ಲೋಕಾ ಸಮರ: 10 ಕ್ಷೇತ್ರ ಜೆಡಿಎಸ್ ಗೆ, ಕೈ ಮುಖಂಡರೊಂದಿಗೆ ಚರ್ಚಿಸಿ ರಾಹುಲ್ ಅಂತಿಮ ನಿರ್ಧಾರ: ಎಚ್ ಡಿ ದೇವೇಗೌಡ

ಜೆಡಿಎಸ್ 10 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದ್ದು, ಈ ಬಗ್ಗೆ ರಾಹುಲ್ ಗಾಂಧಿ ತಮ್ಮ ಮುಖಂಡರೊಂದಿಗೆ ಚರ್ಚಿಸಿ ಶೀಘ್ರ ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಹೇಳಿದ್ದಾರೆ.
ದೇವೇಗೌಡರ ಭೇಟಿಯಾದ ರಾಹುಲ್ ಗಾಂಧಿ
ದೇವೇಗೌಡರ ಭೇಟಿಯಾದ ರಾಹುಲ್ ಗಾಂಧಿ
Updated on: 
ನವದೆಹಲಿ: ಒಟ್ಟು 28 ಲೋಕಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್ 10 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದ್ದು, ಈ ಬಗ್ಗೆ ರಾಹುಲ್ ಗಾಂಧಿ ತಮ್ಮ ಮುಖಂಡರೊಂದಿಗೆ ಚರ್ಚಿಸಿ ಶೀಘ್ರ ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಹೇಳಿದ್ದಾರೆ.
ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಸೀಟು ಹಂಚಿಕೆ ಕಾರ್ಯ ಅಂತಿಮಗೊಳಿಸಲು ದೋಸ್ತಿ ಸರ್ಕಾರ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ಮುಂದಾಗಿವೆ. ಸೀಟು ಹಂಚಿಕೆ ಸಂಬಂಧ ಚರ್ಚೆಗಾಗಿ ದೇವೇಗೌಡ ಅವರು ರಾಹುಲ್ ಗಾಂಧಿ ಅವರನ್ನು ಇಂದು ದೆಹಲಿಯಲ್ಲಿ ಭೇಟಿ ಮಾಡಿದ್ದರು. 
ಬೆಳಗ್ಗೆ 10 ಗಂಟೆಗೆ ದೆಹಲಿಯ ಸಫ್ದರ್‌ಜಂಗ್‌ ರಸ್ತೆಯಲ್ಲಿರುವ ದೇವೇಗೌಡರ ನಿವಾಸಕ್ಕೆ ರಾಹುಲ್​ ಆಗಮಿಸಿದರು. ಅವರ ಮನೆಯಲ್ಲಿಯೇ ರಾಹುಲ್‌ ಉಪಹಾರ ಸೇವಿಸಿದರು. ಈ ವೇಳೆ ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ಸಂಬಂಧ ಇಬ್ಬರೂ ಚರ್ಚೆ ನಡೆಸಿದ್ದಾರೆ. 
ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ ಅವರು, 28 ಸೀಟುಗಳ ಪೈಕಿ 10 ಸೀಟುಗಳು ತಮಗೇ ಬೇಕು ಎಂದು ಕೇಳಿದ್ದೇವೆ. ಈ ಬಗ್ಗೆ ರಾಹುಲ್ ಕೂಡ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಶೀಘ್ರ ತಮ್ಮ ರಾಜ್ಯ ನಾಯಕರೊಂದಿಗೆ ಚರ್ಚಿಸಿ ಒಂದು ವಾರದೊಳಗೆ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಈ ಹಿಂದೆ ಇದೇ ಸೀಟು ಹಂಚಿಕೆ ವಿಚಾರ ಇತ್ತೀಚೆಗೆ ನಡೆದ ಕಾಂಗ್ರೆಸ್​​-ಜೆಡಿಎಸ್​ ಸಮನ್ವಯ ಸಮಿತಿ ಸಭೆಯಲ್ಲಿ ಕ್ಷೇತ್ರ ಹಂಚಿಕೆ ವಿಚಾರ ಚರ್ಚೆಗೆ ಬಂದಿತ್ತು. ಆದರೆ, ಯಾವುದೂ ಅಂತಿಮವಾಗಿರಲಿಲ್ಲ. ಸೋಮವಾರ ಕಾಂಗ್ರೆಸ್​ - ಜೆಡಿಎಸ್​ ಸಮನ್ವಯ ಸಮಿತಿ ಸಭೆ ನಡೆಸಲಾಗಿತ್ತು. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕಾಂಗ್ರೆಸ್​ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್​, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್​, ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಸೇರಿದಂತೆ ಸಮನ್ವಯ ಸಮಿತಿಯ ಎಲ್ಲಾ ಸದಸ್ಯರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮುಖ್ಯವಾಗಿ ಚರ್ಚೆಯಾದ ವಿಚಾರ ಲೋಕಸಭಾ ಟಿಕೆಟ್​ ಹಂಚಿಕೆ. ಜೆಡಿಎಸ್​ 12 ಸ್ಥಾನಗಳಿಗೆ ಪಟ್ಟು ಹಿಡಿದಿದ್ದರೆ, ಕಾಂಗ್ರೆಸ್​ 9 ಸ್ಥಾನ ನೀಡಲು ಒಪ್ಪಿತ್ತು. 
ಮೈಸೂರು ತಮಗೇ ಬೇಕೆಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ. ಸುಮಲತಾ ವಿಷಯಕ್ಕೆ ಸಂಬಂಧಿಸಿ ಮಂಡ್ಯ ಕ್ಷೇತ್ರ ಕಗ್ಗಂಟಿಗೆ ಸಿಲುಕಿದೆ. ಮಂಡ್ಯ ಕ್ಷೇತ್ರದಿಂದ ಮೊಮ್ಮೊಗ ನಿಖಿಲ್​ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿಬೇಕು ಎಂಬುದು ದೇವೆಗೌಡರ ಲೆಕ್ಕಾಚಾರ. ಆದರೆ, ಸುಮಲತಾ ಕಾಂಗ್ರೆಸ್ ನಿಂದ ಈ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಪಟ್ಟು ಹಿಡಿದಿದ್ದಾರೆ. ಈ ವಿಚಾರ ಕೂಡ ಇಂದಿನ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಬಂದಿವೆಯಂತೆ. ರಾಜ್ಯ ನಾಯಕರ ಮಟ್ಟದಲ್ಲಿ ನಡೆದಿದ್ದ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ದೇವೇಗೌಡ-ರಾಹುಲ್​ ಭೇಟಿ ಮಹತ್ವ ಪಡೆದುಕೊಂಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com