

ಬೆಂಗಳೂರು: ಬಿಜೆಪಿಯವರು ಚಾಯ್ ಪೇ ಚರ್ಚಾ ಮಾಡಿದ ಹಾಗೆ ಕಾಂಗ್ರೆಸ್ ನಾಯಕರು ಕಾಫಿ ಹೀರುತ್ತಾ ಮುಖ್ಯಮಂತ್ರಿಯ ಬಗ್ಗೆ ಚರ್ಚೆ ಮಾಡಿದರೆ ಅದರಲ್ಲಿ ತಪ್ಪೇನಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಪ್ರಶ್ನಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ದಲಿತ ನಾಯಕರು ಪದೇ ಪದೇ ಪಕ್ಷದ ವರಿಷ್ಠರನ್ನು ಭೇಟಿಯಾಗುತ್ತಿದ್ದು, ಈ ಬೆಳವಣಿಗೆ ನಾಯಕತ್ವ ಬದಲಾವಣೆ ಕುರಿತು ಊಹಾಪೋಹಗಳು ತೀವ್ರಗೊಳ್ಳುವಂತೆ ಮಾಡಿದೆ.
ಈ ಹಿನ್ನೆಲೆಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್ ಅವರು, ಚರ್ಚೆಗಳಾದರೆ ಒಳ್ಳೆಯದಲ್ಲವೇ. ಚಾಯ್ ಪೇ ಚರ್ಚೆ ಅಂತ ಕಾರ್ಯಕ್ರಮ ಇದೆಯಲ್ಲ. ಅದೇ ರೀತಿ ಕಾಫಿ ಪೇ ಚರ್ಚೆ. ನಾವಿಬ್ಬರು ಕುಳಿತುಕೊಂಡು ಎರಡು ಲೋಟ ಕಾಫಿ ಕುಡಿದರೆ ಮುಖ್ಯಮಂತ್ರಿ ಮಾಡಿ ಬಿಡುತ್ತಾರೆ ಎನ್ನುವುದಾದರೆ ಬಹಳ ಚರ್ಚೆಗಳಾಗುತ್ತಿದ್ದವು. ಬಹಳಷ್ಟು ಕಾಫಿ ಖರ್ಚಾಗುತ್ತಿತ್ತು.
ನಾವು ಮಾತನಾಡುವುದರಿಂದ ಏನು ಆಗುವುದಿಲ್ಲ. ನಿರ್ಧಾರ ಎಲ್ಲ ಹೈಕಮಾಂಡ್ ಮಾಡುತ್ತದೆ. ಅಂತಹ ಸನ್ನಿವೇಶ ಈಗ ಬಂದಿಲ್ಲ. ಸನ್ನಿವೇಶ ಬಂದಾಗ ಚರ್ಚೆ ಮಾಡೋಣ, ಅದರ ಬಗ್ಗೆ ಕೂಗು ಹಾಕೋಣ, ಬೇಡಿಕೆ ಇಡೋಣ. ಬೇಕಾದದ್ದು ಮಾಡೋಣ. ಆದರೆ, ಈಗ ಸನ್ನಿವೇಶ ಬಂದಿಲ್ಲವಲ್ಲ. ಮುಖ್ಯಮಂತ್ರಿ ರಾಜೀನಾಮೆ ಕೊಡುವ ಅಗತ್ಯವು ಇಲ್ಲ ಎಂದು ಸ್ಪಷ್ಟಪಡಿಸಿದರು.