಳನ್ನು ಕೋರಿ ಭಾಷಣವನ್ನು ಆರಂಭಿಸಿದ ಮೋದಿ ಎಂದಿನಂತೆ ಆ ಭಾಗದ ಮಹನೀಯರನ್ನು ನೆನೆದು ಪ್ರಣಾಮ ಸಲ್ಲಿಸಿದರು. 
ಕರ್ನಾಟಕ ರಾಜ್ಯದಲ್ಲಿ ಬಹುಮತ ಬರುವುದಿಲ್ಲ ಎಂದು ಎಸಿ ರೂಮಿನಲ್ಲಿ ಕುಳಿತ ಜನರು ಮಾತನಾಡುತ್ತಾರೆ. ಆ ಮಾತುಗಳನ್ನು ನಂಬಬೇಡಿ. ಇಲ್ಲಿಗೆ ಬಂದಿರುವ ನೀವೇ ಸಾಕ್ಷಿ. ಒಂದೇ ಪಕ್ಷಕ್ಕೆ ಬಹುಮತ ಬರುತ್ತದೆ ಎಂಬುದು ಗೊತ್ತಾಗುತ್ತದೆ. ಅದು ಸುಳ್ಳು, ಕರ್ನಾಟಕದಲ್ಲಿ ಸ್ಪಷ್ಟ ಸರ್ಕಾರ ಬರುತ್ತದೆ. ಇಲ್ಲಿನ ಜನ ಬದಲಾವಣೆ ಬಯಸಿದ್ದಾರೆ. ಇದಕ್ಕೆ ನೀವೇ ಸಾಕ್ಷಿ ಎಂದು ಹೇಳಿದ್ದಾರೆ. 
ಕರ್ನಾಟಕದ ಜನರು ಕಾಂಗ್ರೆಸ್ ಪಕ್ಷವನ್ನು ಕೇವಲ ಅಧಿಕಾರದಿಂದ ಮಾತ್ರವೇ ಕೆಳಗಿಳಿಸುವುದಿಲ್ಲ. ಬದಲಿಗೆ 5 ವರ್ಷಗಳ ಕಠಿಣ ಶಿಕ್ಷೆಯನ್ನೂ ನೀಡಲಿದೆ. ವಿಜಯಪುರ ಭಗವಾನ್ ಬಸವೇಶ್ವರರ ಜನ್ಮಭೂಮಿ, ಯಾರನ್ನೂ ಜಾತಿ, ಧರ್ಮದ ಆಧಾರದ ಮೇಲೆ ಬೇರೆ ಮಾಡಬೇಡಿ ಎಂಬ ಸಂದೇಶವನ್ನು ನೀಡಿದೆ. ಆದರೆ, ಇಲ್ಲಿನ ಕಾಂಗ್ರೆಸ್  ಸರ್ಕಾರ ಬಸವಣ್ಣ ಅವರ ತತ್ವಗಳಿಗೆ ವಿರುದ್ಧವಾಗಿ ನಡೆಯುತ್ತಿದೆ. ಎಲ್ಲರನ್ನೂ ವಿಭಜನೆ ಮಾಡಿ, ಸಮುದಾಯಗಳ ನಡುವೆ ಕಿಚ್ಚನ್ನು ಹೆಚ್ಚಿಸುತ್ತಿದೆ. ಜಾತಿ, ಧರ್ಮ, ಮತಗಳ ಆಧಾರದ ಮೇಲೆ ವಿಭಜನೆ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರಿಗೆ ವಿಜಯಪುರ ಜನತೆ ಸ್ಪಷ್ಟ ಸಂದೇಶವನ್ನು ರವಾನಿಸಬೇಕು. ಇಲ್ಲಿನ ಜನರು ಇಂತಹ ಸರ್ಕಾರವನ್ನು ಕಿತ್ತೊಗೆದು, ಜಾತಿ ಮತ್ತು ಮತಗಳ ಆಧಾರದ ಮೇಲೆ ಒಡೆಯುವವರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ತಿಳಿಸಿದ್ದಾರೆ. 

