ಕರ್ನಾಟಕ ಕಾಂಗ್ರೆಸ್‌ನಲ್ಲಿ ಮತ್ತೊಂದು ಪವರ್ ಶಿಫ್ಟ್: ಅಹಿಂದ ಸಮೀಕರಣಕ್ಕೆ ಮಾಸ್ಟರ್‌ಪ್ಲ್ಯಾನ್; ಸತೀಶ್‌ ಜಾರಕಿಹೊಳಿಗೆ KPCC ಜವಾಬ್ದಾರಿ?

ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವ ಸಾಧ್ಯತೆ ಗಟ್ಟಿಯಾಗುತ್ತಿದ್ದಂತೆ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.
Dk Shivakumar And satish jarkiholi
ಡಿ.ಕೆ ಶಿವಕುಮಾರ್ ಮತ್ತು ಸತೀಶ್ ಜಾರಕಿಹೊಳಿ
Updated on

ಬೆಳಗಾವಿ: ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ತೀವ್ರಗೊಂಡಿರುವ ನಡುವೆಯೇ, ರಾಜ್ಯ ಕಾಂಗ್ರೆಸ್ ಸಂಘಟನೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಗೂ ಕಾಂಗ್ರೆಸ್ ಹೈಕಮಾಂಡ್ ಸಿದ್ಧತೆ ನಡೆಸಿದೆ ಎನ್ನಲಾಗುತ್ತಿದೆ.

ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವ ಸಾಧ್ಯತೆ ಗಟ್ಟಿಯಾಗುತ್ತಿದ್ದಂತೆ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.

ಕಾಂಗ್ರೆಸ್ ವಲಯದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಕೇವಲ ಸಂಘಟನಾ ಜವಾಬ್ದಾರಿಯಾಗಿ ಮಾತ್ರವಲ್ಲ, ಮುಖ್ಯಮಂತ್ರಿ ಹುದ್ದೆಗೆ ಮೆಟ್ಟಿಲೆಂದೇ ಪರಿಗಣಿಸಲಾಗುತ್ತದೆ.

ರಾಜ್ಯ ರಾಜಕೀಯ ಇತಿಹಾಸದಲ್ಲೂ ಪಕ್ಷವನ್ನು ಚುನಾವಣೆಯಲ್ಲಿ ಗೆಲುವಿನತ್ತ ಕೊಂಡೊಯ್ದ ಹಲವು ನಾಯಕರು ನಂತರ ಮುಖ್ಯಮಂತ್ರಿ ಸ್ಥಾನಕ್ಕೇರಿರುವ ಉದಾಹರಣೆಗಳಿವೆ.

ಈ ಪೈಕಿ ಸತೀಶ್ ಜಾರಕಿಹೊಳಿ ಹೆಸರು ಅತ್ಯಂತ ಬಲವಾಗಿ ಕೇಳಿಬರುತ್ತಿದೆ. ಉತ್ತರ ಕರ್ನಾಟಕದ ಪ್ರಭಾವಿ ಹಿಂದುಳಿದ ವರ್ಗದ ನಾಯಕನಾಗಿರುವ ಅವರು, ಅಹಿಂದ ರಾಜಕಾರಣದಲ್ಲಿ ತಮ್ಮದೇ ಪ್ರಭಾವ ಹೊಂದಿದ್ದಾರೆ. ಕಾಂಗ್ರೆಸ್ ಸಂಘಟನೆಯಲ್ಲಿ ನೆಲಮಟ್ಟದ ಹಿಡಿತ, ಹಿಂದುಳಿದ ವರ್ಗಗಳಲ್ಲಿ ಪ್ರಭಾವ ಮತ್ತು ಉತ್ತರ ಕರ್ನಾಟಕದಲ್ಲಿ ಸಂಘಟನೆ ಬಲಪಡಿಸುವ ಸಾಮರ್ಥ್ಯದಿಂದ ಅವರು ಹೈಕಮಾಂಡ್ ಗಮನ ಸೆಳೆದಿದ್ದಾರೆ ಎನ್ನಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, “ಪಕ್ಷ ಯಾವ ಜವಾಬ್ದಾರಿ ನೀಡಿದರೂ ಸ್ವೀಕರಿಸಲು ಸಿದ್ಧ” ಎಂದು ತಿಳಿಸಿದ್ದಾರೆ. ಆದರೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಅಂತಿಮ ತೀರ್ಮಾನವಾದ ಬಳಿಕವೇ ಕೆಪಿಸಿಸಿ ಹುದ್ದೆಯ ಕುರಿತು ಸ್ಪಷ್ಟತೆ ಸಿಗಲಿದೆ ಎಂದು ಅವರು ಹೇಳಿದ್ದಾರೆ.

