'ಎಲ್ಲವನ್ನೂ ಪ್ರಶ್ನಿಸಲು ಸ್ಪೀಕರ್‌ ಏನು ಹೆಡ್‌ ಮೇಷ್ಟ್ರೇ?'; ಅನರ್ಹ ಶಾಸಕರ ಪರ ಮುಕುಲ್ ರೋಹ್ಟಗಿ ವಾದ

ದೋಸ್ತಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದು ಅನರ್ಹರಾಗಿದ್ದ ಶಾಸಕರ ಅರ್ಜಿಯ ಮಹತ್ವದ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿದ್ದು, ಅನರ್ಹ ಶಾಸಕರ ಪರ ವಾದ ಮಂಡಿಸಿರುವ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರು, 'ಎಲ್ಲವನ್ನೂ ಪ್ರಶ್ನಿಸಲು ಸ್ಪೀಕರ್‌ ಏನು ಹೆಡ್‌ ಮೇಷ್ಟ್ರೇ?' ಎಂದು ಪ್ರಶ್ನಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನವದೆಹಲಿ: ದೋಸ್ತಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದು ಅನರ್ಹರಾಗಿದ್ದ ಶಾಸಕರ ಅರ್ಜಿಯ ಮಹತ್ವದ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿದ್ದು, ಅನರ್ಹ ಶಾಸಕರ ಪರ ವಾದ ಮಂಡಿಸಿರುವ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರು, 'ಎಲ್ಲವನ್ನೂ ಪ್ರಶ್ನಿಸಲು ಸ್ಪೀಕರ್‌ ಏನು ಹೆಡ್‌ ಮೇಷ್ಟ್ರೇ?' ಎಂದು ಪ್ರಶ್ನಿಸಿದ್ದಾರೆ.

ಬುಧವಾರ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ತ್ರಿಸದಸ್ಯ ಪೀಠ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿತು. ಅನರ್ಹರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್‌ ರೋಹಟಗಿ, ಅನರ್ಹರ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು, ಸೆ 30 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಇವರೆಲ್ಲ ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ ಎಂಟು ವಾರಗಳು ಕಳೆದಿವೆ. ಹೀಗಾಗಿ ತುರ್ತಾಗಿ ಅರ್ಜಿಯನ್ನು ಇತ್ಯರ್ಥ ಪಡಿಸುವಂತೆಯೂ ಹಾಗೂ ಚುನಾವಣಾ ಅಧಿಸೂಚನೆಗೆ ತಡೆ ನೀಡುವಂತೆ ತ್ರಿಸದಸ್ಯ ಪೀಠಕ್ಕೆ  ಮನವಿ ಮಾಡಿದರು.

ತಮ್ಮ ವಾದ ಮಂಡನೆ ವೇಳೆ ಹಲವು ವಿಚಾರಗಳ ಪ್ರಸ್ತಾಪಿಸಿದ ರೋಹ್ಟಗಿ ಅವರು, 'ಸ್ಪೀಕರ್‌ ಶಾಸಕರ ವಿಚಾರದಲ್ಲಿ ಸಾಮಾಜಿಕ ನ್ಯಾಯವನ್ನು ಅನುಸರಿಸಿಲ್ಲ. ಶಾಸಕರ ರಾಜೀನಾಮೆ ಅಂಗೀಕಾರವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಮೊದಲು ಅವರು ಹೇಳಬೇಕಿತ್ತು. ಆದರೆ ರಾಜೀನಾಮೆ ವಿಚಾರವನ್ನು ಮೊದಲು ಇತ್ಯರ್ಥ ಪಡಿಸದೇ ಏಕಾಏಕಿ ಶಾಸಕರ ಸದಸ್ಯತ್ವ ರದ್ದುಗೊಳಿಸಿದ್ದಾರೆ. ನ್ಯಾಯಾಲಯ ವಿನಾಯಿತಿ ನೀಡಿದ್ದರಿಂದ ಶಾಸಕರು ಸದನಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ಇದು ವಿಪ್‌ ಉಲ್ಲಂಘನೆಯಾಗುವುದಿಲ್ಲ ಎಂದು ವಾದ ಮಂಡಿಸಿದರು.