ರಾಜ್ಯದಲ್ಲಿ ಬಿಜೆಪಿಗೆ ಸಿಗುತ್ತಿರುವ ಬೆಂಬಲ ನೋಡಿ ಕಾಂಗ್ರೆಸ್ ಭೀತಿಗೊಳಗಾಗಿದೆ. ಹೀಗಾಗಿ ಮೇ.15ರ ಫಲಿತಾಂಶದ ಬಳಿಕ ತಮ್ಮ ಸೋಲಿಗೆ ಇವಿಎಂ ಮೇಲೆ ತಪ್ಪು ಹೊರಿಸಲು ಸಿದ್ದತೆ ನಡೆಸುತ್ತಿದ್ದಾರೆ. 

ಇದೇ ವೇಳೆ ಬಸವಣ್ಣ ಅವರ ಇವನಾರವ...ಇವನಾರವ ಎಂದೆನಸದಿರಯ್ಯ... ಇವ ನಮ್ಮವ... ಇವ ನಮ್ಮವ ಎಂದೆನಿಸಯ್ಯ ವಚನವನ್ನು ಕನ್ನಡದಲ್ಲಿಯೇ ಹೇಳಿದ ಅವರು, ವಿಜಯಪುರ ಬಸವಣ್ಣನವರು ಜನಿಸಿದ ಪವಿತ್ರ ಭೂಮಿಯಿದು ಎಂದು ನೆನಪಿಸಿಕೊಂಡರು. 

ಕಳೆದ 3 ವರ್ಷಗಳಿಂದ ನೀರಿನ ಅಭಾವ ತಲೋದಿರೆ. ಶಿಕ್ಷಕರಿಲ್ಲದ ಶಿಕ್ಷಣ ಹಿಂದುಳಿದಿದೆ. ಇನ್ನು ಮರಳು ಮಾಫಿಯಾ ನಿರಂತರವಾಗಿ ನಡೆಯುತ್ತಿದೆ. ಈ ಭಾಗಗಳನ್ನು ನೋಡಿಕೊಳ್ಳುತ್ತಿದ್ದ ಸಚಿವರು ತಮ್ಮ ಖಾತೆ ನಿರ್ವಹಿಸುವುದನ್ನು ಬಿಟ್ಟು ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಭಗವಾನ್ ಬಸವಣ್ಣ, ಅಲ್ಲಮ್ಮ ಪ್ರಭು, ಅಕ್ಕಮಹಾದೇವಿ ಯಾರು ಎಂದು ಗೊತ್ತಿಲ್ಲದವರು, ನಾಮ್ದಾರ್ ಜೊತೆಗೂಡಿ ಧರ್ಮ ಒಡೆಯುವ ಕೆಲ ಮಾಡುತ್ತಿದ್ದಾರೆ. ದೆಹಲಿಯಲ್ಲಿ ಕುಳಿತು ಧರ್ಮ, ಜಾತಿಯನ್ನು ಒಡೆಯಲು ಯೋಜನೆ ರೂಪಿಸಿದ್ದಾರೆ. 

ಕರ್ನಾಟಕ ಸರ್ಕಾರದಲ್ಲಿರುವ ಯಾವುದೇ ಒಬ್ಬ ಮಂತ್ರಿಯ ಹೆಸರನ್ನು ಹೇಳಿ... ಅವರ ವಿರುದ್ಧ ಭ್ರಷ್ಟಾಚಾರದ ಯಾವುದೇ ಆರೋಪಗಳಿಕಬಾರದು...ಇದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ಈ ನಡುವೆ ನೀರಾವರಿ ಸಚಿವರ ಹೆಸರನ್ನು ಪ್ರಸ್ತಾಪಿಸಿದ ಮೋದಿಯವರು, ಗುತ್ತಿಗೆದಾರರು, ಟೆಂಡರ್ ವಿಷಯವನ್ನು ಎಷ್ಟು ಭ್ರಷ್ಟಾಚಾರ ಮಾಡಿದ್ದಾರೆಂಬುದು ಇದರಿಂದ ತಿಳಿಯುತ್ತದೆ ಎಂದಿದ್ದಾರೆ. 

