CM ಕುರ್ಚಿಯೇ ಅಲುಗಾಡುತ್ತಿದೆ, ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತವೆಂದು ಹೇಗೆ ಹೇಳುತ್ತಾರೆ..?: ಆರ್.ಅಶೋಕ್

“ಐದು ವರ್ಷ ಪೂರ್ಣಾವಧಿ ಸಿಎಂ ಆಗಿ ಮುಂದುವರಿಯುವುದೇ ಖಚಿತವಿಲ್ಲದ ನಾಯಕರು ಕಾಂಗ್ರೆಸ್ ಗೆಲುವಿನ ಭರವಸೆ ಹೇಗೆ ನೀಡುತ್ತಾರೆ?”
 Siddaramaiah, R Ashoka
ಸಿದ್ದರಾಮಯ್ಯ, ಆರ್.ಅಶೋಕ್
Updated on

ದಾವಣಗೆರೆ: ದಾವಣಗೆರೆ ದಕ್ಷಿಣ ಉಪಚುನಾವಣೆಯ ಹಿನ್ನಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಮಾತಿನ ಸಮರ ತೀವ್ರಗೊಂಡಿದೆ. ವಿಪಕ್ಷ ನಾಯಕ ಆರ್. ಅಶೋಕ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್ ಅವರು, ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಬಗ್ಗೆ ಸಿಎಂ ನೀಡಿರುವ ಹೇಳಿಕೆ ಕುರಿತು ಟೀಕೆ ವ್ಯಕ್ತಪಡಿಸಿದರು.

“ಐದು ವರ್ಷ ಪೂರ್ಣಾವಧಿ ಸಿಎಂ ಆಗಿ ಮುಂದುವರಿಯುವುದೇ ಖಚಿತವಿಲ್ಲದ ನಾಯಕರು ಕಾಂಗ್ರೆಸ್ ಗೆಲುವಿನ ಭರವಸೆ ಹೇಗೆ ನೀಡುತ್ತಾರೆ?” ಎಂದು ಪ್ರಶ್ನಿಸಿದ್ದಾರೆ.

ಇದಲ್ಲದೆ, ರಾಜ್ಯದಲ್ಲಿ ಜಾತಿ ಗಣತಿ ನಡೆಸಿರುವುದನ್ನು ತೀವ್ರವಾಗಿ ವಿರೋಧಿಸಿದ ಅವರು, ಸಿಎಂ ‘ಜಾತಿವಾದಿ’ ಎಂದು ಆರೋಪಿಸಿದರು.

17 ಬಜೆಟ್‌ ಮಂಡಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಣ್ಕಟ್ಟು ವಿದ್ಯೆ ಕಲಿತಿದ್ದಾರೆ. ಅಭಿವೃದ್ಧಿಗೆ ಹಣ ನೀಡದೆ, ಗ್ಯಾರಂಟಿಗಳನ್ನೂ ಸರಿಯಾಗಿ ಅನುಷ್ಠಾನ ಮಾಡದೆ ಆರ್ಥಿಕ ಶಿಸ್ತು ಪಾಲಿಸುತ್ತಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಶಿಸ್ತೇ ಇಲ್ಲ. ಒಂದೇ ಒಂದು ಅಭಿವೃದ್ಧಿ ಕಾರ್ಯವನ್ನೂ ಮಾಡಿಲ್ಲ. ಸುಳ್ಳು ಹೇಳಿಕೊಂಡೇ ಮೂರು ವರ್ಷ ಕಳೆದಿದೆ.

 Siddaramaiah, R Ashoka
'ಸಿಎಂ ಸಿದ್ದರಾಮಯ್ಯ ತಮ್ಮ ಮಗನನ್ನು ವಸೂಲಿ ಮಾಡಲು ರಾಜಕೀಯಕ್ಕೆ ಕರೆತಂದಿದ್ದಾರೆ': ಹೆಚ್ ಡಿ ಕುಮಾರಸ್ವಾಮಿ