ಅಲ್ಲದೆ 'ರಾಜೀನಾಮೆಯನ್ನು ಸ್ವೀಕರಿಸದೆ, ರಾಜೀನಾಮೆ ಸ್ವಯಂಪ್ರೇರಿತ‌ ಅಲ್ಲ. ಇತರರ ಪ್ರಭಾವಕ್ಕೆ‌ ಒಳಗಾಗಿದ್ದಾರೆ ಎಂದು ಸ್ಪೀಕರ್‌ ಯಾಕೆ‌ ಹೇಳುತ್ತಾರೆ? ರಾಜೀನಾಮೆ‌ ನೀಡುವಂತೆ ಯಾರೂ ಶಾಸಕರನ್ನು ಬೆದರಿಸಿಲ್ಲ. ಅಲ್ಲದೆ, ರಾಜೀನಾಮೆ‌ ನೀಡುವುದು ಶಾಸಕರ ವಿವೇಚನೆಗೆ ಬಿಟ್ಟ ವಿಚಾರ. ಅವರು ಈಗಿರುವ ‌ಪಕ್ಷದಿಂದ ಬೇಸತ್ತಿರಬಹುದು, ಬೇರೆ ಪಕ್ಷ‌‌ಸೇರಲು ಅಣಿಯಾಗಿರಬಹುದು ಅಥವಾ ತಾವೇ ಒಂದು ಪಕ್ಷ‌‌ ಸ್ಥಾಪಿಸಲೂಬಹುದು ಅಲ್ಲವೇ? ಆದರೂ ರಾಜೀನಾಮೆ ಸ್ವೀಕರಿಸದೆ ಅನರ್ಹಗೊಳಿಸಿದ್ದು ಸರಿಯಲ್ಲ. ಚುನಾಯಿತರನ್ನು  ಅನರ್ಹಗೊಳಿಸಲು ಅನೇಕ‌‌ ನಿಯಮಗಳೂ, ಕಾರಣಗಳೂ ಇವೆ. ಆದರೆ, ನಿಯಮವನ್ನೇ ಉಲ್ಲಂಘಿಸಿ ಅನರ್ಹಗೊಳಿಸಿದರೆ ಹೇಗೆ? ರಾಜೀನಾಮೆ‌ ನೀಡುವವರು ಪೂರ್ವಾಪರ ಆಲೋಚಿಸಿ‌ ನೀಡುತ್ತಾರೆ. ಆದರೂ ಬೇರೆ ಕಾರಣ‌ ನೀಡಿ‌‌ ರಾಜೀನಾಮೆ‌‌ ತಿರಸ್ಕರಿಸಿ ಅನರ್ಹಗೊಳಿಸಿರುವುದು ಸರಿಯಲ್ಲ. ರಾಜೀನಾಮೆ ತಿರಸ್ಕರಿಸಲೂ ಸಮರ್ಪಕ ಉತ್ತರ ನೀಡಲಾಗಿಲ್ಲ. ಚುನಾವಣೆಗೆ ಸ್ಪರ್ಧಿಸದಂತೆ ಸೂಚಿಸಿರುವುದೂ ಸರಿಯಲ್ಲ. ಕೂಡಲೇ ಚುನಾವಣೆ ಪ್ರಕ್ರಿಯೆಯನ್ನು ಎರಡರಿಂದ ಮೂರು ತಿಂಗಳು ಮುಂದೂಡಬೇಕು.ಇಲ್ಲವೇ  ತಡೆ ನೀಡಬೇಕು. ಅಥವಾ ಸ್ಪರ್ಧೆಗೆ ಅವಕಾಶ‌ ನೀಡಬೇಕು ಎಂದು ಹೇಳಿದರು.