ಬಸವೇಶ್ವರರ ಭಾವಚಿತ್ರವನ್ನು ಅಟಲ್ ಬಿಹಾರಿ ವಾಜಪೇಯಿಯವರು ಅಧಿಕಾರಕ್ಕೆ ಬಂದ ಮೇಲೆ ಸಂಸತ್ತಿನಲ್ಲಿ ಹಾಕಲಾಗಿತ್ತು. 50 ವರ್ಷ ಆಡಳಿತ ಮಾಡಿದ್ದ ಕಾಂಗ್ರೆಸ್ ಅಲ್ಲಿಯವರೆಗೂ ಏನು ಮಾಡಿತು?... ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬಸವೇಶ್ವರರ ನೀತಿಗಳನ್ನು ದೇಶದಾದ್ಯಂತ ಪಸರಿಸುವ ಕೆಲಸ ಮಾಡಿದ್ದೇವೆ. ಲಂಡನ್ ನಲ್ಲಿ ನಿರ್ಮಿಸಲಾದ ಬಸವೇಶ್ವರರಮೂರ್ತಿ ಅನಾವರಣ ಮಾಡುವ ಸೌಭಾಗ್ಯ ಸಿಕ್ಕಿತು. ಮೊನ್ನೆ ಮೊನ್ನೆಯಷ್ಟೇ ಬಸವೇಶ್ವರ ದರ್ಶ ಮಾಡಿಕೊಂಡು ಬಂದಿದ್ದೇನೆಂದು ತಿಳಿಸಿದರು. 

ಕರ್ನಾಟಕದಲ್ಲಿ ಹಲವು ಪಠಾಧೀಶರು ತ್ರಿವಿಧ ದಾಸೋಹದ ಪರಂಪರೆಯನ್ನು ರಾಜ್ಯದಲ್ಲಿ ಬೆಳೆಸಿದರು. ತ್ರಿವಧಿ ದಾಸೋಹ ಎಂದರೆ ಅನ್ನ, ಅಕ್ಷರ, ಆರೋಗ್ಯ. ಬಿಜೆಪಿಯೂ ತ್ರಿವಿಧ ದಾಸೋಹ ತತ್ವದಲ್ಲಿ ನಂಬಿಕೆ ಇಟ್ಟಿದೆ. ಮಕ್ಕಳಿಗೆ ಶಿಕ್ಷಣ, ಯುವಕರಿಗೆ ಕೆಲಸ, ವೃದ್ಧರಿಗೆ ಆರೋಗ್ಯ ಸೇವೆ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಮೂಲಕ ತ್ರಿವಿಧ ದಾಸೋಹಕ್ಕೆ ಆದ್ಯತೆ ನೀಡಿದೆ. 

ಮುದ್ರಾ ಯೋಜನೆಯಲ್ಲಿ ರೂ.12 ಕೋಟಿ ಯುವಕರಿಗೆ ನಮ್ಮ ಸರ್ಕಾರ ಸಾಲ ಸೌಲಭ್ಯ ನೀಡಿದೆ. ಇದರಿಂದಾಗಿ ಅವರು ಸ್ವಂತ ಉದ್ಯೋಗವನ್ನು ಮಾಡಲು ಸಾಧ್ಯವಾಗಿದೆ. ಆಯುಷ್ಮನ್ ಭಾರತ ಎಂಬ ಯೋಜನೆ ಜಾರಿಗೆ ತರಲಾಗಿದೆ. ಗಂಭೀರ ರೋಗಗಳಿಗೆ ತುತ್ತಾದ ಜನರಿಗೆ ಚಿಕಿತ್ಸೆಗೆ ಹಣವಿಲ್ಲದಿದ್ದರೆ ಸರ್ಕಾರದಿಂದ ರೂ.5 ಲಕ್ಷ ಸಿಗಲಿದೆ. 

