

ಬೆಂಗಳೂರು: ತಾವು ಯಾವುದೇ ಬಂಡಾಯ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತ. ಕಾಂಗ್ರೆಸ್ ನನಗೆ ದೇವಾಲಯ ಇದ್ದಂತೆ, ಕಾಂಗ್ರೆಸ್ ನಮ್ಮ ಗರ್ಭಗುಡಿ. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಡಿ.ಕೆ. ಶಿವಕುಮಾರ್ ಹಾಗೂ ಬಿ.ಕೆ. ಹರಿಪ್ರಸಾದ್ ನಮ್ಮ ನಾಯಕರು.
ಸಾಮಾನ್ಯನಾದ ನನಗೆ ಪಕ್ಷ ಟಿಕೆಟ್ ನೀಡಿ ಶಾಸಕನನ್ನಾಗಿ ಮಾಡಿದೆ. ಮಧ್ಯಾಹ್ನ ನಡೆಯುವ ಸಭೆಗೆ ನಾನು ಹೋಗುವುದಿಲ್ಲ. ನಮ್ಮ ನಾಯಕರು ಏನು ಹೇಳುತ್ತಾರೋ ಅದನ್ನೇ ನಾನು ಪಾಲಿಸುತ್ತೇನೆ ಎಂದರು.
ಜೈ ಕಾಂಗ್ರೆಸ್. ನಾನು ಇನ್ನೂ 30 ವರ್ಷ ಕಾಯಲು ಸಿದ್ಧನಿದ್ದೇನೆ. ನನಗೆ ವಯಸ್ಸಿದೆ, ಅವಕಾಶಕ್ಕಾಗಿ ಕಾಯುತ್ತೇನೆ. ಸಭೆ ನಡೆಸುತ್ತಿರುವವರಿಂದ ನನಗೆ ಯಾವುದೇ ಕರೆ ಬಂದಿಲ್ಲ. ನಾನು ಪಕ್ಷಕ್ಕೆ ನಿಷ್ಠನಾಗಿದ್ದೇನೆ. ಆದ್ದರಿಂದ ಆ ಸಭೆಗೆ ಹೋಗುವುದಿಲ್ಲ ಎಂದು ಹೇಳಿದರು.
ಸಚಿವ ಸ್ಥಾನ ಕುರಿತು ಮಾತನಾಡಿದ ಅವರು, ಮಂತ್ರಿ ಆಗಬೇಕು ಎಂಬ ಆಸೆ ಇರುವುದು ಸಹಜ. ಆದರೆ ಈಗಲೇ ಸಿಗಬೇಕು ಎಂಬ ಹಠ ಇಲ್ಲ. ಹಿರಿಯರಿಗೆ ಅವಕಾಶ ಸಿಕ್ಕಿದೆ. 2028ರ ಚುನಾವಣೆಯಲ್ಲಿ ಕಾಂಗ್ರೆಸ್ 150 ಸ್ಥಾನಗಳನ್ನು ಗೆಲ್ಲಲಿದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಇನ್ನೂ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಪ್ರದೀಪ್ ಈಶ್ವರ್, ಅವರಿಗೆ ಮಾಡೋಕೆ ಬೇರೆ ಕೆಲಸ ಇಲ್ಲ. ಹೀಗಾಗಿ ಮಾತಾಡ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಅಸಮರ್ಥ. ವಿಜಯೇಂದ್ರ ನಿನ್ನ ಯೋಗ್ಯೆತೆಗೆ ಯತ್ನಾಳ್ ಬಾಯಿ ಮುಚ್ಚಿಸೋಕೆ ಆಗಲಿಲ್ಲ,ಬಂಡಾಯವನ್ನು ಶಮನ ಮಾಡೋಕೆ ಆಗಲಿಲ್ಲ ಎಂದು ಲೇವಡಿ ಮಾಡಿದರು.
ಛಲವಾದಿ ನಾರಾಯಣಸ್ವಾಮಿ ವಿರುದ್ಧ ಹರಿಹಾಯ್ದ ಪ್ರದೀಪ್ ಈಶ್ವರ್ ಅರು ಕೋತಿ ಇದ್ದ ಹಾಗೆ. ಯಾವ ಮರದಲ್ಲಿ ಹಣ್ಣು ಇರುತ್ತೋ, ಆ ಮರಕ್ಕೆ ನೆಗೆಯುತ್ತಿರುತ್ತಾರೆ ವ್ಯಂಗ್ಯವಾಡಿದರು.