ಅಂತೆಯೇ ಇವರ ಮೇಲೆ ಪಕ್ಷವಿರೋಧಿ ಚಟುವಟಿಕೆ ಆರೋಪ ಹೊರಿಸುವುದು ಸರಿಯಲ್ಲ. ಅಪರೂಪದ ಪ್ರಕರಣಗಳಲ್ಲಿ ಚುನಾವಣೆಗೆ ತಡೆ ನೀಡಲಾಗಿದೆ. 2015ರಲ್ಲಿ ಹೈದರಾಬಾದ್‌ ಉಚ್ಚ ನ್ಯಾಯಾಲಯ ತಡೆ ನೀಡಿತ್ತು.  ಸಂವಿಧಾನದ 361/b ವಿಧಿ ಪ್ರಕಾರ ಅನರ್ಹ ಶಾಸಕರು ಲಾಭದಾಯಕ ಹುದ್ದೆ ಹೊಂದುವಂತಿಲ್ಲ. ಇದರಲ್ಲಿ ಪಕ್ಷಾಂತರದ ಬಗ್ಗೆ ಉಲ್ಲೇಖಿಸಿಲ್ಲ. ಅನರ್ಹತೆ ಅರ್ಜಿ ವಿಚಾರಣೆ ನ್ಯಾಯಾಲಯದಲ್ಲಿ ಬಾಕಿ ಇರುವಂತಹ ಸಂದರ್ಭದಲ್ಲಿಯೇ ಚುನಾವಣೆ ಘೋಷಣೆಯಾಗಿದೆ. ಸ್ಪೀಕರ್‌ 2023ರವರೆಗೆ ಸ್ಪರ್ಧಿಸುವಂತಿಲ್ಲ ಎಂದಿರುವುದರಿಂದ ಉಪಚುನಾವಣೆಗೆ ತಡೆ ನೀಡಬೇಕು ಎಂದು ಪೀಠಕ್ಕೆ ರೋಹಟಗಿ ಮನವಿ ಮಾಡಿದರು.

ಸುಮಾರು ಒಂದೂವರೆ ತಾಸಿಗೂ ಹೆಚ್ಚು ಕಾಲ ಅನರ್ಹ ಶಾಸಕರ ಪರ ವಾದ ಮಂಡಿಸಿದ ಮುಕುಲ್‌ ರೋಹಟಗಿ, ಸಂಸದ ಉಮೇಶ ಜಾಧವ್‌ ರಾಜೀನಾಮೆ ವಿಚಾರವನ್ನು ಉಲ್ಲೇಖಿಸಿದರು. ಜಾಧವ್‌ ಅವರ ರಾಜೀನಾಮೆ ಸ್ವೀಕರಿಸಿ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸ್ಪೀಕರ್‌ ಆಗಿದ್ದ ರಮೇಶ್‌ ಕುಮಾರ್‌ ಅನುಕೂಲ ಮಾಡಿಕೊಟ್ಟಿದ್ದಾರೆ. ಆದರೆ ಈ ಶಾಸಕರ ವಿಚಾರದಲ್ಲಿ ಮಾತ್ರ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಸರ್ಕಾರವನ್ನು ಉಳಿಸುವ ಪ್ರಯತ್ನವನ್ನು ಸ್ಪೀಕರ್‌ ಮೊದಲು ಮಾಡಿದ್ದರು. ರಾಜೀನಾಮೆ ಹಿಂಪಡೆಯಲು ಶಾಸಕರ ಮೇಲೆ ಅನರ್ಹತೆಯ ಅಸ್ತ್ರ ಪ್ರಯೋಗಿಸಲಾಗಿದೆ. ಶಾಸಕರು ಮುಂಬೈಗೆ ವಿಶೇಷ ವಿಮಾನದಲ್ಲಿ ಹೋಗಿದ್ದರು ಎನ್ನಲು ಇವರಿಗೆ ಯಾವುದೇ ಹಕ್ಕು ಇಲ್ಲ. ಸರ್ಕಾರದ ಬಗ್ಗೆ ಸದನದಲ್ಲಿ ತೀರ್ಮಾನವಾಗಬೇಕೇ ಹೊರತು ಸ್ಪೀಕರ್‌ ಇದರಲ್ಲಿ ಮಧ್ಯಪ್ರವೇಶಿಸುವಂತಿಲ್ಲ. ಆದರೆ ರಮೇಶ ಕುಮಾರ್‌ ನಿಯಮವನ್ನು ಮೀರಿ ಹದಿನೇಳು ಶಾಸಕರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದಾರೆ ಎಂದು ದೂರಿದರು.