ಸಿದ್ದರಾಮಯ್ಯ ಅವರಿಗೆ ಸುಳ್ಳುರಾಮಯ್ಯ ಎಂಬ ಬಿರುದು ಕೊಡಬೇಕು. ಗ್ಯಾರಂಟಿಗಳ ವಿಚಾರವಾಗಿಯಂತೂ ಅವರು ಸುಳ್ಳಿನ ಪುಂಗಿ ಊದುತ್ತಿದ್ದಾರೆ. ಸಾಲದ ರಾಮಯ್ಯ ಅಲ್ಲ ಅನ್ನದರಾಮಯ್ಯ ಎಂದು ಹೇಳಿದರು. ಇಂದಿರಾ ಕಿಟ್‌ ಕೊಡುತ್ತೇವೆ ಎಂದರು ಎಲ್ಲಿ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡುತ್ತಿರುವುದು ಕೇಂದ್ರ ಸರ್ಕಾರ. ಆದರೆ, ಚೀಲ ಮಾತ್ರ ಸಿದ್ದರಾಮಯ್ಯ ಅವರದ್ದಾಗಿದೆ. ಕೇಂದ್ರ ಸರ್ಕಾರದ ಅಕ್ಕಿಗೆ ಕನ್ನ ಹಾಕುವ ಇವರು ಕನ್ನರಾಮಯ್ಯ ಎಂದು ಟೀಕೆ ಮಾಡಿದರು.

ಗ್ಯಾರಂಟಿಗಳನ್ನು ಬಿಜೆಪಿಯವರು ವಿರೋಧಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ನಾವು ಗ್ಯಾರಂಟಿ ವಿರೋಧಿಗಳಲ್ಲ. ಆದರೆ, ಗ್ಯಾರಂಟಿಗಳನ್ನು ಸರಿಯಾಗಿ ಅನುಷ್ಠಾನ ಮಾಡಿಲ್ಲ ಎಂದು ಹೇಳುತ್ತಿದ್ದೇವೆ. ಗ್ಯಾರಂಟಿ ಹೆಸರಲ್ಲಿ ಕಾಂಗ್ರೆಸ್‌ ಮುಖಂಡರಿಗೆ ಗಂಜಿ ಕೇಂದ್ರ ಮಾಡಿದ್ದೀರಿ. ಗ್ಯಾರಂಟಿ ಯೋಜನೆಗೆ ಐವರಿಗೆ ಸಂಪುಟ ದರ್ಜೆ ಸೌಲಭ್ಯ ಕೊಡುತ್ತಿದ್ದೀರಿ. ರಾಜ್ಯದ ತೆರಿಗೆ ಹಣವನ್ನು ಹೀಗೆ ಬಳಸಬಹುದೇ ಎಂದು ಪ್ರಶ್ನಿಸಿದರು.

ಅಭಿವೃದ್ಧಿಗೆ ಹಣ ಇಲ್ಲ ಎಂದು ಕಾಂಗ್ರೆಸ್‌ ಮುಖಂಡರೇ ಒಪ್ಪಿಕೊಂಡಿದ್ದಾರೆ. ಆರ್.ವಿ.ದೇಶಪಾಂಡೆ, ಬಿ.ಆರ್‌.ಪಾಟೀಲ್‌, ರಾಜು ಕಾಗೆ ಹಾಗೂ ಬಸವರಾಜ ರಾಯರೆಡ್ಡಿ ಅವರೇ ಸರ್ಕಾರದ ವಿರುದ್ಧ ಮಾತನಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಬಿಟ್ಟು ಬಿಜೆಪಿ ತೆಗಳುವುದೇ ಸಿದ್ದರಾಮಯ್ಯ ಅವರಿಗೆ ಕೆಲಸವಾಗಿದೆ. ಸಿದ್ದರಾಮಯ್ಯ ಅವರಿಗೆ ಧಮ್ಮು, ತಾಕತ್ತು ಇದ್ದರೆ ಬಿಜೆಪಿ ತೆಗಳುವುದು ಬಿಟ್ಟು ನಿಮ್ಮ ಪಕ್ಷದವರಿಗೆ ನೋಟಿಸ್‌ ನೀಡಲಿ ಎಂದು ಸವಾಲು ಹಾಕಿದರು.

ಈ ನಡುವೆ ಬಿಜೆಪಿ ಪರವಾಗಿ ಉಪಚುನಾವಣಾ ಪ್ರಚಾರಕ್ಕೆ ಸಿ.ಟಿ. ರವಿ ಮತ್ತು ಬಿ. ಶ್ರೀರಾಮುಲು ಕೂಡ ಸೇರ್ಪಡೆಯಾಗಿ ಪ್ರಚಾರವನ್ನು ತೀವ್ರಗೊಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com