ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಗುರುವಾರ ನಡೆದ ಜೆಡಿಎಸ್ ಸಮಾವೇಶದ ವೇದಿಕೆಯನ್ನು ನಟಿ ಸುಮಲತಾ ವಿರುದ್ಧ ವಾಗ್ದಾಳಿ ನಡೆಸಲು ಬಳಸಿಕೊಳ್ಳಲಾಯ್ತು.
ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಿದ್ಧತೆ ನಡೆಸಿರುವ ಸುಮಲತಾ ವಿರುದ್ಧ, ಜೆಡಿಎಸ್ ನಾಯಕರು ಅವರ ಹೆಸರನ್ನು ನೇರವಾಗಿ ತೆಗೆದುಕೊಳ್ಳದೇ ಹರಿಹಾಯ್ದರು.
ಹಿರಿಯ ನಟ ಅಂಬರೀಷ್ ನಿಧನವಾದಾಗ ಅವರ ಅಭಿಮಾನಿಗಳಿಗಾಗಿ ನಾನು ಪಾರ್ಥೀವ ಶರೀರವನ್ನು ಮಂಡ್ಯಕ್ಕೆ ತರಲು ನಾನು ನಿರ್ಧರಿಸಿದಾಗ ಹಲವು ಮಂದಿ ಅಲ್ಲಿಗೆ ಕೊಂಡೊಯ್ಯುವುದು ಬೇಡ ಎಂದು ವಿರೋಧ ವ್ಯಕ್ತ ಪಡಿಸಿದ್ದರು. ಈಗ ಅವರೆಲ್ಲರೂ ನನ್ನ ವಿರುದ್ಧವೇ ಮಾತನಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಬೇಸರ ವ್ಯಕ್ತ ಪಡಿಸಿದರು.
ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಸೇನಾ ಹೆಲಿಕಾಪ್ಟರ್ ಕರೆಸಿ ಅಂಬರೀಷ್ ಶವವನ್ನು ಬೆಂಗಳೂರಿನಿಂದ ಮಂಡ್ಯಕ್ಕೆ ತಂದೆ., ಅಂಬರೀಷ್ ಅಭಿಮಾನಿಗಳಿಗೆ ಇದ್ಯಾವುದು ತಿಳಿದಿಲ್ಲವೇ, ಟೀಕೆ ಮಾಡುವ ಮುನ್ನ ಒಮ್ಮೆ ಅವರ ಆತ್ಮ ಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಲಿ ಎಂದು ಕುಮಾರ ಸ್ವಾಮಿ ಹೇಳಿದ್ದಾರೆ.
ಸೋಷಿಯಲ್ ಮೀಡಿಯಾ ಮತ್ತು ವಾಟ್ಸಾಪ್ ನಲ್ಲಿ ಬರುವ ಸಂದೇಶಗಳನ್ನು ನಂಬಬೇಡಿ ಎಂದು ಸಿಎಂ ಕರೆ ನೀಡಿದ್ದಾರೆ, ಜಾಗ್ವಾರ್ ಸಿನಿಮಾ ರಿಲೀಸ್ ವೇಳೆಯ ಹಳೇಯ ಕ್ಲಿಪ್ ವಾಟ್ಸಾಪ್ ನಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಈ ಹೇಳಿಕೆ ನೀಡಿದ್ದಾರೆ.