Dk Shivakumar And satish jarkiholi
ರಾಜ್ಯ ರಾಜಕೀಯದಲ್ಲಿ ಸಂಚಲನ: ಸಿಎಂ ರಾಜೀನಾಮೆ ಚರ್ಚೆ ನಡುವಲ್ಲೇ ದಿಢೀರ್ ಮುಂಬೈಗೆ ತೆರಳಿದ ರಾಜ್ಯಪಾಲ, ಹೆಚ್ಚಿದ ಕುತೂಹಲ..!

ಕಾಂಗ್ರೆಸ್ ಒಳವಲಯದ ಮಾಹಿತಿ ಪ್ರಕಾರ, 2023ರ ವಿಧಾನಸಭಾ ಚುನಾವಣೆಯ ಬಳಿಕ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಅಧಿಕಾರ ಹಂಚಿಕೆ ಕುರಿತ ಒಪ್ಪಂದ ನಡೆದಿತ್ತು ಎನ್ನಲಾಗಿದೆ. ಆ ಸಮಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ಡಿಕೆ ಶಿವಕುಮಾರ್ ಅವರಿಗೆ ಲೋಕಸಭಾ ಚುನಾವಣೆಯವರೆಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಮುಂದುವರಿಯಲಿದೆ ಎಂದು ಭರವಸೆ ನೀಡಿತ್ತು. ಆದರೆ, ಲೋಕಸಭಾ ಚುನಾವಣೆಯ ನಂತರ ಸರ್ಕಾರ ಮತ್ತು ಸಂಘಟನೆಯ ಅಧಿಕಾರವನ್ನು ಪ್ರತ್ಯೇಕಿಸಬೇಕು ಎಂಬ ಒತ್ತಡ ಸಿದ್ದರಾಮಯ್ಯ ಬಣದಿಂದ ಹೆಚ್ಚಾಗಿತ್ತು ಎಂದು ಹೇಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ, ಅಧಿಕಾರ ಹಂಚಿಕೆ ಕುರಿತು ಸ್ಪಷ್ಟತೆ ಸಿಗುವವರೆಗೂ ಕೆಪಿಸಿಸಿ ಹುದ್ದೆ ತ್ಯಜಿಸುವುದಿಲ್ಲ ಎಂದು ಡಿಕೆ ಶಿವಕುಮಾರ್ ಪಕ್ಷದ ನಾಯಕರಿಗೆ ತಿಳಿಸಿದ್ದರು ಎನ್ನಲಾಗಿದೆ.

ಇದೀಗ ಅವರು ಮುಖ್ಯಮಂತ್ರಿಯಾಗುವ ಹಂತಕ್ಕೆ ಬಂದಿರುವುದರಿಂದ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೊಸ ಮುಖ ತರುವ ಚರ್ಚೆ ಅಂತಿಮ ಹಂತ ತಲುಪಿದೆ.

ಸತೀಶ್ ಜಾರಕಿಹೊಳಿ ಅವರು ಬಹುಕಾಲದಿಂದಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಸಕ್ತಿ ತೋರಿಸುತ್ತಿದ್ದರು ಎನ್ನಲಾಗುತ್ತಿದ್ದು, 2028ರ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆಂದು ಮೂಲಗಳು ತಿಳಿಸಿವೆ.

ಈ ಹಿನ್ನೆಲೆ, ಕೆಪಿಸಿಸಿ ಅಧ್ಯಕ್ಷ ಸ್ಥಾನವು ಅವರ ಭವಿಷ್ಯದ ರಾಜಕೀಯ ಪಯಣದಲ್ಲಿ ಮಹತ್ವದ ಹೆಜ್ಜೆಯಾಗಲಿದೆ. ಕಾಂಗ್ರೆಸ್ ಪಕ್ಷಕ್ಕೂ ಅವರ ಆಯ್ಕೆ ಹಲವು ರಾಜಕೀಯ ಲಾಭಗಳನ್ನು ನೀಡಬಹುದು ಎಂಬ ಲೆಕ್ಕಾಚಾರವೂ ಇದೆ.

