

ಬೆಂಗಳೂರು: ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳಿಗೆ ನಾಳೆ ನಡೆಯಲಿರುವ ಉಪ ಚುನಾವಣೆಗೆ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ನಿನ್ನೆ ಅಂತಿಮ ಕ್ಷಣದಲ್ಲಿ ಮತದಾರರನ್ನು ಸೆಳೆಯಲು ವಿವಿಧ ಪಕ್ಷಗಳ ರಾಜಕೀಯ ಮುಖಂಡರು ತೀವ್ರ ಪ್ರಯತ್ನ ನಡೆಸಿದರು.
ಉಪ ಚುನಾವಣೆಯ ಮತದಾನಕ್ಕೆ ಇನ್ನು ಕೇವಲ ಒಂದು ದಿನ ಬಾಕಿ ಉಳಿದಿದ್ದು, ರಾಜಕೀಯ ಮುಖಂಡರೊಂದಿಗೆ ನಿನ್ನೆ ಅಭ್ಯರ್ಥಿಗಳು ದಿನವಿಡೀ ರ್ಯಾಲಿಗಳಲ್ಲಿ ಮತ್ತು ಪ್ರಚಾರಗಳಲ್ಲಿ ಭಾಗವಹಿಸಿದ್ದು ಕಂಡುಬಂತು. ಅಂತಿಮ ಸುದ್ದಿಗೋಷ್ಠಿಯಲ್ಲಿ ಎಂದಿನಂತೆ ರಾಜಕೀಯ ಮುಖಂಡರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿಕೊಂಡರು.
ಬಿಜೆಪಿ ನಾಯಕರಾದ ಶ್ರೀರಾಮುಲು ಮತ್ತು ಡಿ ಕೆ ಶಿವಕುಮಾರ್ ಬಳ್ಳಾರಿಯಲ್ಲಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಜಮಖಂಡಿಯಲ್ಲಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಂಡ್ಯದಲ್ಲಿ ನಿನ್ನೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಪ್ರಚಾರ ಕಾರ್ಯವನ್ನು ಪೂರ್ಣಗೊಳಿಸಿದರು. ಅಲ್ಲಿ ಕಾರ್ಯಕರ್ತರೊಂದಿಗೆ ಮಾತನಾಡಿದ ದೇವೇಗೌಡ ತಾವು ಮತ್ತು ಸಿದ್ದರಾಮಯ್ಯ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾದಂತೆ ಮಂಡ್ಯದಲ್ಲಿ ಸಹ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ಇರಬೇಕು ಎಂದು ಕಿವಿಮಾತು ಹೇಳಿದರು.
ಉಪ ಚುನಾವಣೆಗೆ ನಿನ್ನೆ ಬಹಿರಂಗ ಪ್ರಚಾರ ನಾಟಕೀಯ ತಿರುವು ಪಡೆದುಕೊಂಡು ಅಂತ್ಯ ಕಂಡಿತು. ರಾಮನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಲ್ ಚಂದ್ರಶೇಖರ್ ಕೊನೆ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದದ್ದು ಬಿಜೆಪಿಗೆ ಭಾರೀ ಆಘಾತ ನೀಡಿದರೆ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಗೆಲುವಿನ ಹಾದಿ ಸುಗಮವಾಗಿದೆ.
ಈ ಎಲ್ಲಾ ಬೆಳವಣಿಗೆಗಳನ್ನು ಮೂಕ ಪ್ರೇಕ್ಷಕನಂತೆ ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ನೋಡುತ್ತಿದ್ದಾರೆ ಎಂದು ಹೊರಗಿನಿಂದ ಕಂಡುಬಂದರೂ ಕೂಡ ತಮಗೆ ಚಂದ್ರಶೇಖರ್ ಅವರ ನಿರ್ಧಾರದ ಬಗ್ಗೆ ಏನೂ ಗೊತ್ತಿರಲಿಲ್ಲ ಎಂದು ಹೇಳಿ ನಿನ್ನೆ ಬಳ್ಳಾರಿಯಲ್ಲಿ ವಿ ಎಸ್ ಉಗ್ರಪ್ಪ ಪರ ಕೊನೆ ಹಂತದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಸ್ಪರ್ಧೆಯಿಂದ ಹಿಂದೆ ಸರಿದರೂ ಕೂಡ ಚುನಾವಣಾ ಆಯೋಗದ ಪ್ರಕಾರ ಚಂದ್ರಶೇಖರ್ ಮಾತ್ರ ರಾಮನಗರದಲ್ಲಿ ಅಧಿಕೃತವಾಗಿ ಬಿಜೆಪಿ ಅಭ್ಯರ್ಥಿಯೇ.
ಮಂಡ್ಯ ಮತ್ತು ರಾಮನಗರದಲ್ಲಿ ಸಮ್ಮಿಶ್ರ ಸರ್ಕಾರದ ಮೈತ್ರಿಕೂಟಗಳ ಅಭ್ಯರ್ಥಿಗಳು ಸುಲಭವಾಗಿ ಗೆಲ್ಲುವ ಸಾಧ್ಯತೆ ಬಹುತೇಕ ಖಚಿತವಾಗಿದ್ದು, ಶಿವಮೊಗ್ಗ, ಜಮಖಂಡಿ ಮತ್ತು ಬಳ್ಳಾರಿ ಕ್ಷೇತ್ರಗಳಲ್ಲಿ ತೀವ್ರ ಪೈಪೋಟಿಯಿದೆ.
ರಾಮನಗರದಲ್ಲಿ ತಮ್ಮ ಅಭ್ಯರ್ಥಿ ಕೊನೆ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದು ಆಘಾತ ನೀಡಿದರೂ ಸಹ ಶಿವಮೊಗ್ಗದಲ್ಲಿ ಮಾತ್ರ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ತಮ್ಮ ಪುತ್ರನ ಪರ ನಿನ್ನೆ ಪ್ರಚಾರ ನಡೆಸಿದರು. ಈ ವೇಳೆ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ತಮ್ಮ ಅಭ್ಯರ್ಥಿಯನ್ನು ದುಡ್ಡು ಕೊಟ್ಟು ಖರೀದಿಸಿದೆ ಎಂದು ಆರೋಪಿಸಿದರು.