ಅನರ್ಹ ಶಾಸಕ ಸುಧಾಕರ್‌ ಪರ ವಕೀಲ ಸುಂದರಂ ವಾದ ಮಂಡಿಸಿ, ತಮ್ಮ ಕಕ್ಷಿದಾರರು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಇತರೆ ಪಕ್ಷದ ಜೊತೆಗಾಗಲೀ ಗುರುತಿಸಿಕೊಂಡಿಲ್ಲ. ಆ ಸರ್ಕಾರದ ನಡೆಯಿಂದ ಬೇಸತ್ತು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರು ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆಯನ್ನು ನೀಡಿರಲಿಲ್ಲ. ಸಂವಿಧಾನದ ಪ್ರಕಾರವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸುಧಾಕರ್‌ ಚುನಾವಣೆಗೆ ಸ್ಪರ್ಧೆ ಬಯಸಿದ್ದು, ಇದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ತ್ರಿಸದಸ್ಯ ಪೀಠಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.

'ಪಕ್ಷವನ್ನು ಬಿಟ್ಟರೆ ಅಥವಾ ಪಕ್ಷವಿರೋಧಿ ಚಟುವಟಿಕೆ ನಡೆಸಿದರೆ ಮಾತ್ರ ಪಕ್ಷಾಂತರ‌ ನಿಷೇಧ ಕಾಯ್ದೆ‌ ಅಡಿ ಕ್ರಮ‌ ಕೈಗೊಳ್ಳಬಹುದು.‌ ಆದರೆ, ಸ್ಪೀಕರ್‌ ಈ ಯಾವ ಚಟುವಟಿಕೆ ಇಲ್ಲದೆಯೇ ಅನರ್ಹಗೊಳಿಸಿದ್ದಾರೆ. ಸುಧಾಕರ್‌ ಪಕ್ಷವಿರೋಧಿ ಚಟುವಟಿಕೆ ಮಾಡಿಲ್ಲ, ಮೋಸ ಮಾಡಿಲ್ಲ. ರಾಜೀನಾಮೆ ಕೊಟ್ಟ ತಕ್ಷಣ ಪಕ್ಷ ತ್ಯಜಿಸಿದಂತಲ್ಲ. ಪಕ್ಷವನ್ನು ತ್ಯಜಿಸುವುದು ಯಾವುದೇ ಪಾಪ ಅಲ್ಲ. ಸರ್ಕಾರದ ಮೇಲೆ ವಿಶ್ವಾಸ ಇಲ್ಲದಿದ್ದರೆ ಹೊರ ಬರಬಹುದು. ಶಾಸಕ‌ ರಾಜೀನಾಮೆ‌ ನೀಡಿ ಬೇರೆ ಪಕ್ಷ‌ ಸೇರಬಹುದು.‌ ಸಂದರ್ಭಾನುಸಾರ‌ ತೀರ್ಮಾನ ಕೈಗೊಳ್ಳಬೇಕಾಗುತ್ತದೆ.‌ ಇತರರನ್ನು ಹಿಂಬಾಲಿಸಲು ನಾವು ಕುರಿಗಳಲ್ಲ. ನಾವು ರಾಜೀನಾಮೆ‌ ನೀಡಿದ್ದೇವೆ ಎಂದರೆ ಕಳಂಕಿತರು‌‌ ಎಂಬ ಅರ್ಥವಲ್ಲ. ರಾಜೀನಾಮೆ ನೀಡಿದ ಬಳಿಕ ನಾವು ಸ್ವತಂತ್ರರು. ನಾವು ಸ್ವತಂತ್ರವಾಗಿ ಅಥವಾ ಬೇರಾವುದೇ ಪಕ್ಷದ ಚಿಹ್ನೆಯ ಅಡಿ ಚುನಾವಣೆಗೆ ಸ್ಪರ್ಧೆ ಮಾಡಬಹುದು ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com