ಹಿಂದುಳಿದ ವರ್ಗ, ದಲಿತ ಹಾಗೂ ಅಲ್ಪಸಂಖ್ಯಾತ ಸಮುದಾಯಗಳನ್ನು ಒಗ್ಗೂಡಿಸುವ ಜೊತೆಗೆ ಉತ್ತರ ಕರ್ನಾಟಕದಲ್ಲಿ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಸತೀಶ್ ಜಾರಕಿಹೊಳಿ ನೆರವಾಗಬಹುದು ಎಂದು ಪಕ್ಷ ಅಂದಾಜಿಸಿದೆ.

Dk Shivakumar And satish jarkiholi
ಅಸಮಾಧಾನ ತಣಿಸಲು ಕಾಂಗ್ರೆಸ್ ಮಾಸ್ಟರ್‌ಪ್ಲ್ಯಾನ್: 4 DCM ಹುದ್ದೆ ಸೃಷ್ಟಿಗೆ ಚಿಂತನೆ; ಜಮೀರ್, ಪ್ರಿಯಾಂಕ್ ಖರ್ಗೆ, ಎಂಬಿ ಪಾಟೀಲ್ ಹೆಸರು ಫೈನಲ್?

ಇದರ ನಡುವೆಯೇ ಕಾಂಗ್ರೆಸ್ ಹೈಕಮಾಂಡ್ ರಾಜ್ಯದಲ್ಲಿ ಬಹು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ಕುರಿತಂತೆಯೂ ಚರ್ಚಿಸುತ್ತಿದೆ ಎನ್ನಲಾಗಿದೆ.

ಲಿಂಗಾಯತ, ದಲಿತ, ಮುಸ್ಲಿಂ ಹಾಗೂ ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಕನಿಷ್ಠ ಮೂರು ಅಥವಾ ನಾಲ್ಕು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ.

ಈ ಮೂಲಕ ನಾಯಕತ್ವ ಬದಲಾವಣೆಯಿಂದ ಉಂಟಾಗಬಹುದಾದ ಅಸಮಾಧಾನವನ್ನು ತಣಿಸುವ ಪ್ರಯತ್ನವೂ ಕಾಂಗ್ರೆಸ್ ಮಾಡುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇನ್ನೊಂದೆಡೆ, ಸಿದ್ದರಾಮಯ್ಯ ಅವರ ಸಹಕಾರ ಪಡೆಯುವ ಉದ್ದೇಶದಿಂದ ಅವರ ಪುತ್ರ ಹಾಗೂ ಎಂಎಲ್‌ಸಿ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆಗಳೂ ಚರ್ಚೆಯಲ್ಲಿವೆ.

ಇದೇ ವೇಳೆ ನಡೆಯಲಿರುವ ರಾಜ್ಯಸಭೆ ಚುನಾವಣೆಯೂ ಕಾಂಗ್ರೆಸ್ ಒಳರಾಜಕೀಯ ಚಟುವಟಿಕೆಗೆ ಹೊಸ ತಿರುವು ನೀಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮತ್ತೊಮ್ಮೆ ರಾಜ್ಯಸಭೆ ಅವಕಾಶ ಸಿಗುವ ಸಾಧ್ಯತೆ ಇದ್ದು, ಸಿದ್ದರಾಮಯ್ಯ ಅವರ ಹೆಸರೂ ಕೇಳಿಬರುತ್ತಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆ, ಸತೀಶ್ ಜಾರಕಿಹೊಳಿ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುವ ನಿರ್ಧಾರ ಕಾಂಗ್ರೆಸ್ ಪಕ್ಷದ ಭವಿಷ್ಯದ ನಾಯಕತ್ವ ಸಮೀಕರಣದಲ್ಲಿ ಮಹತ್ವದ ತಿರುವಾಗಬಹುದು ಎಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿ ವ್ಯಕ್ತವಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com