ಕರ್ನಾಟಕ ಸರ್ಕಾರ ದೊಡ್ಡ ದೊಡ್ಡ ಮಾತನಾಡುತ್ತದೆ. ಆದರೆ, ರಾಜ್ಯ 6 ಲಕ್ಷ ಕುಟುಂಬಗಳು ಇನ್ನೂ ವಿದ್ಯುತ್ ವ್ಯವಸ್ಥೆಯನ್ನು ಪಡೆದಿಲ್ಲ. ನಾನು ಅಧಿಕಾರಕ್ಕೆ ಬಂದ ಬಳಿಕ ಎಲ್ಲರಿಗೂ ವಿದ್ಯುತ್ ದೊರಕಿಸಿಕೊಡಲಾಗಿದೆ. ಅಡುಗೆ ಮನೆಯಲ್ಲಿ ನಮ್ಮ ಮಾತೆಯರು ಅಡುಗೆ ಮಾಡಲು ಒದ್ದಾಡುತ್ತಿದ್ದರು. ಇದೂವರೆಗೂ 13 ಕೋಟಿ ಕುಟುಂಬಗಳಿಗೆ ಗ್ಯಾಸ್ ಸಂಪರ್ಕವನ್ನು ಇತ್ತು. ನಮ್ಮ ಸರ್ಕಾರ ಬಂದ ಬಳಿಕ 10 ಕೋಟಿ ಜನರಿಗೆ ಗ್ಯಾಸ್ ಸಂಪರ್ಕವನ್ನು ನೀಡಲಾಗಿದೆ. ಕರ್ನಾಟಕದಲ್ಲಿ 10 ಲಕ್ಷ ಕುಟುಂಬಗಳಿಗೆ ಪ್ರೀ ಗ್ಯಾಸ್ ಸಂಪರ್ಕ ನೀಡಿದ್ದೇವೆ. 

ಕಾಂಗ್ರೆಸ್ ವಂಶಪಾರಂಪರ್ಯವನ್ನು ಮುಂದುವರೆಸಲು ಮತ ಕೇಳುತ್ತಿದ್ದಾರೆ. ಆದರೆ ನಾವು ವಿಕಾಸಕ್ಕಾಗಿ ಮತ ಕೇಳುತ್ತಿದ್ದೇವೆ. ಕಾಂಗ್ರೆಸ್ ಮತಕ್ಕಾಗಿ ಜನರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಿದೆ. ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ಕಾಂಗ್ರೆಸ್ ಸುಳ್ಳು ಹೇಳುತ್ತಿದೆ. ವಿಜಯಪುರದಲ್ಲಿಯೇ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ನಡೆದಿದೆ. ನಮಗೆ ನಿಮ್ಮ ಬಗ್ಗೆ ಕಾಳಜಿಯಿದೆ. ಮಕ್ಕಳ ಮೇಲೆ ಅತ್ಯಾಚಾರ ನಡೆಸಿದವರಿಗೆ ಗಲ್ಲು ಶಿಕ್ಷೆ ನೀಡುವ ತೀರ್ಮಾನವನ್ನು ತೆಗೆದುಕೊಂಡಿದ್ದೇವೆ. ಹೆಣ್ಣು ಮಕ್ಕುಳು ಮುಸ್ಲೀಮರೇ ಆಗಲೀ, ಹಿಂದುಗಳೇ ಆಗಲಿ ಹೆಣ್ಣು ಮಕ್ಕಳ ರಕ್ಷಣೆಯಾಗಲೇಬೇಕು. ಅದಕ್ಕಾಗಿಯೇ ಹೊಸ ಕಾನೂನು ಜಾರಿಗೆ ತಂದಿದ್ದೇವೆ. ಮಹಿಳೆಯರ ರಕ್ಷಣೆಗಾಗಿ ತ್ರಿವಳಿ ತಲಾಖ್ ನಿಷೇಧಿಸಿದ್ದೇವೆ. ಆದರೆ, ಈ ಬಗ್ಗೆ ಕಾನೂನು ಜಾರಿಗೆ ತರಲು ಕಾಂಗ್ರೆಸ್ ಬಿಡುತ್ತಿಲ್ಲ ಎಂದು ಹರಿಹಾಯ್ದಿದ್ದಾರೆ. 

ಮೇ.15ಕ್ಕೆ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿದೆ. ಅಧಿಕಾರಕ್ಕೆ ಬಂದ ಕೂಡಲೇ ರೈತ ಬಂಧು ಇಲಾಖೆ ಸ್ಥಾಪನೆಯಾಗಲಿದೆ ರೂ.1.5 ಲಕ್ಷ ವೆಚ್ಚದಲ್ಲಿ ನೀರಾವರಿ ಯೋಜನೆ ಜಾರಿಗೆ ಬರಲಿದೆ. ಭೂಮಿ ಹೀನರಿಗೆ 2 ಸಾವಿರ ಸಹಾಯಧನ. ವಿಜಯಪುರದಲ್ಲಿ ತೋಟಗಾರಿಕೆ ಇಲಾಖೆ ಸ್ಥಾಪನೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.